ಶನಿವಾರ, ಜುಲೈ 31, 2021
28 °C
ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ಪ್ರತಿಭಟನೆ

ರಂಗ ಮಂದಿರ ವಿರೂಪಗೊಳಿಸದಿರಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ಪಟ್ಟಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಬಯಲು ರಂಗಮಂದಿರವನ್ನು ವಿರೂಪಗೊಳಿಸಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಸಚಿವ ಎಚ್. ಆಂಜನೇಯ, ‘ಅನಾದಿ ಕಾಲದಿಂದಲೂ ಇಲ್ಲಿ ಬಯಲು ರಂಗಮಂದಿರ ಇತ್ತು. ರಾಜಕೀಯ, ಧಾರ್ಮಿಕ ಸಮಾವೇಶಗಳು ಇಲ್ಲಿ ನಡೆಯುತ್ತವೆ. ಶಾಲಾ, ಕಾಲೇಜುಗಳ ವಾರ್ಷಿಕೋತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಇದೇ ವೇದಿಕೆಯ ಮೇಲೆ ನಡೆಯುತ್ತವೆ. ಪ್ರತಿ ವರ್ಷ ಪಟ್ಟಣದ ಗಣಪತಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಈ ಸ್ಥಳ ಪಟ್ಟಣದ ಹೃದಯ ಭಾಗದಲ್ಲಿ ಇದ್ದು, ಸಾರ್ವಜನಿಕರಿಗೆ ಅನುಕೂಲವಾಗಿದೆ.  ಸಚಿವನಾಗಿದ್ದಾಗ ಬಯಲು ರಂಗಮಂದಿರವನ್ನು ಅಭಿವೃದ್ದಿ ಮಾಡಿದ್ದೆ. ಆದರೆ ಈಗಿನ ಶಾಸಕ ಎಂ.ಚಂದ್ರಪ್ಪ ಬಯಲು ರಂಗಮಂದಿರವನ್ನು ಮುಚ್ಚಿದ ರಂಗಮಂದಿರ ಮಾಡಲು ಹೊರಟಿದ್ದಾರೆ’ ಎಂದು ಆರೋಪಿಸಿದರು.

‘ರಂಗಮಂದಿರದ ಸುತ್ತ ಎತ್ತರದ ಕಾಂಪೌಂಡ್ ನಿರ್ಮಿಸಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಿದರೆ ಒಳಗೆ ಯಾರೂ ಬರುವುದಿಲ್ಲ. ಪಕ್ಕದಲ್ಲೇ ವಾಣಿಜ್ಯ ಮಳಿಗೆ ನಿರ್ಮಿಸಿದ್ದು, ಅವುಗಳನ್ನು ಹರಾಜು ಹಾಕಿದರೆ ಬಾಡಿಗೆ ಹಣ ಬರಲಿದೆ. ಕಾರ್ಯಕ್ರಮ ಇದ್ದಾಗ ಮಾತ್ರ ಸಾರ್ವಜನಿಕರಿಗೆ ಪ್ರವೇಶ ಇರುವಂತೆ ನೋಡಿಕೊಳ್ಳಬೇಕು’ ಎಂದರು.

ಮಾಜಿ ಶಾಸಕ ಎ.ವಿ. ಉಮಾಪತಿ, ‘ಶಾಸಕ ಎಂ. ಚಂದ್ರಪ್ಪ ಯಾರಿಗೂ ಹೇಳದೆ, ಕೇಳದೆ ರಂಗಮಂದಿರ ಮಾರ್ಪಡಿಸಲು ಹೊರಟಿದ್ದಾರೆ. ಅವರು ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕಿತ್ತು. ಹಿಂದಿನಿಂದಲೂ ಪಕ್ಷಾತೀತವಾಗಿ ಬಯಲು ರಂಗಮಂದಿರ ಉಳಿಸಿಕೊಂಡು ಬಂದಿದ್ದೇವೆ. ಅವರಿಗೆ ಆಡಿಟೋರಿಯಂ ಮಾಡುವ ಮನಸ್ಸಿದ್ದರೆ ಬೇರೆ ಜಾಗದಲ್ಲಿ ಮಾಡಲಿ’ ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ. ಹನುಮಂತಪ್ಪ, ಬಾಲು ಪ್ರಕಾಶ್, ಲೋಹಿತ್ ಕುಮಾರ್, ಎಸ್.ಜೆ. ರಂಗಸ್ವಾಮಿ, ಪಾಡಿಗಟ್ಟೆ ಸುರೇಶ್, ಗೋಡೆಮನೆ ಹನುಮಂತಪ್ಪ, ಪಟ್ಟಣ ಪಂಚಾಯಿತಿ ಸದಸ್ಯರಾದ ಬಿ.ಎಸ್. ರುದ್ರಪ್ಪ, ಸಜಿಲ್, ಮನ್ಸೂರ್, ವೈಶಾಖ ಯಾದವ್, ಡಿ. ತಿಮ್ಮಪ್ಪ, ಗಂಗಾಧರ್, ವಕೀಲ ಜಯಣ್ಣ, ಜಗದೀಶ ನಾಡಿಗ್, ಮಜರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು