ಗುರುವಾರ , ಡಿಸೆಂಬರ್ 3, 2020
23 °C
ಉಪನ್ಯಾಸ ಕಾರ್ಯಕ್ರಮದಲ್ಲಿ ರಾಜಸ್ಯಭೆ ಸದಸ್ಯ ಎಲ್.ಹನುಮಂತಯ್ಯ

ದುಷ್ಕರ್ಮಿಗಳನ್ನು ಸರ್ಕಾರ ರಕ್ಷಿಸುತ್ತಿದೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ದುಷ್ಕರ್ಮಿಗಳನ್ನು ಸರ್ಕಾರಗಳು ರಕ್ಷಿಸುತ್ತಿವೆಯೇ? ಜನರ ವಿರುದ್ಧವೇ ದೌರ್ಜನ್ಯ ಎಸಗಲು ಮುಂದಾಗಿವೆಯೇ ಎಂಬ ಅನುಮಾನ ಇತ್ತೀಚಿನ ಕೆಲ ಬೆಳವಣಿಗೆಯಿಂದ ವ್ಯಕ್ತವಾಗುತ್ತಿದೆ’ ಎಂದು ರಾಜಸ್ಯಭೆ ಸದಸ್ಯ ಎಲ್.ಹನುಮಂತಯ್ಯ ಹೇಳಿದರು.

ಐಎಂಎ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ ‌ಜಿಲ್ಲಾ ಘಟಕದಿಂದ ಭಾನುವಾರ ಆಯೋಜಿಸಿದ್ದ ಎಸ್.ಆರ್.ಗುರುನಾಥ್‌ ಅವರ ಸಾಹಿತ್ಯ ಮತ್ತು ಸಂಶೋಧನೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಗುರುನಾಥ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

‘ಉತ್ತರಪ್ರದೇಶದ ಹಾಥರಸ್‌ನಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿಯ ಶವವನ್ನು ರಾತ್ರೋರಾತ್ರಿ ಪೊಲೀಸರು ಸುಟ್ಟುಹಾಕಿದ್ದಾರೆ. ಹಾಗಾದರೆ, ದುಷ್ಕರ್ಮಿಗಳನ್ನು ರಕ್ಷಿಸಲು ಅಲ್ಲಿನ ಸರ್ಕಾರ ಬೆಂಬಲಕ್ಕೆ ನಿಂತಿದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇದು ಸತ್ಯವೆಂದು ಸಾಬೀತಾದರೆ, ಎಂತಹ ಬರ್ಬರ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂಬು ದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೌರ್ಯ, ಅನಾಚಾರ, ದಬ್ಬಾಳಿಕೆ, ಅತ್ಯಾಚಾರ ಇವುಗಳನ್ನು ಬಲವಾಗಿ ಖಂಡಿಸಿ, ಹೋರಾಟ ಮಾಡದಿದ್ದರೆ ನ್ಯಾಯ ಸಿಗುವುದಿಲ್ಲ. ಕಾಲಮಾನದ ಕ್ರೌರ್ಯಗಳಿಗೆ ಕನ್ನಡಿ ಹಿಡಿಯುವ ಕೆಲಸವನ್ನು ಲೇಖಕರು, ಸಾಹಿತಿಗಳು ಮಾಡುತ್ತಿದ್ದಾರೆ. ಅದರಲ್ಲಿ ಎಸ್.ಆರ್.ಗುರುನಾಥ್‌ ಕೂಡ ಒಬ್ಬರಾಗಿದ್ದರು’ ಎಂದು ಸ್ಮರಿಸಿದರು.

‘ಟೀಕೆ, ಮೆಚ್ಚುಗೆ ಎರಡನ್ನೂ ಸಮನಾಗಿ ಯಾರು ಸ್ವೀಕರಿಸುತ್ತಾರೋ ಅಂತಹವರು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗುತ್ತಾರೆ. ಆ ಗುಣ ಗುರುನಾಥ್‌ ಅವರಲ್ಲೂ ಇತ್ತು. ಮೃತಪಟ್ಟ ಮೇಲೆ ಹೊಗಳುವ ಬದಲು ಬದುಕಿದ್ದಾಗಲೇ ಅವರ ಜೀವನದ ಬಗ್ಗೆ ಕನ್ನಡಿ ಹಿಡಿಯುವ ಕೆಲಸವಾಗಬೇಕು. ಅದು ಒಬ್ಬ ಸಾಹಿತಿಗೆ ನೀಡುವ ನಿಜವಾದ ಗೌರವ’ ಎಂದು ಅಭಿಪ್ರಾಯಪಟ್ಟರು.

‘12ನೇ ಶತಮಾನದ ಬಸವಣ್ಣ ಅವರ ಮಾತುಗಳನ್ನು ಉನ್ನತ ಕುಲದವರು ಪಾಲಿಸಿದರೆ ಸಾಕು ಸಮಾಜದ ಉನ್ನತಿಯಾಗುತ್ತದೆ. ಬೆಂಗಳೂರಿನಲ್ಲಿ ಪ್ರಶಸ್ತಿ ಪಡೆದರೆ, ದೊಡ್ಡ ಮೇಧಾವಿ ಎಂಬುದಾಗಿ ಭಾವಿಸುವುದು ತಪ್ಪು. ಜಿಲ್ಲಾ ಮಟ್ಟದ ಎಷ್ಟೋ ಲೇಖಕರು, ಹೋರಾಟಗಾರರು ಇಂದಿಗೂ ಬೆಳಕಿಗೆ ಬಂದಿಲ್ಲ. ಅವಿವೇಕಿ ಸಮಾಜವನ್ನು ವಿವೇಕಿ ಸಮಾಜವನ್ನಾಗಿ ತಿದ್ದುವ ಕೆಲಸವಾದಾಗ ಸಾಹಿತಿ, ಕಥೆಗಾರರಿಗೆ ಗೌರವ ಸಲ್ಲಿಸಿದಂತೆ’ ಎಂದರು.

ಸಾಹಿತಿ ಡಾ.ಸಿ.ಶಿವಲಿಂಗಪ್ಪ, ‘ಗುರುನಾಥ್‌ ಕೃತಿಗಳು ಚಿಂತನೆ, ಸೃಜನಶೀಲತೆಯಿಂದ ಕೂಡಿವೆ. ದಲಿತರ ಮೇಲೆ ದೌರ್ಜನ್ಯ, ಶೋಷಣೆ, ಅತ್ಯಾಚಾರ ನಿರಂತರವಾಗಿ ನಡೆಯುತ್ತಿದೆ. ಬೂಟಾಟಿಕೆ, ನಯವಂಚಕತನ ತುಂಬಿ ತುಳುಕುತ್ತಿದೆ. ಇದರ ವಿರುದ್ಧವೂ ಅವರಲ್ಲಿ ತುಡಿತವಿತ್ತು’ ಎಂದು ಸ್ಮರಿಸಿಕೊಂಡರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡಮಲ್ಲಯ್ಯ, ತಾಲ್ಲೂಕು ಅಧ್ಯಕ್ಷ ದಾಸೇಗೌಡ, ಉಪನ್ಯಾಸಕ ಎಂ.ಚಿತ್ರಲಿಂಗಸ್ವಾಮಿ, ಸಮತಾ ಸಾಹಿತ್ಯ ವೇದಿಕೆಯ ಪರಶುರಾಮ್ ಗೊರಪ್ಪ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಡಾ.ಬಿ.ಎಂ.ಗುರುನಾಥ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು