ಭಾನುವಾರ, ಏಪ್ರಿಲ್ 2, 2023
32 °C
ಹೈಕೋರ್ಟ್ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್

ಚಿತ್ರದುರ್ಗ: 'ದನಿ ಇಲ್ಲದವರಿಗೆ ನ್ಯಾಯದಾನವೇ ಆದ್ಯತೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಧ್ವನಿ ಇಲ್ಲದವರು ಹಾಗೂ ಬಡವರಿಗೆ ನ್ಯಾಯ ಕೊಡುವ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ವಕೀಲರು ಮತ್ತು ನ್ಯಾಯಾಧೀಶರು ಕೆಲಸ ಮಾಡಬೇಕಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅಭಿಪ್ರಾಯಪಟ್ಟರು.

ಹೈಕೋರ್ಟ್‌ಗೆ ನೂತನವಾಗಿ ನೇಮಕಗೊಂಡ ನ್ಯಾಯಮೂರ್ತಿಗಳು ಹಾಗೂ‌ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾದವರನ್ನು ಸನ್ಮಾನಿಸಲು ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ವಕೀಲರ ಸಂಘ ಶನಿವಾರ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ನ್ಯಾಯಾಂಗ ವ್ಯವಸ್ಥೆ ಪ್ರಜಾಪ್ರಭುತ್ವದ ಬುನಾದಿ. ವಕೀಲರು, ನ್ಯಾಯಾಧೀಶರು ಈ ವ್ಯವಸ್ಥೆಯಲ್ಲಿದ್ದಾರೆ. ನ್ಯಾಯ, ಹಕ್ಕು ಸಿಗದೇ ಪರದಾಡುವ ದೊಡ್ಡ ಸಮುದಾಯ ಸಮಾಜದಲ್ಲಿದೆ. ಇಂತಹ ಸಮುದಾಯ ಗುರುತಿಸಿ ನ್ಯಾಯ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ತ್ವರಿತ ನ್ಯಾಯಾದಾನ ಆದ್ಯತೆ ಆಗಬೇಕಿದೆ’ ಎಂದು ಸಲಹೆ ನೀಡಿದರು.

‘ಸಮಾಜದ ಹಲವು ಚಳವಳಿಗಳನ್ನು ಮುನ್ನಡೆಸಿದ್ದು ವಕೀಲ ಸಮುದಾಯ. ಸಮಾಜಕ್ಕೆ ವಕೀಲರ ಮುಂದಾಳತ್ವದ ಅಗತ್ಯವಿದೆ. ಈವರೆಗೆ ವಕೀಲರಾಗಿದ್ದವರು ನ್ಯಾಯಮೂರ್ತಿ, ನ್ಯಾಯಾಧೀಶರಾದ ಬಳಿಕ ಸಾಂವಿಧಾನಿಕ ಹುದ್ದೆ ಅಲಂಕರಿಸುತ್ತಾರೆ. ಅವರು ಸ್ಥಳ, ವೃತ್ತಿಪರ ಸಮುದಾಯದ ಗಡಿಯನ್ನು ಮೀರಿ ಕಾನೂನು ಚೌಕಟ್ಟಿಗೆ ಒಳಪಡುತ್ತಾರೆ’ ಎಂದು ಹೇಳಿದರು.

ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನಿಯೋಜನೆಗೊಂಡ ಬಿ.ಬಸವರಾಜು, ರಾಮಚಂದ್ರ ಬಿ.ಹುದ್ದಾರ್, ಟಿ.ವೆಂಕಟೇಶ್ ನಾಯ್ಕ್ ಹಾಗೂ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾದ ಇ.ಎಸ್.ಈರಣ್ಣ, ಎನ್.ಆರ್.ಮಧು ಅವರನ್ನು ಸನ್ಮಾನಿಸಲಾಯಿತು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ, ಕರ್ನಾಟಕ ವಕೀಲರ ಪರಿಷತ್ತಿನ ಎಂ.ದೇವರಾಜ್, ಆರ್.ರಾಜಣ್ಣ, ಎಸ್.ಎಫ್.ಗೌತಮ್ ಚಂದ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಶಿವು ಯಾದವ್, ಉಪಾಧ್ಯಕ್ಷ ಜಿ.ಸಿ.ದಯಾನಂದ್
ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು