ಗುರುವಾರ , ಮಾರ್ಚ್ 23, 2023
28 °C
ಬುಡಕಟ್ಟು ಸಂಸ್ಕೃತಿಗಳಿಗೆ ಖ್ಯಾತಿ, ದೇವರ ಎತ್ತುಗಳಿಗೆ ಪೂಜೆ

ಚಿಕ್ಕುಂತಿ ದೇವರಹಟ್ಟಿಯಲ್ಲಿ ಕಂಪಳರಂಗ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ಮ್ಯಾಸನಾಯಕ ಜನಾಂಗದ ಪ್ರಮುಖ ಜಾತ್ರೆ ಎಂದು ಹೆಸರಾಗಿರುವ ತಾಲ್ಲೂಕಿನ ಚಿಕ್ಕುಂತಿ ದೇವರಹಟ್ಟಿಯಲ್ಲಿ ಶುಕ್ರವಾರ ಕಂಪಳರಂಗ ಸ್ವಾಮಿ ಜಾತ್ರೆಯ ಮುಖ್ಯಘಟ್ಟಗಳು ವೈಭವದಿಂದ ಜರುಗಿದವು.

ಪ್ರತಿವರ್ಷ ಶೂನ್ಯಮಾಸದ ಕೊನೆ ಅಮಾವಾಸ್ಯೆ ನಂತರ ಬರುವ ಶುಕ್ರವಾರದಂದು ಈ ಜಾತ್ರೆಯ ಮುಖ್ಯಘಟ್ಟಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಜಾತ್ರೆ ಅಂಗವಾಗಿ ಜ. 20ರಂದು ಕಂಪಳ ರಂಗಸ್ವಾಮಿ, ಸೂರ್ಯ ಪಾಪನಾಯಕ ಸ್ವಾಮಿ ದೇವರ ಮೂರ್ತಿಗಳನ್ನು ದೇವಸ್ಥಾನದಿಂದ ಹೊರತಂದು ತಾತ್ಕಾಲಿಕ ಪದಿಗಳಲ್ಲಿ ಪ್ರತಿಷ್ಠಾಪಿಸಿ ಜಾತ್ರೆಗೆ ಚಾಲನೆ ನೀಡಲಾಗಿತ್ತು.

ಜ. 21ರಂದು ಸಂಜೆ ದೇವರುಗಳಿಗೆ ಮೀಸಲು ಬೆಣ್ಣೆ ಮಾಡುವ ಕಾರ್ಯಕ್ರಮ ನಡೆಯಿತು. ಜ. 22ರಂದು ಬೆಳಿಗ್ಗೆ ಮಹಾಪೂಜೆ ಮಾಡಿ, ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ನಂತರ ಕಂಪಳರಂಗಸ್ವಾಮಿ, ಪಾಪನಾಯಕ ದೇವರುಗಳಿಗೆ ಸಂಬಂಧಪಟ್ಟ ದೇವರ ಎತ್ತುಗಳಿಗೆ ಸ್ವಾಗತ ಕೋರಲಾಯಿತು. ಅಲ್ಲಿಂದ ನಿತ್ಯ ತಾತ್ಕಾಲಿಕ ಪದಿಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು.

ಜ. 26ರಂದು ಸಂಜೆ ಭಕ್ತರಿಂದ ಮೀಸಲು ಹುರುಳಿ ಅರ್ಪಣೆ, ಕಾಸು ಮೀಸಲು ಅರ್ಪಿಸುವ ಕಾರ್ಯಕ್ರಮ ನಡೆಸಲಾಯಿತು. ರಾತ್ರಿ ದಾಸಯ್ಯ ಅವರಿಂದ ಪಂಜು ನುಂಗುವ ಕಾರ್ಯ ಜರುಗಿತು. ಶುಕ್ರವಾರ ನಸುಕಿನಲ್ಲಿ ಕಾಸು ಮೀಸಲು, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ 2.30ಕ್ಕೆ ನೆರೆಯ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಹೂಡೇಂ ಗ್ರಾಮದಿಂದ ವಾಡಿಕೆಯಂತೆ ಕರೆತಂದ ಅಲಂಕೃತ ಕುದುರೆಗೆ ಸ್ವಾಗತ ಕೋರಿ ದೇವರ ಪದಿಗಳ ಮುಂದೆ ದರ್ಶನ ಮಾಡಿಸಲಾಯಿತು. ನಂತರ ಪದಿಗಳ ಮುಂದೆ ಮೂರು ಬಾರಿ ದೇವರ ಎತ್ತುಗಳನ್ನು ಓಡಿಸಲಾಯಿತು.

‘ಎತ್ತುಗಳನ್ನು ಓಡಿಸುವುದು ಜಾತ್ರೆಯ ಮುಖ್ಯಘಟ್ಟವಾಗಿದ್ದು, ಸಹಸ್ರಾರು ಭಕ್ತರು ಭಾಗವಹಿಸಿದ್ದರು. ಶನಿವಾರ ಸಂಜೆ ಮರುದೀಪ, ಬೆಣ್ಣೆ ಮೀಸಲು, ಭಾನುವಾರ ಪೌಳಿಗಳಿಂದ ದೇವರುಗಳನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಗುಡಿದುಂಬಿಸುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ’ ಎಂದು ದೇವಸ್ಥಾನ ಪ್ರಕಟಣೆ ತಿಳಿಸಿದೆ.

ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ, ತುಮಕೂರು ಹಾಗೂ ಆಂಧ್ರದ ಅನಂತಪುರ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಮ್ಯಾಸನಾಯಕ ಜನಾಂಗದವರು ಭಾಗವಹಿಸಿದ್ದರು. ಜಾತ್ರೆಯು ಕೃಷಿ, ಜಾನುವಾರುಗಳಿಗೆ ಅಗತ್ಯವಿರುವ ಪರಿಕರಗಳ ಮಾರಾಟಕ್ಕೆ ಖ್ಯಾತಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು