ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಬಚ್ಚಿಟ್ಟ ಸಮಸ್ಯೆಗೆ ಬಿಜೆಪಿ ಪರಿಹಾರ: ಕೆ.ಅಣ್ಣಾಮಲೈ

Last Updated 30 ಮಾರ್ಚ್ 2023, 13:14 IST
ಅಕ್ಷರ ಗಾತ್ರ

ಚಿತ್ರದುರ್ಗ: ಈ ದೇಶದಲ್ಲಿ 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌, ಜ್ವಲಂತ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಬದಲು ಬಚ್ಚಿಟ್ಟು ರಾಜಕೀಯ ಮಾಡಿತು. ಇಂತಹ ಸಮಸ್ಯೆಗಳನ್ನು ಬಿಜೆಪಿ ಪರಿಹರಿಸುತ್ತಿದೆ ಎಂದು ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ತಿಳಿಸಿದರು.

ಇಲ್ಲಿನ ಕಮ್ಮಾರೆಡ್ಡಿ ಸಮುದಾಯ ಸಮುದಾಯ ಭವನದಲ್ಲಿ ಬಿಜೆಪಿಯ ಡಿಜಿಟಲ್‌ ಪ್ರಕೋಷ್ಠದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ದಾವಣಗೆರೆ ವಿಭಾಗ ಮಟ್ಟದ ಡಿಜಿಟಲ್‌ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಸುದೀರ್ಘ ಅವಧಿಯವರೆಗೆ ಆಡಳಿತ ನಡೆಸಿದ ಕಾಂಗ್ರೆಸ್‌, ಅಭಿವೃದ್ಧಿಯನ್ನು ತಡೆಯಿತು. ನದಿ ನೀರು ಹಂಚಿಕೆ ಸೇರಿ ಹಲವು ವಿಚಾರದಲ್ಲಿ ಗಲಾಟೆ ಸೃಷ್ಟಿಸಿ ರಾಜಕೀಯ ಮಾಡಿತು. ಇದೇ ಕಾರಣಕ್ಕೆ ದೇಶದ ಎಲ್ಲೆಡೆ ಕಾಂಗ್ರೆಸ್‌ ಮೂಲೆಗುಂಪು ಆಗುತ್ತಿದೆ. ಈಶಾನ್ಯ ಭಾರತ, ಮಧ್ಯ ಭಾರತದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಕಂಡಿದೆ’ ಎಂದು ಕುಟುಕಿದರು.

‘ಆಡಳಿತಾತ್ಮಕ ಸುಧಾರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ಗೆ ಸ್ಪಷ್ಟತೆ ಇಲ್ಲ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಡಳಿತ ನಡೆಸಿದ ಅನುಭವಿ ಅಲ್ಲ. ಆಡಳಿತದಲ್ಲಿ ಆ ಪಕ್ಷ ದೂರದೃಷ್ಟಿ ಹೊಂದಿಲ್ಲ. ಗಲಭೆಗಳನ್ನು ಸೃಷ್ಟಿಸಿ ಲಾಭ ಪಡೆಯುವ ಹುನ್ನಾರವನ್ನು ಕಾಂಗ್ರೆಸ್‌ ಮಾಡುತ್ತಿದೆ. ಇದರಲ್ಲಿ ಸಫಲತೆ ಕಾಣುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಎರಡನೇ ಸ್ಥಾನದಲ್ಲಿದ್ದ ಕಾಂಗ್ರೆಸ್‌ ಹಾಗೂ ಮೂರನೇ ಸ್ಥಾನದಲ್ಲಿದ್ದ ಜೆಡಿಎಸ್‌ ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಮೈತ್ರಿ ಸರ್ಕಾರ ರಚಿಸಿಕೊಂಡಿದ್ದವು. ಈ ಅಪವಿತ್ರ ಮೈತ್ರಿ ಒಂದೂವರೆ ವರ್ಷದಲ್ಲಿಯೇ ಮುರಿದುಬಿದ್ದಿತು. ಈ ಪಕ್ಷದ ಶಾಸಕರು ಬಂಡಾಯವೆದ್ದು ಬಿಜೆಪಿಗೆ ಬಂದರು. ಮೂರುವರೆ ವರ್ಷದಲ್ಲಿ ಬಿಜೆಪಿ ಶಕ್ತಿಮೀರಿ ಅಭಿವೃದ್ಧಿ ಕೆಲಸ ಮಾಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕೇಂದ್ರ ಮತ್ತು ರಾಜ್ಯದ ಡಬಲ್‌ ಎಂಜಿನ್ ಸರ್ಕಾರ ಕರ್ನಾಟಕದಲ್ಲಿ ಅಭಿವೃದ್ಧಿಯ ಹೊಳೆ ಹರಿಸಿದೆ. ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ, ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಿದೆ. ಅಭಿವೃದ್ಧಿಯ ಆಧಾರದ ಮೇರೆಗೆ ಬಿಜೆಪಿ ಚುನಾವಣೆ ಎದುರಿಸುತ್ತದೆಯೇ ಹೊರತು ಜಾತಿಯ ಮೇಲೆ ಅಲ್ಲ’ ಎಂದರು.

ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌, ‘ಚುನಾವಣೆಯ ಕಾರ್ಯವೈಖರಿ ಸಂಪೂರ್ಣ ಬದಲಾಗಿದೆ. ಮತದಾನದ ದಿನ ಬೂತ್‌ ಹೊರಗೆ ಪಕ್ಷದ ಕಾರ್ಯಕರ್ತರು ಮತದಾರರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದರು. ಈ ವೇಳೆ ಜಗಳ, ಗಲಾಟೆ ಕೂಡ ಆಗುತ್ತಿದ್ದವು. ಇಂತಹ ಗಲಾಟೆ, ಜಗಳ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಕೆಲವೊಮ್ಮೆ ಇಂತಹ ಜಗಳ ಪೊಲೀಸ್‌ ಠಾಣೆಯ ಮೆಟ್ಟಿಲು ಏರಿದ ನಿದರ್ಶನವೂ ಇದೆ’ ಎಂದು ಹೇಳಿದರು.

‘ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವುದು ಬಿಜೆಪಿಯ ಗುರಿ. ಪ್ರತಿಯೊಬ್ಬ ಕಾರ್ಯಕರ್ತ ಕೂಡ ಶ್ರಮವಹಿಸಿ ಕೆಲಸ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿಯನ್ನು ಮತದಾರರಿಗೆ ತಲುಪಿಸುವ ಕಾರ್ಯದಲ್ಲಿ ತಲ್ಲೀನರಾಗಬೇಕು. ಸಾಮಾಜಿಕ ಜಾಲತಾಣದಲ್ಲಿ ಸಮಯ ವ್ಯರ್ಥ ಮಾಡುವ ಬದಲು ಪಕ್ಷದ ಕಾರ್ಯಕ್ಕೆ ಮೀಸಲಿಡಬೇಕು’ ಎಂದು ಮನವಿ ಮಾಡಿದರು.

‘ವಿದೇಶಿ ಶಕ್ತಿಯ ಷಡ್ಯಂತ್ರ’
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ವಿದೇಶಿ ಶಕ್ತಿಗಳು ಪ್ರಯತ್ನಿಸಿದ್ದವು. ಸಾಮಾಜಿಕ ಜಾಲತಾಣ ಬಳಸಿಕೊಂಡು ಅಪಪ್ರಚಾರ ಮಾಡಿದ್ದವು ಎಂದು ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಆರೋಪಿಸಿದರು.

‘ಅತ್ಯಂತ ಪ್ರಭಾವಿಯಾಗಿ ರೂಪುಗೊಂಡಿರುವ ಸಾಮಾಜಿಕ ಮಾಧ್ಯಮದ ಬಳಕೆಯ ಬಗ್ಗೆ ಜ್ಞಾನ ಹೊಂದುವುದು ಅನಿವಾರ್ಯವಾಗಿದೆ. ಜನರ ಅಭಿಪ್ರಾಯಗಳನ್ನು ರೂಪಿಸುವಷ್ಟು ಈ ಜಾಲತಾಣಗಳು ಸಶಕ್ತಗೊಂಡಿವೆ. ಇಂತಹ ಜಾಲತಾಣವನ್ನು ಬಿಜೆಪಿ ಕಾರ್ಯಕರ್ತರು ಸಮರ್ಥವಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ, ಬಿಜೆಪಿ ಡಿಜಿಟಲ್ ಮಾಧ್ಯಮ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಕಾಸ ಪುತ್ತೂರು, ದಾವಣಗೆರೆ ಜಿಲ್ಲಾ ಪ್ರಕೋಷ್ಠದ ಕೊಟ್ರೇಶ್‌ಗೌಡ, ಮಧುಗಿರಿಯ ರಘುಕಿರಣ್‌, ಚಿತ್ರದುರ್ಗ ಜಿಲ್ಲಾ ಪ್ರಕೋಷ್ಠದ ಮನೋಜ್‌ ಹೊಸಮನೆ, ವೈದ್ಯಕೀಯ ಪ್ರಕೋಷ್ಠದ ಮುಖಂಡ ಸಂತೋಷ್‌, ಪ್ರಶಾಂತ್‌ ಜಾದವ್‌ ಇದ್ದರು.

***

ಸಾಮಾಜಿಕ ಜಾಲತಾಣ ಹೊಂದಿದ ಬಹುತೇಕರಿಗೆ ನಿತ್ಯ 2 ಜಿ.ಬಿ ಡೇಟಾ ಇರುತ್ತದೆ. ಈ ಡೇಟಾವನ್ನು ಬಿಜೆಪಿಗೆ ಮೀಸಲಿಡಿ. ಪಕ್ಷದ ಪರ ಪ್ರಚಾರಕ್ಕೆ ಬಳಸಿ.
ರಾಘವೇಂದ್ರ, ಬಿಜೆಪಿ ಡಿಜಿಟಲ್‌ ಮಾಧ್ಯಮ ಪ್ರಕೋಷ್ಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT