ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Results: ಪ್ರಥಮ ಸ್ಥಾನದಿಂದ 21ಕ್ಕೆ ಕುಸಿದ ಚಿತ್ರದುರ್ಗ

ಶೇ 72.85 ಉತ್ತೀರ್ಣ ಪ್ರಮಾಣ
Published 10 ಮೇ 2024, 5:13 IST
Last Updated 10 ಮೇ 2024, 5:13 IST
ಅಕ್ಷರ ಗಾತ್ರ

ಚಿತ್ರದುರ್ಗ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 72.85 ಫಲಿತಾಂಶ ಪಡೆದಿರುವ ಜಿಲ್ಲೆ, ರಾಜ್ಯದಲ್ಲಿ 21ನೇ ಸ್ಥಾನಕ್ಕೆ ಕುಸಿದಿದೆ. 2022–23ನೇ ಶೈಕ್ಷಣಿಕ ವರ್ಷದಲ್ಲಿ ಶೇ 96.8 ಫಲಿತಾಂಶದೊಂದಿಗೆ ರಾಜ್ಯದಲ್ಲಿ ಮೊದಲ ಸ್ಥಾನ ಮುಡಿಗೇರಿಸಿಕೊಂಡಿದ್ದ ಕೋಟೆನಾಡು ಏಕಾಏಕಿ ಪಾತಾಳಕ್ಕೆ ಇಳಿದಿದೆ.

ಜಿಲ್ಲೆಯಲ್ಲಿ 22,275 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ಪೈಕಿ 16,227 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 6,048 ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಇತ್ತೀಚಿನ ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಳಪೆ ಫಲಿತಾಂಶ ಸಿಕ್ಕಿದೆ. ಕಳೆದ ವರ್ಷಕ್ಕಿಂತ ಶೇ 24ರಷ್ಟು ಫಲಿತಾಂಶ ಕುಸಿತ ಕಂಡಿದೆ.

ಪ್ರಸಕ್ತ ಶೈಕ್ಷಣಿಕ ವರ್ಷವೂ ಚಿತ್ರದುರ್ಗ ಮೊದಲ ಸ್ಥಾನವನ್ನು ಉಳಿಸಿಕೊಳ್ಳುವ ವಿಶ್ವಾಸವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ವ್ಯಕ್ತಪಡಿಸಿತ್ತು. ಫಲಿತಾಂಶ ಪಟ್ಟಿಯ ಮೊದಲ ಹತ್ತು ಸ್ಥಾನಗಳಲ್ಲಾದರೂ ಜಿಲ್ಲೆ ಸ್ಥಾನ ಪಡೆಯುವ ನಿರೀಕ್ಷೆಯನ್ನು ಹೊಂದಿತ್ತು. ಫಲಿತಾಂಶ ಪಾತಾಳಕ್ಕೆ ಇಳಿದಿರುವುದು ಶಿಕ್ಷಕರು ಹಾಗೂ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಕೈಗೊಂಡ ಸುಧಾರಣಾ ಕ್ರಮಗಳ ಭಾಗವಾಗಿ ನೈಜ ಫಲಿತಾಂಶ ಲಭ್ಯವಾಗಿದೆ ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ.

ವಿದ್ಯಾರ್ಥಿನಿಯರ ಮೇಲುಗೈ: ಜಿಲ್ಲೆಯ 474 ಪ್ರೌಢಶಾಲೆಗಳ ಪೈಕಿ ಅನುದಾನ ರಹಿತ ಶಾಲೆಯ ಫಲಿತಾಂಶ ಉತ್ತಮವಾಗಿದೆ. ಒಂದು ಶಾಲೆ ಮಾತ್ರ ಶೂನ್ಯ ಫಲಿತಾಂಶ ದಾಖಲಿಸಿದ್ದು, ಹಲವು ಶಾಲೆಗಳಿಗೆ ಶೇ 100 ಫಲಿತಾಂಶ ಸಿಕ್ಕಿದೆ. ಪರೀಕ್ಷೆಗೆ ಹಾಜರಾದ 11,107 ಬಾಲಕರಲ್ಲಿ 7,207 (ಶೇ 64) ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಎದುರಿಸಿದ 11,168 ಬಾಲಕಿಯರಲ್ಲಿ 9,020 (ಶೇ 80) ತೇರ್ಗಡೆ ಹೊಂದಿದ್ದಾರೆ.

ನಗರ ಪ್ರದೇಶದ 6,348 ವಿದ್ಯಾರ್ಥಿಗಳ ಪೈಕಿ 4,327 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಪ್ರದೇಶದ 15,927 ವಿದ್ಯಾರ್ಥಿಗಳಲ್ಲಿ 11,900 ಮಕ್ಕಳು ಉತ್ತೀರ್ಣರಾಗಿದ್ದಾರೆ. ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಶೇ 6ರಷ್ಟು ಫಲಿತಾಂಶ ಹೆಚ್ಚಾಗಿದೆ. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಲ್ಲಿ ಶೇ 68ರಷ್ಟು ಹಾಗೂ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಲ್ಲಿ ಶೇ 69ರಷ್ಟು ಉತ್ತೀರ್ಣತೆಯ ಪ್ರಮಾಣ ದಾಖಲಾಗಿದೆ.

ಫಲನೀಡದ ಪ್ರಯತ್ನ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಾಕಷ್ಟು ಪ್ರಯತ್ನ ಮಾಡಿತ್ತು. ಶಾಲಾ ಹಂತದಲ್ಲಿ ಘಟಕ ಪರೀಕ್ಷೆ, ಕಿರು ಪರೀಕ್ಷೆ, ಮಧ್ಯ ವಾರ್ಷಿಕ ಪರೀಕ್ಷೆ ಹಾಗೂ ಸರಣಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಕಲಿಕೆಯಲ್ಲಿ ಸುಧಾರಣೆ ತರಲು ವಿಷಯ ತಜ್ಞರಿಂದ ಶಿಕ್ಷಕರಿಗೆ ತರಬೇತಿ ನೀಡಲಾಗಿತ್ತು. ‘ಪಾಸಿಂಗ್‌ ಪ್ಯಾಕೇಜ್‌’ ಹಾಗೂ ‘ಸ್ಕೋರಿಂಗ್‌ ಪ್ಯಾಕೇಜ್‌’ ರೂಪಿಸಿ ಮಕ್ಕಳನ್ನು ಉತ್ತೇಜಿಸಲಾಗಿತ್ತು.

‘ಫಲಿತಾಂಶ ಸುಧಾರಣೆಗೆ 2022–23ನೇ ಸಾಲಿನಲ್ಲಿ ಕೈಗೊಂಡ ಕ್ರಮಗಳನ್ನೇ ಪ್ರಸಕ್ತ ಶೈಕ್ಷಣಿಕ ವರ್ಷವೂ ಮುಂದುವರಿಸಲಾಗಿತ್ತು. ಅಗ್ರಸ್ಥಾನ ಉಳಿಸಿಕೊಳ್ಳಲು ನಿರಂತರವಾಗಿ ಶ್ರಮಿಸಲಾಗಿತ್ತು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ವಿಶೇಷ ತರಗತಿ ನಡೆಸಲಾಗಿತ್ತು. ಈ ಪ್ರಯತ್ನ ಏಕೆ ಕೈಗೂಡಲಿಲ್ಲ ಎಂಬುದನ್ನು ಪರಾಮರ್ಶಿಸಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆಯ ಹೆಚ್ಚುವರಿ ಪ್ರಭಾರ ಉಪ ನಿರ್ದೇಶಕ ಎಂ.ನಾಸೀರುದ್ದೀನ್‌ ತಿಳಿಸಿದ್ದಾರೆ.

ಒಂದು ಶಾಲೆಗೆ ಶೂನ್ಯ ಫಲಿತಾಂಶ: ಜಿಲ್ಲೆಯ ಹಲವು ಶಾಲೆಗಳು ಶೇ 100 ಫಲಿತಾಂಶ ಪಡೆದುಕೊಂಡಿವೆ. ಚಿತ್ರದುರ್ಗ ಹೊರವಲಯದ ಮೆದೇಹಳ್ಳಿಯ ಸಿದ್ದೇಶ್ವರ ಪ್ರೌಢಶಾಲೆ ಶೂನ್ಯ ಫಲಿತಾಂಶ ದಾಖಲಿಸಿದೆ.

‘ಶಾಲೆಯ 9 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ಪೈಕಿ ಯಾರೊಬ್ಬರೂ ಉತ್ತೀರ್ಣರಾಗಿಲ್ಲ. ಇದನ್ನು ಹೊರತುಪಡಿಸಿ ಜಿಲ್ಲೆಯ ಯಾವುದೇ ಶಾಲೆ ಶೂನ್ಯ ಫಲಿತಾಂಶ ಪಡೆದಿಲ್ಲ’ ಎಂದು ಹೆಚ್ಚುವರಿ ಪ್ರಭಾರ ಡಿಡಿಪಿಐ ಎಂ.ನಾಸೀರುದ್ದೀನ್‌ ಮಾಹಿತಿ ನೀಡಿದ್ದಾರೆ.

ಪಾರದರ್ಶಕತೆ ತಂದ ‘ವೆಬ್‌ಕಾಸ್ಟಿಂಗ್‌’

ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆ ತರುವ ಭಾಗವಾಗಿ ಇದೇ ಮೊದಲ ಬಾರಿಗೆ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ರೂಪಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಪರೀಕ್ಷೆಯ ಮೇಲೆ ನಿಗಾ ಇಡಲಾಗಿತ್ತು. ಜಿಲ್ಲಾ ಹಾಗೂ ಕೇಂದ್ರ ಕಚೇರಿಯಿಂದ ಪ್ರತಿ ಕೇಂದ್ರದ ಪರೀಕ್ಷೆಯನ್ನು ವೀಕ್ಷಿಸಲು ಇದರಿಂದ ಸಾಧ್ಯವಾಗಿತ್ತು. ಇದು ಪರೀಕ್ಷಾ ಅಕ್ರಮಕ್ಕೆ ಕಡಿವಾಣ ಹಾಕಿದ ಸಾಧ್ಯತೆ ಇದೆ. ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗುತ್ತಿತ್ತು. ಇದೇ ಆರೋಪದ ಮೇರೆಗೆ ಪರಶುರಾಂಪುರ ವ್ಯಾಪ್ತಿಯಲ್ಲಿ ನಾಲ್ವರು ಹಾಗೂ ತುರುವನೂರು ಹೋಬಳಿ ವ್ಯಾಪ್ತಿಯಲ್ಲಿ ಒಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಈ ಪಾರದರ್ಶಕ ವ್ಯವಸ್ಥೆಯಿಂದ ನೈಜ ಫಲಿತಾಂಶ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ‘ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರಿಂದ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಈ ರೀತಿಯ ನಿಗಾ ವ್ಯವಸ್ಥೆ ಮಕ್ಕಳ ಸಾಮರ್ಥ್ಯವನ್ನು ಕುಗ್ಗಿಸಿತು. ನಿರಾತಂಕವಾಗಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಫಲಿತಾಂಶ ಕುಸಿದಿದೆ’ ಎಂದು ಶಿಕ್ಷಕರೊಬ್ಬರು ಸಮಜಾಯಿಷಿ ನೀಡಿದ್ದಾರೆ. ಪರೀಕ್ಷಾ ಕೇಂದ್ರಗಳನ್ನು 94ರಿಂದ 78ಕ್ಕೆ ಇಳಿಕೆ ಮಾಡಲಾಯಿತು. 28 ಪರೀಕ್ಷಾ ಕೇಂದ್ರಗಳನ್ನು ಕಡಿಮೆ ಮಾಡಿದ್ದು ಕೂಡ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ದೂರದ ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿಗಳಲ್ಲಿ ನಿರುತ್ಸಾಹ ಮೂಡಿಸಿದವು ಎಂಬುದು ಶಿಕ್ಷಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT