ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಬೆಳೆ ಪರಿಹಾರ ಸಾಲಕ್ಕೆ ಕಡಿತವಾದರೆ ಕ್ರಮ

ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಸೂಚನೆ
Last Updated 7 ಮಾರ್ಚ್ 2023, 9:21 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯ ಕೆಲವೆಡೆ ವೃದ್ಧಾಪ್ಯ ವೇತನ, ವಿಧವಾ ವೇತನ, ಬೆಳೆ ವಿಮೆ ಹಾಗೂ ಬೆಳೆನಷ್ಟ ಪರಿಹಾರ, ಕೃಷಿ ಸಮ್ಮಾನ್ ಮತ್ತಿತರ ಸಹಾಯ ಧನವನ್ನು ಬ್ಯಾಂಕ್‍ಗಳು ಆಯಾ ಫಲಾನುಭವಿಗಳ ಹಳೆಯ ಸಾಲಕ್ಕೆ ಕಡಿತಗೊಳಿಸಿರುವುದು ಗಮನಕ್ಕೆ ಬಂದಿದೆ. ವಿವಿಧ ಯೋಜನೆಯ ಮೊತ್ತವನ್ನು ಯಾವುದೇ ಕಾರಣಕ್ಕೂ ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೈಗಾರಿಕೆ ಹಾಗೂ ವಿವಿಧ ಇಲಾಖೆಗಳಿಂದ ನಾನಾ ಯೋಜನೆಗಳಡಿ ಸಾಲ ಮಂಜೂರಾಗಿರುವ ಫಲಾನುಭವಿಗಳಿಗೆ ಬ್ಯಾಂಕ್‍ಗಳು ಸಾಲ ನೀಡದೇ ಅಲೆದಾಡಿಸುತ್ತಿವೆ. ಕೂಡಲೇ ಸಂಬಂಧಪಟ್ಟ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ವಿತರಣೆಯಾಗಬೇಕು. ಈ ಕುರಿತು ಬ್ಯಾಂಕ್‍ಗಳಿಗೆ ಸೂಕ್ತ ನಿರ್ದೇಶನ ನೀಡಿ, ಮೂರು ದಿನದೊಳಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸಚಿವರು ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಬೆಂಕಿ ಬಿದ್ದು ದಾಳಿಂಬೆ ಹಾಗೂ ಇತರ ತೋಟಗಾರಿಕೆ ಬೆಳೆಗಳು ಹಾಳಾದ ಬಗ್ಗೆ ಗಮನಕ್ಕೆ ಬಂದಿದೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಎನ್‍ಡಿಆರ್‌ಎಫ್ ಅಡಿ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಎಂದು ತಿಳಿಸಿದರು.

ಮೊಳಕಾಲ್ಮುರು ತಾಲ್ಲೂಕು ಹೊರತು ಪಡಿಸಿ, ಜಿಲ್ಲೆಯ ಐದು ತಾಲ್ಲೂಕುಗಳಲ್ಲಿಯೂ ಅಡಿಕೆ, ದಾಳಿಂಬೆ ಬೆಳೆಗಳು ಆಕಸ್ಮಿಕ ಬೆಂಕಿಬಿದ್ದು ಸುಟ್ಟು ಹೋಗಿವೆ. ಈ ಕುರಿತು ವಿಮೆ ಕಂಪನಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ತೊಟಗಾರಿಕೆ ಉಪ ನಿರ್ದೇಶಕರು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಕೆಲವೊಂದು ಮಾರ್ಪಾಡು ಮಾಡಿ ಇಂತಹವುಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ನೀಡಲು ಪ್ರಸ್ತಾವ ಸಲ್ಲಿಸಿ’ ಎಂದು ಸೂಚಿಸಿದರು.

‘ಮುಂದಿನ ದಿನಗಳಲ್ಲಿ ಬೇಸಿಗೆ ಬರುವುದರಿಂದ ಜಿಲ್ಲೆಯ ಹಲವು ಕಡೆ ಕುಡಿಯುವ ನೀರಿನ ಅಭಾವ ತಲೆದೋರುವ ಸಾಧ್ಯತೆ ಇದೆ. ತುಂಗಭದ್ರಾ ಹಿನ್ನೀರಿನಿಂದ ಕುಡಿಯುವ ನೀರು ಬರುವುದು ನಾಲ್ಕೈದು ತಿಂಗಳು ತಡವಾಗಬಹುದು. ಹಾಗಾಗಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ, ನೀರಿನ ಸಮಸ್ಯೆ ತಲೆದೋರಬಹುದಾದ ಗ್ರಾಮಗಳಲ್ಲಿ ಬೋರ್‌ವೆಲ್‌ಗಳನ್ನು ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಬೇಕು’ ಎಂದು ಶಾಸಕ ಟಿ. ರಘುಮೂರ್ತಿ ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳಲ್ಲಿ, ಬೋರ್‌ವೆಲ್ ಅವಶ್ಯಕತೆ ಇರುವ ಕಡೆ ಸಂಬಂಧಪಟ್ಟ ಇಲಾಖೆಯವರು ಪ್ರಮಾಣೀಕರಿಸಿದ ನಂತರ ತಕ್ಷಣವೇ ಬೋರ್‌ವೆಲ್ ಕೊರೆಸಿ ನೀರಿನ ಸೌಲಭ್ಯ ಕಲ್ಪಿಸಬೇಕು’ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಬೋರ್‌ವೆಲ್ ಕೊರೆಸುವ ಮುಂಚೆಯೇ ನೀರು ಲಭ್ಯವಿರುವ ಬಗ್ಗೆ ಕನಿಷ್ಠ ಎರಡರಿಂದ ಮೂರು ಪಾಯಿಂಟ್ ಮಾಡಬೇಕು. ಒಂದು ವಿಫಲವಾದರೆ ಮತ್ತೊಂದು ಕೊರೆಸಿ ಜನರಿಗೆ ಒದಗಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯ ಫಲಾನುಭವಿಗಳ ಸಂಖ್ಯೆ ಕಡಿಮೆ ಇದೆ. ರೈತರೆಲ್ಲರನ್ನೂ ಈ ಯೋಜನೆಗೆ ಸೇರಿಸಬೇಕು. ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸುವಂತೆ ಡಿಡಿಪಿಐ ಹಾಗೂ ಡಿಡಿಪಿಯು ಅವರಿಗೆ ತಾಕೀತು ಮಾಡಿದರು.

ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಪೂರ್ಣಿಮಾ ಕೆ. ಶ್ರೀನಿವಾಸ್, ಗೂಳಿಹಟ್ಟಿ ಡಿ. ಶೇಖರ್, ಎಂ. ಚಂದ್ರಪ್ಪ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ಚಂದ್ರಯ್ಯ
ಇದ್ದರು.

..........

ಅಡಿಕೆಗೆ ಪ್ರೋತ್ಸಾಹ ಧನ

ಮಲೆನಾಡಿನಲ್ಲಿ ಮಾತ್ರವಲ್ಲದೇ ಬಯಲುಸೀಮೆಯಲ್ಲಿಯೂ ಈಚೆಗೆ ಅಡಿಕೆ ಬೆಳೆಯನ್ನು ಬೆಳೆಯಲು ರೈತರು ಮುಂದಾಗಿದ್ದಾರೆ. ಈ ಅಡಿಕೆ ಬೆಳೆಗೂ ಪ್ರೊತ್ಸಾಹಧನ ನೀಡಬೇಕು ಎಂದು ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಉಪನಿರ್ದೇಶಕಿ ಸವಿತಾ, ‘ಒಣಹವೆ ಇರುವಂತಹ ಪ್ರದೇಶಗಳಲ್ಲಿ ಅಡಿಕೆ ಬೆಳೆ ಸರಿಯಾಗಿ ಬರುವುದಿಲ್ಲ. ಆದರೂ ಸಹ ನೀರಾವರಿ ಇರುವ ಒಣಹವೆ ಪ್ರದೇಶದ ತಾಲ್ಲೂಕುಗಳಲ್ಲೂ ಅಡಿಕೆ ಬೆಳೆಯುತ್ತಿದ್ದಾರೆ. ಪ್ರೊತ್ಸಾಹ ನೀಡುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

................

ಯರೇಹಳ್ಳಿಗೆ ನಿರಂತರ ಜ್ಯೋತಿ ಕಲ್ಪಿಸಿ

ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಯರೇಹಳ್ಳಿಗೆ ನಿರಂತರ ಜ್ಯೋತಿ ವಿದ್ಯುತ್ ವ್ಯವಸ್ಥೆ ಕಲ್ಪಿಸದೆ ದಿನಕ್ಕೆ ಮೂರು ಗಂಟೆ ಮಾತ್ರ ವಿದ್ಯುತ್ ನೀಡುತ್ತಿರುವ ಬೆಸ್ಕಾಂ ಅಧಿಕಾರಿಗಳ ವರ್ತನೆಗೆ ಸಚಿವ ಬಿ.ಸಿ. ಪಾಟೀಲ್ ಗರಂ ಆದರು.

ಈ ಗ್ರಾಮಕ್ಕೆ ಹಿರಿಯೂರು ತಾಲ್ಲೂಕಿನ ಐಮಂಗಲದಿಂದ ವಿದ್ಯುತ್ ಸರಬರಾಜಾಗುತ್ತಿದೆ. ಅದನ್ನು ಚಿತ್ರದುರ್ಗಕ್ಕೆ ಹಸ್ತಾಂತರ ಮಾಡಿಕೊಳ್ಳಬೇಕಿದೆ ಎಂದು ಬೆಸ್ಕಾಂ ಅಧಿಕಾರಿ ಮಾಹಿತಿ ನೀಡಿದರು.

ಯರೇಹಳ್ಳಿ ಗುಡ್ಡಗಾಡು ಪ್ರದೇಶದಲ್ಲಿರುವ ಕುಗ್ರಾಮ. ಆದಷ್ಟು ಬೇಗ ಚಿತ್ರದುರ್ಗ ವಿಭಾಗದಿಂದ ವಿದ್ಯುತ್ ಸರಬರಾಜಾಗುವಂತೆ ಮಾಡಿ ವರದಿ ಕೊಡಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸೂಚಿಸಿದರು.

..........

ಅಧಿಕಾರಿಗಳು ಕೇವಲ ಸಮಯ, ಸಂಬಳಕ್ಕೆ ಕೆಲಸ ಮಾಡುವುದು ಅಲ್ಲ. ರೈತರ ಕಷ್ಟಕ್ಕೆ ಸ್ಪಂದಿಸುವ ಕೆಲಸವಾಗಬೇಕು. ಆಸಕ್ತಿ ಮತ್ತು ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸುವ ಪರಿಪಾಠ ರೂಢಿಸಿಕೊಳ್ಳಬೇಕು.

- ಬಿ.ಸಿ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT