ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಿಳಿದ 105 ಕೆಎಸ್‌ಆರ್‌ಟಿಸಿ ಬಸ್

ಹದಿನಾಲ್ಕನೇ ದಿನವೂ ಕರ್ತವ್ಯಕ್ಕೆ ಹಾಜರಾಗದ ಕೆಎಸ್‌ಆರ್‌ಟಿಸಿಯ 950 ನೌಕರರು
Last Updated 21 ಏಪ್ರಿಲ್ 2021, 5:39 IST
ಅಕ್ಷರ ಗಾತ್ರ

ಚಿತ್ರದುರ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ಬಸ್‌ಗಳು ಹಂತ ಹಂತವಾಗಿ ರಸ್ತೆಗೆ ಇಳಿಯುತ್ತಿದ್ದು, ಮಂಗಳವಾರ 105 ಬಸ್‌ಗಳು ರಾಜ್ಯದ ವಿವಿಧೆಡೆ ಸಂಚಾರ ನಡೆಸಿದವು.

ಆರನೇ ವೇತನ ಆಯೋಗಕ್ಕೆ ಪಟ್ಟುಹಿಡಿದಿರುವ ಸಾರಿಗೆ ನೌಕರರು ಮುಷ್ಕರವನ್ನು ಹದಿನಾಲ್ಕನೇ ದಿನವೂ ಮುಂದುವರೆಸಿದ್ದಾರೆ. ಹೀಗಾಗಿ 950 ನೌಕರರು ಕರ್ತವ್ಯಕ್ಕೆ ಗೈರಾಗಿದ್ದಾರೆ. ಆದರೆ, ಮಂಗಳವಾರ ದಿಢೀರನೇ 50 ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದು, ಏ. 21ರಂದು ಇನ್ನಷ್ಟು ನೌಕರರು ಹಾಜರಾಗುವ ಸಾಧ್ಯತೆ ಇದೆ.

ವಿಭಾಗ ವ್ಯಾಪ್ತಿಯ 294 ಬಸ್‌ಗಳ ಪೈಕಿ ಧರಣಿ ಕೈಗೊಂಡ ಮೊದಲ ದಿನ 6, ಎರಡು ಮತ್ತು ಮೂರನೇ ದಿನ ತಲಾ ಒಂಬತ್ತು ಬಸ್‌ಗಳು ಮಾತ್ರ ಸಂಚರಿಸಿದ್ದವು. ಆದರೆ, ಮಂಗಳವಾರದಿಂದ 200 ನೌಕರರು ಆಸಕ್ತಿ ತೋರಿದ ಪರಿಣಾಮ 105 ಬಸ್‌ಗಳು ರಸ್ತೆಗೆ ಇಳಿದವು.

ಒಟ್ಟು 260 ರೂಟ್‌ಗಳಿದ್ದು, ಅವುಗಳಲ್ಲಿ 105ಕ್ಕೂ ಹೆಚ್ಚು ರೂಟ್‌ಗಳಲ್ಲಿ ಸಂಚಾರ ಮೊದಲಿನಂತೆ ಆರಂಭವಾಗಿದೆ. ಚಿತ್ರದುರ್ಗ ಸೇರಿ ನಾಲ್ಕು ಡಿಪೊಗಳ ಬಸ್‌ಗಳು ಬೆಂಗಳೂರು, ದಾವಣಗೆರೆ, ಭರಮಸಾಗರ, ಶಿವಮೊಗ್ಗ, ಚನ್ನಗಿರಿ, ಹೊಸದುರ್ಗ, ಚಳ್ಳಕೆರೆ, ಪಾವಗಡ, ಹೊಸಪೇಟೆ ಮಾರ್ಗವಾಗಿ ಸಂಚರಿಸಿದವು.

ಮಾಮೂಲಿ ದಿನಗಳಲ್ಲಿ ಚಿತ್ರದುರ್ಗ ವಿಭಾಗದಿಂದ ಸಂಸ್ಥೆಗೆ ₹ 30 ಲಕ್ಷ ಸಂಗ್ರವಾಗುತ್ತಿತ್ತು. 19ರಂದು ₹ 3.5 ಲಕ್ಷ ಸಂಗ್ರಹವಾಗಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಒಳಭಾಗದಲ್ಲಿರುವ ಸಾರಿಗೆ ಇಲಾಖೆಯ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದರು. ಸಂಚಾರ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸಿತು.

ಕರ್ತವ್ಯಕ್ಕೆ ಹಾಜರಾಗಿ: ಸೂಚನೆ

‘ಪ್ರಯಾಣಿಕರಿಗೆ ತೊಂದರೆ ಆಗಬಾರದು. ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಕಾರಣ ವಿಭಾಗದ ಎಲ್ಲ ಬಸ್‌ಗಳು ಸಂಚಾರ ನಡೆಸಿದರೆ ಉತ್ತಮ. ಆದ್ದರಿಂದ ಕರ್ತವ್ಯಕ್ಕೆ ಹಾಜರಾಗಿ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯ್‌ಕುಮಾರ್ ನೌಕರರಲ್ಲಿ ಮನವಿ ಮಾಡಿದ್ದಾರೆ.

‘ಚಿತ್ರದುರ್ಗ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ಇಲ್ಲಿಗೆ ವರ್ಗಾವಣೆಗೊಂಡ ಬಹುತೇಕರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಹೀಗಾಗಿ 45 ಜನರನ್ನು ಸಂಸ್ಥೆ ಮೊದಲಿದ್ದ ವಿಭಾಗಕ್ಕೆ ವರ್ಗಾವಣೆ ಮಾಡಿದೆ. ಈಗಲೂ ಗೈರಾಗುತ್ತಿರುವವರು ನಿರ್ಲಕ್ಷ್ಯತೋರದೆ ಹಾಜರಾಗಿ’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT