ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟ್ಟೆಪಾಡಿಗೆ ದಿನನಿತ್ಯ ಕೆಲಸದ ಹುಡುಕಾಟ

ಪೌರಕಾರ್ಮಿಕರು, ದಿನಗೂಲಿಗಳು, ಕಟ್ಟಡ ಕಾರ್ಮಿಕರಿಗಿಲ್ಲ ಮೇ 1ರ ಸಂಭ್ರಮ
ಅಕ್ಷರ ಗಾತ್ರ

ಚಿಕ್ಕಜಾಜೂರು: ದೇಶದಾದ್ಯಂತ ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿಗಳಲ್ಲಿ ಶನಿವಾರ ಕಾರ್ಮಿಕರ ದಿನವನ್ನು ರಜೆಯ ಮೂಲಕ ಆಚರಿಸಿದ್ದರೆ, ಪೌರಕಾರ್ಮಿಕರು, ಕೃಷಿ ಕಾರ್ಮಿಕರು, ದಿನಗೂಲಿಗಳು ಹಾಗೂ ಕಟ್ಟಡಗಳ ಕಾರ್ಮಿಕರು ಎಂದಿನಂತೆ ಕಾಯಕದಲ್ಲಿ ತೊಡಗಿದ್ದರು.

ರಸ್ತೆ, ಚರಂಡಿಗಳ ಸ್ವಚ್ಛತೆಯಲ್ಲಿ ತೊಡಗಿದ್ದಗ್ರಾಮ ಪಂಚಾಯಿತಿ ಪೌರಕಾರ್ಮಿಕರನ್ನು ಕಾರ್ಮಿಕ ದಿನಾಚರಣೆ ಕುರಿತು ಕೇಳಿದ್ದಕ್ಕೆ ‘ರಜೆ ಅಂತ ಮನೆಯಲ್ಲಿ ಕುಳಿತರೆ, ನಾಳೆ ವೇಳೆಗೆ ರಸ್ತೆ ಹಾಗೂ ಚರಂಡಿಗಳಲ್ಲಿ ಕಸದ ರಾಶಿಯೇ ತುಂಬಿರುತ್ತದೆ‌. ಸ್ವಚ್ಛಗೊಳಿಸದಿದ್ದರೆ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸದಸ್ಯರು ಸುಮ್ಮನಿರುತ್ತಾರೆಯೇ’ ಎಂದು ಮರು ಪ್ರಶ್ನೆ ಹಾಕಿದರು.

‘ಈ ಆಚರಣೆಗಳು ಕೇವಲ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ. ನಮ್ಮಂತಹ ಬಡ ಕೂಲಿಗಳಿಗಲ್ಲ. ಇವತ್ತು ನಾನು ಕೆಲಸ ಮಾಡಿದರೆ ₹ 600ರಿಂದ ₹ 750 ಸಿಗುತ್ತದೆ. ರಜೆ ಮಾಡಿ ಮನೆಯಲ್ಲಿ ಕುಳಿತರೆ ನಾಳಿನ ಅನ್ನಕ್ಕೆ ಮತ್ತೊಬ್ಬರ ಹತ್ತಿರ ಕೈಚಾಚುವಂತಾಗುತ್ತದೆ’ ಎಂದರು ಕಟ್ಟಡ ಕಾರ್ಮಿಕರಾದ ಚಂದ್ರಪ್ಪ, ಹನುಮಂತಪ್ಪ, ರಾಮಪ್ಪ, ರಂಗಣ್ಣ ಮೊದಲಾದವರು.

‘ದಿನಕ್ಕೆ 1,000 ಅಥವಾ 1,500 ತೆಂಗಿನ ಕಾಯಿಗಳನ್ನು ಸುಲಿಯುತ್ತೇವೆ. ಸಾವಿರಕ್ಕೆ ₹ 500 ಕೂಲಿ ಕೊಡುತ್ತಾರೆ. ಕೆಲವೊಮ್ಮೆ 400–500 ಕಾಯಿಗಳನ್ನು ಮಾತ್ರ ಸುಲಿಯುತ್ತೇವೆ. ವಾರದಲ್ಲಿ ಮೂರು ನಾಲ್ಕು ದಿನ ಕೆಲಸ ಇರುತ್ತದೆ. ಉಳಿದ ದಿನಗಳಲ್ಲಿ ಕೆಲಸ ಇರುವುದಿಲ್ಲ. ಬರುವ ಹಣದಲ್ಲಿ ಮಕ್ಕಳ ಶಿಕ್ಷಣ, ದಿನಸಿ, ತರಕಾರಿ, ಆಸ್ಪತ್ರೆ ಮತ್ತಿತರ ಖರ್ಚುಗಳಿಗೆ ಹಣ ಉಳಿಸಬೇಕು. ಊರಲ್ಲಿ ಕೆಲಸ ಇಲ್ಲ. ಹಾಗಾಗಿ ಇಲ್ಲಿಗೆ ಬಂದಿದ್ದೇವೆ’ ಎನ್ನುತ್ತಾರೆ ಹೊಸದುರ್ಗ ತಾಲ್ಲೂಕಿನ ಬೀಸನಹಳ್ಳಿ ಗ್ರಾಮದ ನಾಗಪ್ಪ ಹಾಗೂ ನರಸಿಂಹಪ್ಪ.

‘ಕೊರೊನಾ ಲಾಕ್‌ಡೌನ್‌ ಕಾರಣ ಊರುಗಳಲ್ಲಿ ಕೂಲಿ ಸಿಗುವುದೇ ದುಸ್ತರವಾಗಿದೆ. ಮೆಕ್ಕೆಜೋಳ ತೆನೆ ಬಿಡಿಸುವ, ತೆನೆಯನ್ನು ಯಂತ್ರಕ್ಕೆ ಹಾಕಲು ಹೋಗುತ್ತೇವೆ. ಕೆಲವರು ಕಟ್ಟಡ ನಿರ್ಮಾಣದ ಕೆಲಸ ಮಾಡುತ್ತಾರೆ. ದಿನಕ್ಕೆ ₹ 300ರಿಂದ ₹ 400 ಕೂಲಿ ಸಿಗುತ್ತದೆ. ದಿನಗೂಲಿ ನೆಚ್ಚಿಕೊಂಡು ಸ್ವಸಹಾಯ ಸಂಘಗಳಲ್ಲಿ ಸಾಲ ಪಡೆದಿದ್ದೇವೆ. ಸಂಘಕ್ಕೆ ಪ್ರತಿವಾರ ₹ 100 ಕಟ್ಟಬೇಕು. ವಾರದಲ್ಲಿ ಎರಡು–ಮೂರು ದಿನ ಕೆಲಸ ಇರುವುದಿಲ್ಲ. ಆ ದಿನಗಳಂದು ಬೇರೆ ಕಡೆ ಕೆಲಸ ಹುಡುಕಿಕೊಂಡು ಹೋಗಬೇಕು’ ಎನ್ನುತ್ತಾರೆ ಮಹಿಳಾ ಕೂಲಿಕಾರ್ಮಿಕರಾದ ಕೆಂಚಮ್ಮ, ರತ್ನಮ್ಮ, ಮಮತಾ, ಆಂಜಿನಮ್ಮ, ಕಮಲಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT