ಶುಕ್ರವಾರ, ಸೆಪ್ಟೆಂಬರ್ 17, 2021
26 °C
ಕಾರ್ಮಿಕ ದಿನಾಚರಣೆಯಲ್ಲಿ ಎಐಟಿಯುಸಿ ರಾಜ್ಯ ಮುಖಂಡ ಡಿ.ಐ.ವಿಜಯಭಾಸ್ಕರ್

ರಫೆಲ್‌ಗಿಂತ ಫಸಲ್‌ ಬೀಮಾ ದೊಡ್ಡ ಹಗರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ರಫೆಲ್‌ಗಿಂತಲೂ ಫಸಲ್‌ ಬೀಮಾ ಯೋಜನೆ ದೊಡ್ಡ ಹಗರಣ ಎಂದು ಎಐಟಿಯುಸಿ ರಾಜ್ಯ ಮುಖಂಡ ಡಿ.ಐ.ವಿಜಯಭಾಸ್ಕರ್ ಆರೋಪಿಸಿದರು.

ಎಐಟಿಯುಸಿ ಕಚೇರಿ ಮುಂಭಾಗದಲ್ಲಿ ಬುಧವಾರ ಜಿಲ್ಲಾ ಕಾರ್ಮಿಕರ ಸಾಮೂಹಿಕ ಸಂಘಟನೆ ಹಮ್ಮಿಕೊಂಡಿದ್ದ ‘ಕಾರ್ಮಿಕ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಫಸಲ್ ಬೀಮಾಕ್ಕೆ ಹಣ ಕಟ್ಟಿದ ರೈತರಿಗೆ ಬೆಳೆನಷ್ಟದ ಪರಿಹಾರ ದೊರೆತಿಲ್ಲ. ಆದರೆ, ಕಟ್ಟಿಸಿಕೊಂಡ ಖಾಸಗಿ ಕಂಪನಿಗೆ ಲಾಭವಾಗಿದೆ. ₹ 60 ಸಾವಿರ ಕೋಟಿ  ಅವ್ಯವಹಾರವಾಗಿದ್ದು, ರೈತ ಸಮುದಾಯಕ್ಕೆ ವಂಚನೆ ಮಾಡಲಾಗಿದೆ’ ಎಂದು ದೂರಿದರು.

‘ಪ್ರಧಾನಿ ಮೋದಿ ಮಾತು ಆರಂಭಿಸುವುದೇ ‘ನಾನೂ ನಿಮ್ಮ ಹಾಗೂ ಈ ದೇಶದ ಸೇವಕ’ ಎಂದು. ಆದರೆ, ಅವರು ರಾಷ್ಟ್ರ ಸೇವಕರಲ್ಲ. ಅಂಬಾನಿ, ಅದಾನಿ ಸೇವಕರು. ಐದು ವರ್ಷದ ಆಡಳಿತದಲ್ಲಿ ಅವರಿಂದ ಬಡವರಿಗೆ, ರೈತ ಹಾಗೂ ಕಾರ್ಮಿಕ ವರ್ಗಕ್ಕೆ ಯಾವುದೇ ರೀತಿಯ ಅನುಕೂಲವಾಗಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದರು.

‘ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿ 12 ಕೋಟಿ ನಿರುದ್ಯೋಗ ಸೃಷ್ಟಿಸಿದ್ದಾರೆ. ಸಿಮೆಂಟ್, ಕಬ್ಬಿಣ, ಕಟ್ಟಡ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಅವರ ನೀತಿಗಳಿಂದಾಗಿ 2017ರಲ್ಲಿ ಕುಸಿದು ಬಿದ್ದ ಕಾರ್ಮಿಕ ವಲಯ ಈವರೆಗೂ ಮೇಲೇಳಲು ಸಾಧ್ಯವಾಗಿಲ್ಲ. ಇದರಿಂದಾಗಿ ಕಷ್ಟಪಟ್ಟು ದುಡಿಯುವ ಕಾರ್ಮಿಕರು ಕಂಗಾಲಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮೋದಿ ಅವರ ಕಾರ್ಮಿಕ ವಿರೋಧಿ ನೀತಿಯನ್ನು ಕಾರ್ಮಿಕ ಸಂಘಟನೆಗಳು ಹಿಮ್ಮೆಟ್ಟಿಸುವ ಕೆಲಸ ಮಾಡಿವೆ. ಮಧ್ಯಪ್ರದೇಶ, ರಾಜಸ್ಥಾನ ಸೇರಿ ಇತರೆ ರಾಜ್ಯಗಳಲ್ಲಿ ಬಿಜೆಪಿ ಸೋಲಲು ಕಾರ್ಮಿಕರು ಸಿಡಿದೆದ್ದಿದ್ದೆ ಕಾರಣ. ಈ ಮೂಲಕ ನಾವು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೇವೆ’ ಎಂದರು.

‘ಪಿ.ವಿ.ನರಸಿಂಹರಾವ್, ವಾಜಪೇಯಿ, ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದಾಗಲೂ ಕಾರ್ಮಿಕ ವಿರೋಧಿ ನೀತಿಗಳು ಜಾರಿಯಾಗಿದ್ದವು. ಆ ಸಂದರ್ಭದಲ್ಲಿ ನಾವು ಜಾಗೃತರಾಗಿದ್ದರಿಂದ ಮತ್ತೆ ಪ್ರಧಾನಿ ಆಗಲು ಅವಕಾಶ ಕೊಡಲಿಲ್ಲ. ಅದೇ ರೀತಿ ಮೇ 23ರ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಮೋದಿ ಕೂಡ ಮಾಜಿ ಪ್ರಧಾನಿ ಆಗಲಿದ್ದಾರೆ’ ಎಂದು ಭವಿಷ್ಯ ನುಡಿದರು.

‘ದೇಶದಲ್ಲಿ ಕೆಂಪು ವರ್ಣದ ಬಾವುಟ ಕಂಗೊಳಿಸಬೇಕಾದರೆ 20 ಕೋಟಿಯಷ್ಟು ಜನಸಂಖ್ಯೆಯುಳ್ಳ ಕಾರ್ಮಿಕ ಸಮುದಾಯ ಕೇಂದ್ರದಲ್ಲಿ ಗದ್ದುಗೆ ಏರಬೇಕು. ಇನ್ನೂ ಮುಂದಾದರೂ ರಾಷ್ಟ್ರ, ರಾಜ್ಯ ಆಳುವಂಥ ಸಾಮರ್ಥ್ಯ ಬೆಳೆಸಿಕೊಳ್ಳಬೇಕು’ ಎಂದು ಕಾರ್ಮಿಕರಿಗೆ ಸಲಹೆ ನೀಡಿದರು.

ಎಐಟಿಯುಸಿ ಜಿಲ್ಲಾ ಮಂಡಳಿ ಅಧ್ಯಕ್ಷ ಬಿ.ಬಸವರಾಜ್, ‘ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹರಿಸುವ ನಿಟ್ಟಿನಲ್ಲಿ ಯಾವ ಸರ್ಕಾರಗಳು ಕೆಲಸ ಮಾಡುತ್ತಿಲ್ಲ. ಮಳೆ ಇಲ್ಲದೆ, ಜಿಲ್ಲೆಯಲ್ಲಿ ಬರ ತಾಂಡವವಾಡುತ್ತಿದೆ. ಉದ್ಯೋಗವಿಲ್ಲದೆ ಜನತೆ ಗುಳೆ ಹೋಗುತ್ತಿದ್ದಾರೆ. ಹೀಗಿದ್ದರೂ ಮರ ಕಡಿಯುವ ಪ್ರಕ್ರಿಯೆ ಮುಂದುವರೆದಿದ್ದು, ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶಕ್ಕೆ ಸರ್ಕಾರಗಳೇ ಮುಂದಾಗುತ್ತಿವೆ’ ಎಂದು ದೂರಿದರು.

ಮುಖಂಡರಾದ ಜಿ.ಸಿ.ಸುರೇಶ್‌ಬಾಬು, ಸಿ.ವೈ.ಶಿವರುದ್ರಪ್ಪ, ಜಯರಾಂರೆಡ್ಡಿ, ದೊಡ್ಡ ಉಳ್ಳಾರ್ತಿ ಕರಿಯಣ್ಣ, ಟಿ.ಆರ್.ಉಮಾಪತಿ, ಜಯದೇವಮೂರ್ತಿ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು