ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಪ್ರವಾಸೋದ್ಯಮಕ್ಕೆ ಮೂಲಸೌಲಭ್ಯದ ಗ್ರಹಣ

ದುರ್ಗಮವಾಗಿದೆ ಕೋಟೆ ಸಂಪರ್ಕ ರಸ್ತೆ; ದೂರವಾದ ಶೌಚಾಲಯ, ಕುಡಿಯುವ ನೀರು
Published 29 ಏಪ್ರಿಲ್ 2024, 7:47 IST
Last Updated 29 ಏಪ್ರಿಲ್ 2024, 7:47 IST
ಅಕ್ಷರ ಗಾತ್ರ

ಚಿತ್ರದುರ್ಗ: ವರ್ಷದ 365 ದಿನಗಳೂ ಪ್ರವಾಸಿಗರನ್ನು ಸೆಳೆಯುವ ಚಿತ್ರದುರ್ಗದ ಪ್ರವಾಸಿ ತಾಣಗಳು ಮೂಲಸೌಲಭ್ಯದಿಂದ ವಂಚಿತವಾಗಿವೆ. ಒಮ್ಮೆ ಬಂದವರು ಪುನಃ ಬರಲು ಯೋಚನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ವಾರಾಂತ್ಯ, ದಸರಾ, ಬೇಸಿಗೆ, ಕ್ರಿಸ್‌ಮಸ್‌, ಹೊಸ ವರ್ಷದ ಆರಂಭದಲ್ಲಿ ಏಳುಸುತ್ತಿನ ಕೋಟೆಗೆ ಪ್ರವಾಸಿಗರು ಲಗ್ಗೆ ಹಾಕುತ್ತಾರೆ. ಕೋಟೆಗೆ ಬಂದವರು ಚಂದ್ರವಳ್ಳಿ, ಆಡುಮಲ್ಲೇಶ್ವರ, ಮುರುಘಾವನ, ವಿ.ವಿ. ಸಾಗರ ಜಲಾಶಯ ಸೇರಿ ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಸಾಮಾನ್ಯ.

ಮಳೆಗಾಲ ಅಂತ್ಯವಾಗುತ್ತಿದ್ದಂತೆ ಪ್ರವಾಸೋದ್ಯಮ ಜಿಲ್ಲೆಯಲ್ಲಿ ನವಿಲಿನಂತೆ ಗರಿಗೆದರುತ್ತದೆ. ಆರು ತಿಂಗಳು ಅತಿ ಹೆಚ್ಚು ಪ್ರವಾಸಿಗರು ಚಿತ್ರದುರ್ಗಕ್ಕೆ ಬರುತ್ತಾರೆ. ರಾಜ್ಯ, ಹೊರರಾಜ್ಯದವರ ಜತೆ ವಿದೇಶಿ ಪ್ರವಾಸಿಗರು ಭೇಟಿ ನೀಡುವುದು ವಿಶೇಷ. ಶೈಕ್ಷಣಿಕ ಪ್ರವಾಸದ ಪಟ್ಟಿಯಲ್ಲಿ ಚಿತ್ರದುರ್ಗ ಕಡ್ಡಾಯವಾದಂತೆ ಆಗಿದೆ.

ಐತಿಹಾಸಿಕ ಕೋಟೆಯ ಮುಂಭಾಗದಲ್ಲಿ ವಾಹನ ಪಾರ್ಕಿಂಗ್‌ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೋಟೆಯ ಪ್ರವೇಶದ್ವಾರಕ್ಕೆ ತೆರಳುವ ಮಾರ್ಗದ ಎರಡೂ ಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಪ್ರವಾಸಿಗರ ಸಂಚಾರಕ್ಕೆ ತೊಡಕುಂಟಾಗಿದೆ. ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಸ್ಥಳೀಯರೂ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಕೋಟೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ
ಕೋಟೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ

ಪಾರ್ಕಿಂಗ್ ಅವ್ಯವಸ್ಥೆಯಿಂದಾಗಿ ಶೈಕ್ಷಣಿಕ ಪ್ರವಾಸಕ್ಕೆ ಬರುವ ಮಕ್ಕಳು, ಶಿಕ್ಷಕರಲ್ಲಿ ಅಸುರಕ್ಷತೆಯ ಆತಂಕ ಎದುರಾಗಿದೆ. ಕೋಟೆಗೆ ತೆರಳುವ ಮಾರ್ಗ ಕೂಡ ಅವ್ಯವಸ್ಥೆಯಿಂದ ಕೂಡಿದೆ. ಕೋಟೆಗೆ ನೇರ ಮಾರ್ಗ ಇಲ್ಲದಿರುವುದರಿಂದ ಪ್ರವಾಸಿಗರು ಹೈರಾಣ ಆಗುತ್ತಿದ್ದಾರೆ. ಎಲ್ಲೆಂದರಲ್ಲಿ ಸಂಚರಿಸಿ ಕೋಟೆ ತಲುಪುವ ಹೊತ್ತಿಗೆ ತಾಣ ಕಣ್ತುಂಬಿಕೊಳ್ಳುವ ಆಸಕ್ತಿ ಕುಗ್ಗುತ್ತಿದೆ.

ಆನೆಬಾಗಿಲು, ರಂಗಯ್ಯನ ಬಾಗಿಲಿನಿಂದ ಕಾರುಗಳು ಮಾತ್ರ ಪ್ರವೇಶಿಸಬಹುದು. ಬಸ್‌ಗಳು ಜೋಗಿಮಟ್ಟಿ ರಸ್ತೆಯಿಂದ ಬರಲು ಮಾರ್ಗ ಕಲ್ಪಿಸಲಾಗಿದೆ. ಆದರೆ ರಸ್ತೆ ಒತ್ತುವರಿಯಾಗಿರುವ ಕಾರಣ ರಸ್ತೆ ಬದಿ ವಾಹನ ನಿಲುಗಡೆ ಮಾಡಿ ನಡೆದು ಕೋಟೆ ತಲುಪುವ ಸ್ಥಿತಿ ನಿರ್ಮಾಣವಾಗಿದೆ. ಕರುವಿನಕಟ್ಟೆ ಮಾರ್ಗವಾಗಿ ಹೋಗಬೇಕೆಂದರೆ ಏಕನಾಥೇಶ್ವರಿ ಪಾದಗುಡಿ ರಸ್ತೆ ಕಿರಿದಾಗಿದೆ. ಬಸ್‌ಗಳು ಹರಸಾಹಸದಿಂದ ಕೋಟೆ ಮುಂಭಾಗಕ್ಕೆ ತಲುಪುತ್ತಿವೆ.

ಕೋಟೆ ಪ್ರವೇಶ ದ್ವಾರಕ್ಕೆ ಬರುವಷ್ಟರಲ್ಲಿ ಸುಸ್ತಾಗುವ ಪ್ರವಾಸಿಗರಿಗೆ ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತವೆ. ಕೋಟೆಯನ್ನು ವೀಕ್ಷಿಸಲು ಕನಿಷ್ಠ ಎರಡು ಗಂಟೆಯಾದರೂ ಬೇಕಾಗುತ್ತದೆ. ಬೆಟ್ಟ ಹತ್ತಿ ಎಲ್ಲೆಡೆ ಸುತ್ತಾಡುವ ಪ್ರವಾಸಿಗರಿಗೆ ಜಲಬಾಧೆ ಕಾಡಿದರೆ ಸಮರ್ಪಕ ಶೌಚಾಲಯಗಳಿಲ್ಲ. ಕೋಟೆಯ ಕೆಳಭಾಗ ಹಾಗೂ ಮೇಲುದುರ್ಗದಲ್ಲಿ ಎರಡು ಶೌಚಾಲಯಗಳಿದ್ದು, ಎರಡು ದುರಸ್ತಿಯಲ್ಲಿವೆ. ಹೀಗಾಗಿ, ಶಾಲಾ ವಿದ್ಯಾರ್ಥಿಗಳು, ಪುರುಷರು ಕೋಟೆಯ ಬಯಲು ಪ್ರದೇಶದಲ್ಲಿಯೇ ಮಲ–ಮೂತ್ರ ವಿಸರ್ಜನೆ ಮಾಡುವುದು ಅನಿವಾರ್ಯವಾಗಿದೆ.

ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಬಳಿ ಪ್ರವಾಸಿಗರಿಗೆ ನಿರ್ಮಿಸಿರುವ ವಸತಿ ಗೃಹಗಳ ದುಃಸ್ಥಿತಿ
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಬಳಿ ಪ್ರವಾಸಿಗರಿಗೆ ನಿರ್ಮಿಸಿರುವ ವಸತಿ ಗೃಹಗಳ ದುಃಸ್ಥಿತಿ

ಕೋಟೆಯಲ್ಲಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಹೊಸದಾಗಿ ನಿರ್ಮಿಸುತ್ತಿರುವ ಕಾರಣ ಸಮಸ್ಯೆ ತೀವ್ರವಾಗಿದೆ. ಪ್ರವಾಸಿಗರಿಗೆ ಮೂಲಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕೋಟೆಯ ಮುಂಭಾಗದಲ್ಲಿ ನಿರ್ಮಿಸುತ್ತಿರುವ ಕಟ್ಟಡಕ್ಕೆ ಇನ್ನೂ ಉದ್ಘಾಟನೆಯ ಭಾಗ್ಯ ಸಿಕ್ಕಿಲ್ಲ. ಟಿಕೆಟ್‌ ಕೌಂಟರ್‌, ಪುರಾತತ್ವ ಇಲಾಖೆಯ ಪುಸ್ತಕ ಮಳಿಗೆ, ಪ್ರವಾಸಿಗರ ಲಗೇಜ್‌ ಕೊಠಡಿ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶೌಚಾಲಯವನ್ನು ಒಂದೇ ಸೂರಿನಡಿ ತರುವುದು ಈ ಕಟ್ಟಡದ ಉದ್ದೇಶವಾಗಿತ್ತು. ಆದರೆ ವರ್ಷಗಳೇ ಕಳೆದರೂ ಉದ್ಘಾಟನೆ ಆಗದಿರುವುದು ಸಮಸ್ಯೆಗೆ ಕಾರಣವಾಗಿದೆ.

ಸೌಲಭ್ಯ ವಂಚಿತ ರಾಮದುರ್ಗ ಬಳಿಯ ಹೊಸಗುಡ್ಡ
ಸೌಲಭ್ಯ ವಂಚಿತ ರಾಮದುರ್ಗ ಬಳಿಯ ಹೊಸಗುಡ್ಡ
ಅನೇಕ ಕೌತುಕದ ಕೋಟೆಯು ಮೂಲಸೌಲಭ್ಯದಿಂದ ವಂಚಿತವಾಗಿದೆ. ಹನಿ ನೀರಿಗೂ ಪರದಾಡುವ ಸ್ಥಿತಿಯಿದೆ. ಹಂಪಿ ಮಾದರಿಯಲ್ಲಿ ಅಭಿವೃದ್ಧಿ ಮಾಡಿದರೆ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗುತ್ತದೆ.
ಚಂದ್ರಕಾಂತ್‌ ಪ್ರವಾಸಿಗ
ಮೊಳಕಾಲ್ಮುರು ತಾಲ್ಲೂಕಿನ ಐತಿಹಾಸಿಕ ಅಶೋಕನ ಶಾಸನ
ಮೊಳಕಾಲ್ಮುರು ತಾಲ್ಲೂಕಿನ ಐತಿಹಾಸಿಕ ಅಶೋಕನ ಶಾಸನ
ಮಹಿಳಾ ಪ್ರವಾಸಿಗರು ಇನ್ನಿಲ್ಲದ ಸಮಸ್ಯೆ ಅನುಭವಿಸುವಂತಾಗಿದೆ. ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ನಿಜಕ್ಕೂ ದುರಂತ. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕಿದೆ.
ರೋಹಿಣಿ ಪ್ರವಾಸಿಗರು
ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯ ಜನರಿಗೂ ಮೊಳಕಾಲ್ಮುರಿನ ಐತಿಹ್ಯ ಸ್ಥಳಗಳ ಮಾಹಿತಿ ಸರಿಯಾಗಿ ದೊರೆಯುತ್ತಿಲ್ಲ. ಇದರಿಂದ ಪ್ರವಾಸಿಗಳು ಬರಲು ಸಾಧ್ಯವಾಗುತ್ತಿಲ್ಲ.
ರಾಜಾಶ್ರೀಧರ ನಾಯಕ ಸಾಹಿತಿ ಮೊಳಕಾಲ್ಮುರು

ಮಾಹಿತಿ ಕೊರತೆ; ಆಗಬೇಕಿದೆ ಪ್ರಚಾರ - ಕೊಂಡ್ಲಹಳ್ಳಿ ಜಯಪ್ರಕಾಶ ಮೊಳಕಾಲ್ಮುರು

ಜಿಲ್ಲೆಯಲ್ಲಿ ಅತಿಹೆಚ್ಚು ಐತಿಹ್ಯ ಮತ್ತು ಪ್ರಾಚೀನ ಕುರುಹುಗಳನ್ನು ಹೊಂದಿರುವ ತಾಲ್ಲೂಕು ಮೊಳಕಾಲ್ಮುರು. ಆದರೆ ಮಾಹಿತಿ ಕೊರತೆಯಿಂದಾಗಿ ಇವು ಅನಾವರಣ ಆಗುತ್ತಿಲ್ಲ. ಶಿಲಾಯುಗ ಕಾಲದಲ್ಲಿಯೂ ಇಲ್ಲಿ ಜನರು ವಾಸವಿದ್ದರು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹಾನಗಲ್‌ ಗುಂಡ್ಲೂರು ಊಡೇವು ರೊಪ್ಪ ಮುಂತಾದ ಕಡೆಗಳಲ್ಲಿನ ಗುಹೆಗಳಲ್ಲಿ ಕಾಣಸಿಕ್ಕಿರುವ ಆಗಿನ ಕಲಾಕೃತಿಗಳು ಮತ್ತು ಸಮಾಧಿಗಳು ಇದಕ್ಕೆ ಸಾಕ್ಷಿಯಾಗಿವೆ. ಅಶೋಕ ಸಿದ್ದಾಪುರ ಬಳಿಯ ಅಶೋಕನ ಶಾಸನ ವೀಕ್ಷಣೆಗೆ ಬರುವ ಸಂಪರ್ಕ ರಸ್ತೆಗೆ ಸೂಚನಾ ಫಲಕ ಅಳವಡಿಸಿಲ್ಲ. ಶಾಸನ ಸ್ಥಳವು ಅಭಿವೃದ್ಧಿಯಿಂದ ದೂರವಾಗಿದ್ದು ಜಾನುವಾರು ಮೇಯುವ ತಾಣವಾಗಿ ಬದಲಾಗಿದೆ. ‘ಶಾಸನ ಸಮೀಪದಲ್ಲಿರುವ ಶಿಲಾಯುಗ ಕಾಲದ ಸಮಾಧಿಗಳು ಜೈನ ಬಸದಿಗಳು ಒಂದೇ ಸ್ಥಳದಲ್ಲಿ ಗ್ರಾಮಸ್ಥರು ಶವಸಂಸ್ಕಾರ ಮಾಡುವ ಕಾಡು ಸಿದ್ದಾಪುರ ಅಲ್ಲಿನ ಕಲ್ಲಿನ ಕುದುರೆ ಅಕ್ಕ-ತಂಗಿ ದೇವಸ್ಥಾನ ಐತಿಹ್ಯದ ಬ್ರಹ್ಮಗಿರಿ ಬೆಟ್ಟ ಬೆಟ್ಟದ ಮೇಲಿನ ಅರಮನೆ ಮುಚ್ಚುವಾಗ ಸಿಂಘ ಘರ್ಜನೆ ಮಾಡುವ ಅರಮನೆ ಮುಂಬಾಗಿಲಿನ ವೈಶಿಷ್ಟ್ಯಗಳು ಸಮರ್ಪಕವಾಗಿ ಅನಾವರಣವಾಗಿಲ್ಲ’ ಎಂದು ಬೇಸರಿಸುತ್ತಾರೆ ನಿವೃತ್ತ ಅರಣ್ಯಾಧಿಕಾರಿ ಎನ್‌. ಶ್ರೀರಾಮುಲು. ನುಂಕಿಮಲೆ ಸಿದ್ದೇಶ್ವರ ಬೆಟ್ಟದ ದೇವಸ್ಥಾನ ಜಟ್ಟಂಗಿ ರಾಮೇಶ್ವರ ಬೆಟ್ಟ ನಿರೀಕ್ಷೆಯಂತೆ ಪ್ರವಾಸಿಗರನ್ನು ತಲುಪಿಲ್ಲ. ಪ್ರವಾಸೋದ್ಯಮ ಇಲಾಖೆಯು ಈ ಸ್ಥಳಗಳಿಗೆ ಹೋಗುವ ಮಾರ್ಗದ ಸೂಚನಾ ಫಲಕ ಅಳವಡಿಕೆ ಸ್ಥಳ ಮಾಹಿತಿ ಫಲಕ ಹಾಕುವ ಜತೆಗೆ ಜಿಲ್ಲಾಮಟ್ಟದಲ್ಲಿ ಪ್ರಚಾರಕ್ಕೆ ಕ್ರಮ ಕೈಗೊಳ್ಳಬೇಕಿದೆ.

ಪ್ರವಾಸಿಗರಿಂದ ದೂರವಾದ ವಿವಿ ಸಾಗರ- ಸುವರ್ಣಾ ಬಸವರಾಜ್‌ ಹಿರಿಯೂರು:

ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಸುತ್ತಮುತ್ತ ಹತ್ತಾರು ಸುಂದರ ಪ್ರೇಕ್ಷಣೀಯ ಸ್ಥಳಗಳಿವೆ. ಆದರೆ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯದಿಂದ ಅವುಗಳನ್ನು ಕಣ್ತುಂಬಿಕೊಳ್ಳುವ ಅವಕಾಶದಿಂದ ಪ್ರವಾಸಿಗರು ವಂಚಿತರಾಗಿದ್ದಾರೆ. ವಾಣಿವಿಲಾಸ ಜಲಾಶಯ ವೀಕ್ಷಿಸುವುದೇ ಒಂದು ರೋಚಕ ಅನುಭವ. ಕಣಿವೆ ಮಾರಮ್ಮ ದೇವಿ ದೇವಸ್ಥಾನ ಕೋಡಿಯ ಮೇಲ್ಭಾಗದಲ್ಲಿರುವ ಆರನಕಣಿವೆ ರಂಗನಾಥಸ್ವಾಮಿ ದೇಗುಲ ಅಣೆಕಟ್ಟೆಯ ಬಲಭಾಗದಲ್ಲಿರುವ ಛತ್ರಿ ಗುಡ್ಡ ಪ್ರಕೃತಿ ವಿಹಾರವನ ಹೀಗೆ ಸಾಲು ಸಾಲು ಸ್ಥಳಗಳು ನಿರ್ಲಕ್ಷ್ಯಕ್ಕೆ ಗುರಿಯಾಗಿವೆ. ಕೆ.ಎಚ್‌. ರಂಗನಾಥ ಅವರು ಅರಣ್ಯ ಸಚಿವರಾಗಿದ್ದಾಗ 2004ರಲ್ಲಿ ನಿರ್ಮಿಸಿದ್ದ ‘ಪ್ರಕೃತಿ ವಿಹಾರ ವನ’ ಕುಟುಂಬದ ಸದಸ್ಯರಿಗೆ ತಂಪೆರೆಯುವ ತಾಣವಾಗಿತ್ತು. ಒಳಹೊಕ್ಕರೆ ಹೊರಗೆ ಬರಲು ಗಂಟೆಗಳೇ ಬೇಕಿತ್ತು. ಆದರೆ ನಿರ್ವಹಣೆಯ ಕೊರತೆಯಿಂದ ಈಗ ಸ್ಮಶಾನದಂತಾಗಿದೆ. ಪ್ರಕೃತಿ ವನದ ಎದುರು 2014ರಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಆರ್‌.ವಿ. ದೇಶಪಾಂಡೆ ₹ 5 ಕೋಟಿ ವೆಚ್ಚದಲ್ಲಿ ಮೂಲಸೌಲಭ್ಯ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಹತ್ತು ವರ್ಷ ಕಳೆದರೂ ನಿರ್ಮಿತಿ ಕೇಂದ್ರದವರು ಕಾಮಗಾರಿ ಪೂರ್ಣಗೊಳಿಸದ ಕಾರಣ ಇಡೀ ಆವರಣ ಹಾಳು ಕೊಂಪೆಯಾಗಿದೆ. ವಾಣಿವಿಲಾಸ ಅಣೆಕಟ್ಟೆ ನೋಡಲು ನಿರ್ಬಂಧ ವಿಧಿಸಿರುವುದು ಅಗತ್ಯ ಸೌಲಭ್ಯಗಳು ಇಲ್ಲದಿರುವ ಕಾರಣ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿದೆ. ಆದರೆ ಕಣಿವೆ ಮಾರಮ್ಮ ದೇಗುಲಕ್ಕೆ ನಿತ್ಯ ಬಂದು ಹೋಗುವ ನೂರಾರು ಭಕ್ತರಿಗೆ ವಿಶ್ರಾಂತಿ ಪಡೆಯಲು ಮೇಲಿನ ಎರಡು ಉದ್ಯಾನಗಳು ನೆರವಾಗಬೇಕಿತ್ತು. ಆದರೆ ಆಡಳಿತ ನಡೆಸುವವರ ನಿರ್ಲಕ್ಷ್ಯದಿಂದ ಸುಂದರ ಪ್ರವಾಸಿ ತಾಣವೊಂದು ಪ್ರವಾಸಿಗರಿಗೆ ದೊರೆಯದಂತಾಗಿದೆ. ವಾಣಿವಿಲಾಸ ಜಲಾಶಯದ ಪ್ರದೇಶವನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿಸುವ ಎಲ್ಲ ಅವಕಾಶಗಳಿವೆ. ದೋಣಿ ವಿಹಾರ ರೋಪ್ ವೇ ಅಣೆಕಟ್ಟೆಯ ಕೆಳ ಭಾಗದಲ್ಲಿ ಕೆಆರ್‌ಎಸ್‌ ಮಾದರಿ ಉದ್ಯಾನ ಜಲಾಶಯದ ಮಧ್ಯಭಾಗದಲ್ಲಿನ ನಡುಗಡ್ಡೆ ಮೇಲೆ ಪ್ರವಾಸಿ ವಸತಿಯುತ ಹೋಟೆಲ್‌ ಬೋಟ್ ತಂಗುದಾಣ ನಿರ್ಮಿಸಿ ಉದ್ಯಾನಗಳಿಗೆ ಕಾಯಕಲ್ಪ ನೀಡಿದರೆ ಪ್ರವಾಸಿಗರ ಸ್ವರ್ಗವಾಗಲಿದೆ.

ಅಚ್ಚುಮೆಚ್ಚಿನ ತಾಣಕ್ಕಿಲ್ಲ ಸೌಲಭ್ಯ- ವಿ.ಧನಂಜಯ ನಾಯಕನಹಟ್ಟಿ:

ಹೋಬಳಿ ವ್ಯಾಪ್ತಿಯಲ್ಲಿನ ಪ್ರವಾಸಿ ತಾಣಗಳು ಮೂಲಸೌಲಭ್ಯದಿಂದ ವಂಚಿತವಾಗಿದ್ದು ಪ್ರವಾಸಿಗರು ಹೈರಾಣಾಗಿದ್ದಾರೆ. ವರ್ಷಪೂರ್ತಿ ಚಿತ್ರದುರ್ಗ ದಾವಣಗೆರೆ ತುಮಕೂರು ಬೆಂಗಳೂರು ಕೋಲಾರ ಪಾವಗಡ ಕೊಟ್ಟೂರು ಬಳ್ಳಾರಿ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಹಾಗೂ ಆಂಧ್ರಪ್ರದೇಶ ತೆಲಂಗಾಣ ತಮಿಳುನಾಡು ಮಹಾರಾಷ್ಟ್ರದಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಜತೆಗೆ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗುತ್ತಿದೆ. ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಹಾಗೂ ಪ್ರವಾಸಿಗರ ಪೈಕಿ ಕೆಲವರು ಹೊಸಗುಡ್ಡ ಗೌರೀಪುರದ ಉಮಾಮಹೇಶ್ವರ ದೇವಾಲಯ ದೊಡ್ಡಕೆರೆ ವೀಕ್ಷಣೆಗೆ ತೆರಳುತ್ತಾರೆ. ಬಹುತೇಕರಿಗೆ ಮಾಹಿತಿ ಕೊರತೆ ಎದುರಾಗಿರುವುದರಿಂದ ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರಿಂದ ದೂರವಾಗಿವೆ. ನಾಯಕನಹಟ್ಟಿ ದಕ್ಷಿಣ ಭಾಗದಲ್ಲಿ ಕಂಡುಬರುವ ರಾಮದುರ್ಗ ಅಥವಾ ಹೊಸಗುಡ್ಡ 120 ಅಡಿ ಎತ್ತರದ ಪ್ರದೇಶದಲ್ಲಿದೆ. ಬಾದಾಮಿ ಹೊರತುಪಡಿಸಿದರೆ ಹೊಸಗುಡ್ಡವು ರಾಜ್ಯದ ಎರಡನೇ ಗುಹಾಂತರ ದೇವಾಲಯವಾಗಿದೆ. ನೀರಿನ ವ್ಯವಸ್ಥೆಯಿದ್ದರೂ ನೆರಳಿನ ವ್ಯವಸ್ಥೆ ಇಲ್ಲ. ಶೌಚಾಲಯವಂತು ದೂರದ ಮಾತು. ಎನ್‌.ಗೌರೀಪುರದ ಉಮಾಮಹೇಶ್ವರ ದೇವಾಲಯ ಭಕ್ತರ ನೆಚ್ಚಿನ ಆಧ್ಯಾತ್ಮಿಕ ತಾಣವಾಗಿದೆ. ಮೂಲಸೌಕರ್ಯ ಸಾರಿಗೆ ಸಂಪರ್ಕದ ಕೊರತೆಯಿದೆ. ವೈಜ್ಞಾನಿಕ ಮಾನದಂಡ ಅನುಸರಿಸಿ ತಿಪ್ಪೇರುದ್ರಸ್ವಾಮಿ ಕಟ್ಟಿಸಿದ ದೊಡ್ಡಕೆರೆ ಚಿಕ್ಕಕೆರೆಗಳಿಗೆ ಕಾಯಕಲ್ಪದ ಅವಶ್ಯಕತೆ ಇದೆ. ಪಟ್ಟಣದಲ್ಲಿ ಸುಸಜ್ಜಿತವಾದ ಬಸ್‌ ನಿಲ್ದಾಣ ಪ್ರವಾಸಿ ತಾಣಗಳಿಗೆ ಸಾರಿಗೆ ಸಂಪರ್ಕ ಮೂಲಸೌಕರ್ಯ ಅಭಿವೃದ್ಧಿಪಡಿಸಿದರೆ ರಾಜ್ಯದಲ್ಲಿಯೇ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣವಾಗಿ ಸಾವಿರಾರು ಜನರ ಆಕರ್ಷಣೀಯ ಕೇಂದ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆಧ್ಯಾತ್ಮ ಚಿಂತಕರು ಪರಿಸರ ಪ್ರೇಮಿಗಳು ಪ್ರವಾಸಿಗರು ಭಕ್ತರನ್ನು ಒಳಗೊಂಡಂತೆ ಎಲ್ಲರಿಗೂ ಅಚ್ಚುಮೆಚ್ಚಿನ ತಾಣವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT