ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ | ಮೆಕ್ಕೆಜೋಳಕ್ಕೆ ಮಳೆ ಕೊರತೆ; ಆತಂಕ

ವಾರದಿಂದೀಚೆಗೆ ತಗ್ಗಿದ ಮಳೆ ಪ್ರಮಾಣ; ಶೇಂಗಾ ಬಿತ್ತನೆಗೆ ಹಿನ್ನಡೆಯಾಗುವ ಭಯ
Published 21 ಜೂನ್ 2024, 7:20 IST
Last Updated 21 ಜೂನ್ 2024, 7:20 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಳೆದೊಂದು ವಾರದಿಂದ ಜಿಲ್ಲೆಯ ವಿವಿಧೆಡೆ ಮಳೆ ಕೊರತೆಯಾಗಿದ್ದು ಬಿತ್ತನೆಯಾಗಿ ಮೊಳಕೆಯೊಡೆದಿದ್ದ ಮೆಕ್ಕೆಜೋಳಕ್ಕೆ ತೀವ್ರ ತೊಂದರೆಯಾಗಿದೆ. ಜೊತೆಗೆ ಶೇಂಗಾ ಬಿತ್ತನೆಗೆ ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೂ ಆತಂಕ ಆರಂಭವಾಗಿದೆ.

ಮುಂಗಾರು ಹಂಗಾಮಿನಲ್ಲಿ ಸರಾಸರಿ ಉತ್ತಮ ಮಳೆಯಾಗಿದೆ, ಜಿಲ್ಲೆಯಲ್ಲಿ ಒಟ್ಟಾರೆ ವಾಡಿಕೆ ಮಳೆಗಿಂದ ಶೇ 53ರಷ್ಟು ಹೆಚ್ಚುವರಿ ಮಳೆಯಾಗಿದೆ. ಆದರೆ ಕಳೆದೊಂದು ವಾರದಿಂದ ಮಳೆ ತಗ್ಗಿರುವ ಕಾರಣ ಬೆಳೆಗೆ ತೇವಾಂಶದ ಕೊರತೆಯುಂಟಾಗಿ ಗಿಡಗಳು ಬಾಡುವ ಹಂತ ತಲುಪಿವೆ. ಇನ್ನು 4–5 ದಿನ ಮಳೆ ಬಾರದಿದ್ದರೆ ಒಣಗಿ ಹೋಗುವ ಸಾಧ್ಯತೆಯಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಾರೆ.

ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಭಾಗದಲ್ಲಿ ಹೆಚ್ಚಿನ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಒಟ್ಟಾರೆ ಜಿಲ್ಲೆಯಾದ್ಯಂತ ಮಳೆಯಾಶ್ರಿತ, ಖುಷ್ಕಿ ಪ್ರದೇಶ ಸೇರಿ 47,200 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಹಿರಿಯೂರು, ಚಿತ್ರದುರ್ಗ ತಾಲ್ಲೂಕಿನ ಕೆಲವು ಭಾಗದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ಮೆಕ್ಕೆಜೋಳ ಮೊಳಕೆಯೊಡೆದು ಅಡಿ ಎತ್ತರ ಪೈರು ಬಂದಿದೆ. ಇಂತಹ ಸಂದರ್ಭದಲ್ಲಿ ಮಳೆ ಕೈಕೊಟ್ಟಿರುವುದು ರೈತರಿಗೆ ನುಂಗಲಾಗದ ತುತ್ತಾಗಿದೆ.

‘ಮೆಕ್ಕೆಜೋಳ ಹಸನಾಗಿ ಬೆಳೆದಿದ್ದು ಎಡೆಕುಂಟೆ ಒಡೆದಿದ್ದೇವೆ. ಕುಂಟೆ ಒಡೆದ 2 ದಿನದಲ್ಲಿ ಮಳೆ ಬಂದಿದ್ದರೆ ಪೈರು ಚೆನ್ನಾಗಿ ಬೆಳೆಯುತ್ತಿತ್ತು. ಇಂತಹ ಸಂದರ್ಭದಲ್ಲೇ ಮಳೆ ಹೋಗಿದ್ದು ಬೆಳೆ ಹಾಳಾಗುವ ಭಯ ಆರಂಭವಾಗಿದೆ. ಈಗ ಒಂದು ಹದ ಮಳೆ ಬಂದರೆ ಮಾತ್ರ ಪೈರು ಉಳಿಯುತ್ತದೆ, ಇಲ್ಲದಿದ್ದರೆ ಬಿಸಿಲಿಗೆ ಸುಟ್ಟು ಹೋಗುತ್ತದೆ’ ಎಂದು ಹೊಳಲ್ಕೆರೆ ತಾಲ್ಲೂಕಿನ ರೈತ ಶಿವಪ್ಪ ಆತಂಕ ವ್ಯಕ್ತಪಡಿಸಿದರು.

ಮೊಳಕಾಲ್ಮೂರು, ಚಳ್ಳಕೆರೆ ಸೇರಿದಂತೆ ಜಿಲ್ಲೆಯ ಹಲವಡೆ ಶೇಂಗಾ ಬಿತ್ತನೆಗೆ ಹೊಲ ಹಸನು ಮಾಡುತ್ತಿದ್ದಾರೆ. ಜೊತೆಗೆ ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹ ಮಾಡಿ ಇಟ್ಟುಕೊಂಡಿದ್ದಾರೆ. ಜುಲೈ ಮೊದಲ ವಾರದಲ್ಲಿ ಶೇಂಗಾ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವ ಹೊತ್ತಿನಲ್ಲಿ ಮಳೆ ತಗ್ಗಿರುವುದು ಶೇಂಗಾ ಬೆಳೆಗಾರರ ಎದೆಯಲ್ಲಿ ಢವಢವ ಸೃಷ್ಟಿಸಿದೆ. ಬೆಳೆಗೆ ಹಿನ್ನಡೆಯಾಗುವ ಭೀತಿ ರೈತರನ್ನು ಕಾಡುತ್ತಿದೆ.

ಇಲ್ಲಿಯವರೆಗೆ ಜಿಲ್ಲೆಯಲ್ಲಿ 6,857 ಹೆಕ್ಟೇರ್‌ ಪ್ರದೇಶದಲ್ಲಿ ಈಗಾಗಲೇ ಶೇಂಗಾ ಬಿತ್ತನೆಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 3,360 ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ. ಪೈರು ಮೇಲೇಳುವ ಹಂತದಲ್ಲಿ ಮಳೆ ಕೊರತೆಯಾಗಿದ್ದು ರೈತರು ಆತಂಕಗೊಂಡಿದ್ದಾರೆ. ಬಿಸಿಲು ಹೆಚ್ಚುತ್ತಿದ್ದು ಸಸಿ ಮಣ್ಣಿನಲ್ಲೇ ಒಣಗಿ ಹೋಗುವ ಭೀತಿ ರೈತರನ್ನು ಕಾಡುತ್ತಿದೆ.

‘ಜುಲೈ ತಿಂಗಳಲ್ಲಿ ಶೇಂಗಾ ಬಿತ್ತನೆ ಮಾಡಲು ಈಗಿನಿಂದಲೇ ಉತ್ತಮ ಮಳೆಯಾಗಬೇಕು. ಈಗ ಮಳೆ ಕೈಕೊಟ್ಟರೆ ಜುಲೈ ಮೊದಲ ವಾರದಲ್ಲಿ ಶೇಂಗಾ ಬಿತ್ತನೆಗೆ ತೊಂದರೆಯಾಗುತ್ತದೆ. ಬೆಳೆ ತಡವಾದರೆ ರೈತರು ತೀವ್ರ ನಷ್ಟ ಅನುಭವಿಸುವ ಅಪಾಯವಿದೆ’ ರೈತಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಧನಂಜಯ ಹೇಳಿದರು.

ಶೇಂಗಾ ಬೆಳೆಗೆ ಹಿನ್ನೆಡೆಯಾಗುವ ಆತಂಕ ಮೆಕ್ಕೆಜೋಳ ಮೇಲೆದ್ದ ನಂತರ ನಿಂತ ಮಳೆ ಸರಾಸರಿ ಮಳೆ ಅಧಿಕವಿದ್ದರೂ ಇಲ್ಲದ ತೇವಾಂಶ
ಸದ್ಯ ಬಿತ್ತನೆ ಬೀಜ ರಸಗೊಬ್ಬರಕ್ಕೆ ಕೊರತೆ ಇಲ್ಲ. 18 ಸಾವಿರ ಟನ್ ಗೊಬ್ಬರ ದಾಸ್ತಾನಿದೆ. ಡಿಐಪಿ ಗೊಬ್ಬರಕ್ಕೆ ಬೇಡಿಕೆ ಬರುತ್ತಿದ್ದು 3500 ಟನ್ ಡಿಐಪಿ ಗೊಬ್ಬರ ಪೂರೈಕೆಗೆ ಪ್ರಸ್ತಾವ ಸಲ್ಲಿಸಲಾಗಿದೆ
ಬಿ.ಮಂಜುನಾಥ್‌ ಕೃಷಿ ಜಂಟಿ ನಿರ್ದೇಶಕ
ಜೋಳ ಹುಟ್ಟಿದ ಮೇಲೆ ಮಳೆ ಬರುತ್ತದೆ ಎಂಬ ನಂಬಿಕೆಯಿಂದ 15 ದಿನಗಳ ಹಿಂದೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದೇವೆ. ಆದರೆ ಈಗ ಬಿಸಿಲು ಹೆಚ್ಚಾಗಿದ್ದು ಇನ್ನು ಒಂದೆರಡು ದಿನ ಮಳೆ ಬರದಿದ್ದರೆ ಜೋಳ ಒಣಗಿ ಹೋಗಲಿದೆ
ಚಂದ್ರಪ್ಪ ಕೋಟೆ ನಿವಾಸಿ ಹೊಳಲ್ಕೆರೆ
ಹಿರಿಯೂರು ಕನಿಷ್ಠ ಮಳೆ
ಕಳೆದ 7 ದಿನಗಳಿಂದ ಹಿರಿಯೂರು ತಾಲ್ಲೂಕಿನಲ್ಲಿ ಶೇ 52ರಷ್ಟು ಮಳೆ ಕೊರತೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ಶೇ 44ರಷ್ಟು ಹೊಳಲ್ಕೆರೆ ತಾಲ್ಲೂಕಿನಲ್ಲಿ ಶೇ 41ರಷ್ಟು ಹೊಸದುರ್ಗದಲ್ಲಿ ಶೇ 8ರಷ್ಟು ಮಳೆ ಕೊರತೆಯಾಗಿದೆ.  ಚಳ್ಳಕೆರೆ ತಾಲ್ಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದ್ದು ಶೇ 66ರಷ್ಟು ಹೆಚ್ಚುವರಿಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ ಶೇ 25ರಷ್ಟು ಮಳೆ ಹೆಚ್ಚಾಗಿದೆ. ಒಟ್ಟಾರೆ ಜಿಲ್ಲೆಯಾದ್ಯಂತ ಸರಾಸರಿ ಶೇ 4ರಷ್ಟು ಹೆಚ್ಚುವರಿ ಮಳೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT