ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ‘ವಿಶಿಷ್ಟ ಕಲೆಯನ್ನು ಕಾಪಾಡೋಣ’

ಜಿಲ್ಲಾ ಸಮಿತಿ ಸಂಚಾಲಕಿ ಭಾರ್ಗವಿ ದ್ರಾವಿಡ್‌ ಹೇಳಿಕೆ
Last Updated 4 ಫೆಬ್ರುವರಿ 2023, 5:14 IST
ಅಕ್ಷರ ಗಾತ್ರ

ಚಿತ್ರದುರ್ಗ: ಪಿತ್ರಾರ್ಜಿತ ಆಸ್ತಿಯನ್ನು ಕಾಪಾಡಿಕೊಂಡಂತೆ ನಶಿಸಿ ಹೋಗುತ್ತಿರುವ ತಳ ಸಮುದಾಯದ ವಿಶಿಷ್ಟ ಕಲೆಗಳನ್ನು ತುಂಬಾ ಮುತುವರ್ಜಿಯಿಂದ ಕಾಪಾಡುವ ಅಗತ್ಯವಿದೆ ಎಂದು ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ ಸಮಿತಿ ಜಿಲ್ಲಾ ಸಂಚಾಲಕಿ ಭಾರ್ಗವಿ ದ್ರಾವಿಡ್‌ ಅಭಿಪ್ರಾಯಪಟ್ಟರು.

ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ-ನಶಿಸಿ ಹೋಗುತ್ತಿರುವ ತಳ ಸಮುದಾಯದ ವಿಶಿಷ್ಟ ಕಲೆಗಳ ತರಬೇತಿ ಶಿಬಿರ’ ಉದ್ಘಾಟಿಸಿ ಅವರು ಮಾತನಾಡಿದರು.

‘ಕಲೆಯಿಂದ ಕಲಾವಿದರನ್ನು ಗುರುತಿಸುವ ಪರಿಪಾಠವಿರುವುದನ್ನು ಕಾಣಬಹುದಾಗಿದೆ. ಕಲೆಯನ್ನು ನಾವು ಮಾತ್ರ ಕಲಿತು ಬಿಟ್ಟು ಹೋಗದೇ ಅಂತಹ ವಿಶಿಷ್ಟ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸವಾಗಬೇಕು’ ಎಂದರು.

‘ನಶಿಸಿ ಹೋಗುತ್ತಿರುವ ತಳ ಸಮುದಾಯದ ವಿಶಿಷ್ಟ ಕಲೆಗಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ತರಬೇತಿ ಶಿಬಿರವು 20 ದಿನಗಳ ಕಾಲ ನಡೆಯಲಿದ್ದು, ಗುರುಗಳು ಹೇಳಿಕೊಟ್ಟ ಕಲೆಗಳನ್ನು ಶಿಬಿರಾರ್ಥಿಗಳು ಕಲಿತು ಸಮಾರೋಪ ಸಮಾರಂಭದಲ್ಲಿ ಪ್ರದರ್ಶಿಸಬೇಕು’ ಎಂದು ತಿಳಿಸಿದರು.

ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ ಜಿಲ್ಲಾ ಸಮಿತಿ ಸದಸ್ಯ ಹುಲ್ಲೂರು ಕೃಷ್ಣಪ್ಪ, ‘ಪೂರ್ವಜರು ಹುಟ್ಟಿನಿಂದಲೂ ಕಲೆಗಳನ್ನು ಮೈಗೂಡಿಸಿಕೊಂಡು ಬಂದಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಆ ಕಲೆಗಳು ನಶಿಸಿ ಹೋಗುತ್ತಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಶಿಸುತ್ತಿರುವ ತಳ ಸಮುದಾಯದ ವಿಶಿಷ್ಟ ಕಲೆಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ತರಬೇತಿ ಶಿಬಿರ ಹಮ್ಮಿಕೊಂಡು ಕಲೆಗಳನ್ನು ಉಳಿಸಿ-ಬೆಳೆಸುತ್ತಿದೆ’ ಎಂದರು.

‘ಕೆಲವು ಕಲೆಗಳು ಹಳ್ಳಿಗಾಡಿನಲ್ಲಿ ಇನ್ನು ಜೀವಂತವಾಗಿವೆ. ಗೊರವರ ಕುಣಿತ, ಕಿಂದರ ಜೋಗಿ, ಕೀಲುಕುದುರೆ, ಖಾಸ ಬೇಡರ ಪಡೆ, ಪೋತರಾಜ ಕುಣಿತ, ಕೋಲಾಟ ಕಲೆಗಳನ್ನು ಹೆಚ್ಚಿನದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ರೂಢಿಸಿಕೊಂಡಿದ್ದಾರೆ. ಯುವಜನ ಶಿಬಿರದ ಸದುಪಯೋಗ ಪಡೆದು ಶ್ರದ್ಧೆಯಿಂದ ಕಲೆಗಳನ್ನು ಕಲಿತು, ಕಲೆಯಿಂದ ಉತ್ತಮ ಬದುಕು ರೂಪಿಸಿಕೊಳ್ಳಬೇಕು’ ಎಂದು ಹೇಳಿದರು.

ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ ಜಿಲ್ಲಾ ಸಮಿತಿ ಸದಸ್ಯ ಡಿ.ಓ.ಮುರಾರ್ಜಿ, ‘ರಾಜ್ಯ ಸರ್ಕಾರವು ಕಳೆದ ವರ್ಷದ ಬಜೆಟ್‌ನಲ್ಲಿ ನಶಿಸಿ ಹೋಗುತ್ತಿರುವ ತಳ ಸಮುದಾಯ ಕಲೆಗಳನ್ನು ಮುಂದಿನ ಪರಂಪರೆಗೆ ಬಳುವಳಿಯಾಗಿ ಕೊಡಬೇಕು ಎಂಬ ಸದುದ್ದೇಶದಿಂದ ತರಬೇತಿ ಶಿಬಿರ ಹಮ್ಮಿಕೊಂಡಿದೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಕೆ.ಮಲ್ಲಿಕಾರ್ಜುನ, ಮೂಲಸಂಸ್ಕೃತಿ-ಕನ್ನಡ ಸಂಸ್ಕೃತಿ ಜಿಲ್ಲಾ ಸಮಿತಿ ಸದಸ್ಯ ನಿಂಗಪ್ಪ, ಹಿರಿಯ ಕಲಾವಿದ ಹನುಮಂತಪ್ಪ, ಮಾರಕ್ಕ ಇದ್ದರು.

**

ಶಿಬಿರಾರ್ಥಿಗಳು ಕಲಿತ ಕಲೆಗಳನ್ನು ಮುಂದಿನ ಪೀಳಿಗೆಗೂ ಕಲಿಸುವ ಕೆಲಸ ಮಾಡಬೇಕು. ಜೊತೆಗೆ ನಾಡು-ನುಡಿ ಸಂಸ್ಕೃತಿ ಉಳಿಸಿ ಬೆಳೆಸಬೇಕು.

-ಭಾರ್ಗವಿ ದ್ರಾವಿಡ್‌, ಜಿಲ್ಲಾ ಸಂಚಾಲಕಿ, ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT