ಚಿತ್ರದುರ್ಗದಲ್ಲಿ ಭಾನುವಾರ ಸಾಗಿದ ಬಸವ ಸಂಸ್ಕೃತಿ ಅಭಿಯಾನದ ಪಾದಯಾತ್ರೆ
ಮುರುಘಾ ಮಠದಲ್ಲಿ ನಡೆದ ಸಹಜ ಶಿವಯೋಗದಲ್ಲಿ ವಚನಾನಂದ ಸ್ವಾಮೀಜಿ ಶಿವಯೋಗದ ಪ್ರಾತ್ಯಕ್ಷಿಕೆ ತೋರಿದರು
ಮನಸ್ಸು ಶುದ್ದವಾಗುವ ಜತೆಗೆ ಇಷ್ಟಲಿಂಗ ಪ್ರಾಣಲಿಂಗವಾಗಬೇಕಾದರೆ ಲಿಂಗಪೂಜೆ ಮಾಡಬೇಕು. ನಾಡಿಮಿಡಿತ ಮನಸ್ಸು ಸದಾ ಶುದ್ದವಾಗಿರಬೇಕು. ನಾಡಿ ಜಾಗೃತವಾಗಬೇಕಾದರೆ ಶ್ವಾಸ ಶುದ್ಧವಾಗಿರಬೇಕು.
ವಚನಾನಂದ ಸ್ವಾಮೀಜಿ ಹರಿಹರ ಪಂಚಮಸಾಲಿ ಗುರುಪೀಠ
ವಚನ ಗಾನಸುಧೆ
ಮುರುಘಾ ಮಠದ ಅನುಭವ ಮಂಟಪದ ವೇದಿಕೆಯಲ್ಲಿ ಏಕಕಾಲಕ್ಕೆ ಬಸವಭಕ್ತರಿಂದ ವಚನ ಗಾನಸುಧೆ ಹರಿಯಿತು. ತೋಟಪ್ಪ ಉತ್ತಂಗಿ ಸುಜಿತ್ ಕುಲಕರ್ಣಿ ಹಾಗೂ ಉಮೇಶ್ ಪತ್ತಾರ್ ಸಂಗೀತ ಸಂಯೋಜನೆಯಲ್ಲಿ ಸಾಲು ಸಾಲು ವಚನಗಳನ್ನು ಭಕ್ತರು ಹಾಡಿದರು. 12ನೇ ಶತಮಾನದ ವಚನಕಾರರ ವಚನಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಸಾವಿರಾರು ಮಹಿಳೆಯರು ಸಾಹಿತಿಗಳು ವಾಣಿಜ್ಯೋದ್ಯಮಿಗಳು ವಿದ್ಯಾರ್ಥಿಗಳು ವಿವಿಧ ಶಾಲಾ ಕಾಲೇಜುಗಳ ಸಿಬ್ಬಂದಿ ಧ್ವನಿಯಾದರು.
‘ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೇ ಬರೆಸಿ’
ನಮ್ಮದು ಲಿಂಗಾಯತ ಧರ್ಮ. ಆದ್ದರಿಂದ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಜಾತಿ ಕಾಲಂನಲ್ಲಿ ನಿಮ್ಮ ಜಾತಿ ಬರೆಸಬೇಕು’ ಎಂದು ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು. ಮಠದಲ್ಲಿ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್ ಅವರ ‘ನಾವು ಹಿಂದೂ ಎಂದು ಏಕೆ ಬರೆಯಿಸಬಾರದು ಒಕ್ಕಲಿಗರು ಕುರುಬರು ಹಿಂದೂ ಎಂದು ಬರೆಸುತ್ತಾರೆ. ಇದೊಂದು ಜಾತಿ ಒಡೆಯುವ ಹುನ್ನಾರವೇ?’ ಎಂಬ ಪ್ರಶ್ನೆಗೆ ಉತ್ತರಿಸಿ ಈ ವಿಚಾರದಲ್ಲಿ ಗೊಂದಲ ಬೇಡ. ನಮ್ಮ ಧರ್ಮ ಲಿಂಗಾಯತ’ ಎಂದರು. ‘ಪಂಚಮಸಾಲಿಗಳು ಧಾರ್ಮಿಕವಾಗಿ ಹಿಂದೂಗಳೇ ಅಥವಾ ಲಿಂಗಾಯತರೇ?’ ಎಂಬ ಪ್ರಶ್ನೆಗೆ ‘ಲಿಂಗವುಳ್ಳವರು ಲಿಂಗಾಯತರು’ ಎಂದು ಉತ್ತರಿಸಿದರು. ‘ಬಸವ ಸಂಸ್ಕೃತಿ ಅಭಿಯಾನ ಹಾಗೂ ಉಳಿದ ಸಂಸ್ಕೃತಿಗೆ ವ್ಯತ್ಯಾಸವೇನು?’ ಎಂಬ ರಕ್ಷಿತಾ ವೀರಭದ್ರಪ್ಪರವರ ಪ್ರಶ್ನೆಗೆ ಬಸವಲಿಂಗ ಪಟ್ಟದ್ದೇವರು ಉತ್ತರಿಸಿ ‘ಬಸವ ಸಂಸ್ಕೃತಿ ಅಭಿಯಾನ ಇರುವುದು ಎಲ್ಲರನ್ನೂ ಒಗ್ಗೂಡಿಸುವುದು ಬಸವ ನಿಷ್ಠೆಯನ್ನು ಹುಟ್ಟಿಸುವುದು ದುರ್ನಡತೆ ದುರಹಂಕಾರವನ್ನು ಕಿತ್ತು ಹಾಕುವುದಕ್ಕೆ. ನಮ್ಮ ಆಚಾರವೇ ಬಸವ ಮಯವಾಗಬೇಕು’ ಎಂದರು. ‘ಲಿಂಗಾಯತ ಧರ್ಮ ಜಾತಿಗೆ ಸೀಮಿತವೇ? ಬಸವಧರ್ಮ ಎನ್ನಬಹುದೇ?’ ಎಂಬ ಗಂಗಾಧರ್ ಅವರ ಪ್ರಶ್ನೆಗೆ ಉತ್ತರಿಸಿ ‘ಬೌದ್ಧ ಕ್ರೈಸ್ತ ಧರ್ಮ ಹೇಗೋ ಹಾಗೆ ನಮ್ಮದು ಬಸವ ಧರ್ಮ. ಆದರೆ ಹೆಚ್ಚು ಪ್ರಚಲಿತ ಇರುವುದರಿಂದ ಲಿಂಗಾಯತ ಧರ್ಮ ಎಂದು ಹೇಳಬಹುದು’ ಎಂದು ತಿಳಿಸಿದರು.