ಭಾನುವಾರ, ನವೆಂಬರ್ 27, 2022
27 °C
ವೀರಶೈವ ಲಿಂಗಾಯತ ಸಮಾಜದ ಮುಖಂಡರ ಸಮಾಲೋಚನಾ ಸಭೆ, ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯ

ಮುರುಘಾ ಮಠಕ್ಕೆ ನೂತನ ಪೀಠಾಧ್ಯಕ್ಷರ ನೇಮಕಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಶಿವಮೂರ್ತಿ ಮುರುಘಾ ಶರಣರ ಬಂಧನವಾಗಿರುವುದರಿಂದ ಮುರುಘಾ ಮಠದ ದೈನಂದಿನ ಧಾರ್ಮಿಕ ಕೈಂಕರ್ಯ ಹಾಗೂ ಆಡಳಿತಾತ್ಮಕ ಚಟುವಟಿಕೆ ನಡೆಸಲು ನೂತನ ಪೀಠಾಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡರ ಸಮಾಲೋಚನಾ ಸಭೆ ನಿರ್ಣಯ ಕೈಗೊಂಡಿತು.

ಮುರುಘರಾಜೇಂದ್ರ ಪೀಠದ ಉಳಿವಿಗಾಗಿ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಚಿತ್ರದುರ್ಗ ತಾಲ್ಲೂಕಿನ ಸೀಬಾರದ ನಿಜಲಿಂಗಪ್ಪ ಸ್ಮಾರಕದಲ್ಲಿ ಮಾಜಿ ಸಚಿವ ಎಚ್.ಏಕಾಂತಯ್ಯ ನೇತೃತ್ವದಲ್ಲಿ ಗುರುವಾರ ಸಭೆ ಹಮ್ಮಿಕೊಂಡಿದ್ದರು. ಸಾವಿರಕ್ಕೂ ಹೆಚ್ಚು ಜನರು ಸಭೆಯಲ್ಲಿ ಪಾಲ್ಗೊಂಡಿದ್ದರು.  ಸಮುದಾಯದ ಮುಖಂಡರು ಅಭಿಪ್ರಾಯ ಹಂಚಿಕೊಂಡರು.

ಮಾಜಿ ಸಚಿವ ಎಚ್.ಏಕಾಂತಯ್ಯ ಮಾತನಾಡಿ, ಮುರುಘಾ ಶರಣರು ಕೂಡಲೇ ಪೀಠತ್ಯಾಗ ಮಾಡಬೇಕು. ಇಲ್ಲವಾದರೆ ಅವರನ್ನು ಪೀಠದಿಂದ ವಜಾ ಮಾಡಬೇಕು. ಈ ಕುರಿತು ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸಭೆಯಲ್ಲಿ ಭಾಗವಹಿಸಿದ್ದವರು ಚಪ್ಪಾಳೆತಟ್ಟಿ ಅನುಮೋದಿಸಿದರು.

ಇದೊಂದು ಸಂದಿಗ್ಧ ಸ್ಥಿತಿ. ಶಿವಮೂರ್ತಿ ಮುರುಘಾ ಶರಣರು ಸೆ.1ರಿಂದ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಇದರಿಂದ ಮಠದ ದೈನಂದಿನ ಚಟುವಟಿಕೆಗೆ ತೊಂದರೆ ಉಂಟಾಗಿದೆ. ಮಠ ಹಾಗೂ ಮುರುಘಾ ಪರಂಪರೆಯ ಉಳಿವಿಗೆ ಹೊಸ ಪೀಠಾಧ್ಯಕ್ಷರ ಅಗತ್ಯವಿದೆ. ಕಾನೂನಾತ್ಮಕ ಹೋರಾಟ ನಡೆಸಲು ಸಿದ್ದರಾಗಬೇಕು ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕರಾದ ಎಂ.ಬಿ.ತಿಪ್ಪೇರುದ್ರಪ್ಪ, ಟಿ.ಎಚ್.ಬಸವರಾಜಪ್ಪ, ಪಿ.ರಮೇಶ್, ಸಮುದಾಯದ ಮುಖಂಡರಾದ ಎಸ್.ಷಣ್ಮುಖಪ್ಪ, ವಿಜಯಕುಮಾರ್, ಕೆ.ವಿ.ಪ್ರಭಾಕರ್, ಎಂ.ಟಿ.ಮಲ್ಲಿಕಾರ್ಜುನಯ್ಯ, ಜಿ.ಎಸ್.ಮಂಜುನಾಥ್ ಇದ್ದರು.

ಆರಂಭದಲ್ಲಿ ಸಭೆ ಗೊಂದಲದ ಗೂಡಾಗಿತ್ತು. ಶಿವಮೂರ್ತಿ ಮುರುಘಾ ಶರಣರ ಪರ ಹಾಗೂ ವಿರೋಧಿ ಬಣಗಳ ನಡುವೆ ಗಲಾಟೆ ನಡೆಯಿತು. ಶರಣರ ಪರವಾಗಿದ್ದ ಕೆಲವರು ಸಭೆಯಿಂದ ಹೊರನಡೆದ ಪ್ರಸಂಗವೂ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು