ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ದಾಳಿಂಬೆ; ಕೈಹಿಡಿದ ಟೊಮೆಟೊ-ಸಂಕಷ್ಟಗಳ ಸರಮಾಲೆಯಿಂದ ಗೆದ್ದು ಬೀಗಿದ ರೈತ

ಹಾಲಿನ ವಾಹನ ಬಿಟ್ಟು ಕೃಷಿ ಕಾಯಕ
Last Updated 29 ಡಿಸೆಂಬರ್ 2021, 4:07 IST
ಅಕ್ಷರ ಗಾತ್ರ

ಸುವರ್ಣಾ ಬಸವರಾಜ್

ಹಿರಿಯೂರು: ಚಿತ್ರದುರ್ಗದಲ್ಲಿ ಹನ್ನೆರಡು ವರ್ಷಗಳ ಕಾಲ ಹಾಲಿನ ಡೇರಿಯಲ್ಲಿ ಸ್ವಂತ ಮಿನಿ ಲಾರಿ ಓಡಿಸಿಕೊಂಡು ದುಡಿಮೆ ಮಾಡುತ್ತಿದ್ದ ಎಂ.ಜಿ. ನಟರಾಜ್ ಅವರು ಹುಟ್ಟೂರಿಗೆ ಮರಳಿ ಕೃಷಿ ಮಾಡಿ ಗೆದ್ದು ಬೀಗುವ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ.

‘2000ದಿಂದ 2012ರ ವರೆಗೆ ಹಾಲಿನ ಡೇರಿಯಲ್ಲಿ ಕೆಲಸ ಮಾಡುತ್ತಿದ್ದೆ. ಯಾಕೋ ಬೇಸರವಾಯಿತು. 2013ರಲ್ಲಿ ಹುಟ್ಟೂರು ವಾಣಿವಿಲಾಸಪುರಕ್ಕೆ ಮರಳಿದೆ. ನಮಗಿದ್ದ 22 ಎಕರೆ ಜಮೀನಿನಲ್ಲಿ 12 ಎಕರೆ ಮಾರಾಟ ಮಾಡಿ, 10 ಎಕರೆ ಭೂಮಿಯನ್ನು ಹಸನುಗೊಳಿಸಿದೆ. ಪರಿಚಯದವರಿಂದ ಕೇಳಿ ತಿಳಿದು ದಾಳಿಂಬೆ ನಾಟಿ ಮಾಡಿದೆ. ದುರದೃಷ್ಟವೆಂಬಂತೆ ಬೆಳೆ ಹಾಳಾಗಿ ಲಕ್ಷಾಂತರ ರೂಪಾಯಿ ನಷ್ಟವಾಯಿತು. ಆದರೂ ಕೃಷಿಯ ಮೇಲಿನ ಮೋಹ ಹೋಗಲಿಲ್ಲ’ ಎಂದರು ನಟರಾಜ್.

‘2015ರಲ್ಲಿ ಟೊಮೆಟೊ, ಕಲ್ಲಂಗಡಿ, ಪಪ್ಪಾಯ ನಾಟಿ ಮಾಡಿದೆ. ಆ ವರ್ಷ ಟೊಮೆಟೊಗೆ ಉತ್ತಮ ಬೆಲೆ ಬಂದಿತ್ತು. ಕಲ್ಲಂಗಡಿ, ಪಪ್ಪಾಯ ಬೆಳೆಯಲ್ಲೂ ಲಾಭವಾಯಿತು. ಹಣ್ಣು–ತರಕಾರಿ ಬೆಳೆಯಲು ಮೂರು ಎಕರೆ ಉಳಿಸಿಕೊಂಡು, ಉಳಿದ ಜಮೀನಿನಲ್ಲಿ ಅಡಿಕೆ ಸಸಿ ಹಾಕಿದೆ. ಅಡಿಕೆ ಫಸಲು ಈಗ ಆರಂಭವಾಗಿದೆ. ಹಿಂದಿನ ವರ್ಷವೂ ಮೂರು ಎಕರೆಯಲ್ಲಿ ಟೊಮೆಟೊ ಹಾಕಿದ್ದೆ. ದರ ಕುಸಿದ ಕಾರಣ ಮತ್ತೆ ನಷ್ಟ ಅನುಭವಿಸಬೇಕಾಯಿತು. ಈ ವರ್ಷ ಊಹೆಗೂ ಮೀರಿದ ದರ ಸಿಕ್ಕಿದ್ದರಿಂದ ಕಹಿ ಅನುಭವಗಳು ಮಾಯವಾಗುತ್ತಿವೆ’ ಎಂದು ಅವರು ನಗೆ ಬೀರಿದರು.

‘ಮೂರು ಎಕರೆಯಲ್ಲಿ ‘ಸಾಹು’ ತಳಿಯ ಟೊಮೆಟೊ ಬೆಳೆಯಲು₹ 3 ಲಕ್ಷ ಖರ್ಚಾಗಿತ್ತು. ಹೂವು ಬಿಡುವ ಹಂತದಲ್ಲಿ ನಿರಂತರ ಮಳೆ ಸುರಿದ ಕಾರಣ ಸಕಾಲದಲ್ಲಿ ಔಷಧ ಸಿಂಪರಣೆ ಮಾಡಲಿಲ್ಲ. ಹೀಗಾಗಿ ಶೇ 40ರಷ್ಟು ಹೂವು ಉದುರಿ ಹೋಯಿತು. 5,000 ಬಾಕ್ಸ್ ಇಳುವರಿ ನಿರೀಕ್ಷೆ ಮಾಡಿದ್ದೆ. ಇಲ್ಲಿಯವರೆಗೆ 2,900 ಬಾಕ್ಸ್ ಹಣ್ಣು ದೊರೆತಿದೆ. ಹಣ್ಣನ್ನು ಮೂರು ಗ್ರೇಡ್ ಮಾಡಿ ಕೋಲಾರದ ಮಾರುಕಟ್ಟೆಗೆ ಕಳುಹಿಸುತ್ತೇನೆ. 15 ಕೆ.ಜಿ. ತೂಕದ ಬಾಕ್ಸ್‌ಗೆ ಈ ವರ್ಷ ₹ 100ರಿಂದ ₹ 1200ವರೆಗೆ ದರ ಸಿಕ್ಕಿದೆ. ಶೇ 8ರಷ್ಟು ಕಮಿಷನ್, ಹಣ್ಣು ಕಿತ್ತು ಬಾಕ್ಸ್‌ಗೆ ಹಾಕಲು ಕೂಲಿ, ಸಾಗಾಣಿಕೆ ವೆಚ್ಚ ಎಲ್ಲವೂ ಸೇರಿ ₹ 5 ಲಕ್ಷ ವೆಚ್ಚವಾಗಿದೆ. ಇದೇ ಪ್ರಥಮ ಬಾರಿಗೆ ಖರ್ಚು ತೆಗೆದು ₹ 13 ಲಕ್ಷದಿಂದ ₹ 14 ಲಕ್ಷ ಉಳಿದಿದೆ. ನಂಬಿದವರನ್ನು ಭೂತಾಯಿ ಕೈಬಿಡಲ್ಲ ಎಂಬ ನಂಬಿಕೆ ನಿಜವಾಗಿದೆ. ಈಗ ಕೃಷಿಯಲ್ಲಿ ಇನ್ನಷ್ಟು ಆಸಕ್ತಿ ಬಂದಿದೆ. ಹತ್ತಾರು ಕೈಗಳಿಗೆ ಕೂಲಿ ಕೊಟ್ಟಿರುವ ತೃಪ್ತಿ ಇದೆ’ ಎಂದು ನಟರಾಜ್ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT