ಬುಧವಾರ, ಸೆಪ್ಟೆಂಬರ್ 22, 2021
24 °C
ದಲಿತ, ಹಿಂದುಳಿದ ಸಮುದಾಯಕ್ಕೆ ಕೆ.ಎಸ್‌.ಈಶ್ವರಪ್ಪ ಸಲಹೆ

ಹಾಳಾಗಿದ್ದು ಸಾಕು, ಇನ್ನಾದರೂ ಒಗ್ಗೂಡೋಣ; ಕೆ.ಎಸ್‌.ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಚುನಾವಣೆಯಲ್ಲಿ ನೀಡುವ ಹಣ, ಹೆಂಡಕ್ಕೆ ವೋಟು ಹಾಕಿ ಹಾಳಾಗಿದ್ದು ಸಾಕು. ಇನ್ನಾದರೂ ಒಗ್ಗೂಡೋಣ. ರಾಜಕಾರಣದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡೋಣ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದರು.

ಇಲ್ಲಿನ ಹೊರವಲಯದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ದಲಿತರು ಮತ್ತು ಹಿಂದುಳಿದ ವರ್ಗದವರ ಉದ್ದಾರ ಮಾಡುವ ಮಾತುಗಳನ್ನು ಚಿಕ್ಕಂದಿನಿಂದ ಕೇಳಿದ್ದೇವೆ. ಸ್ವಾತಂತ್ರ್ಯ ಬಂದಾಗಿನಿಂದ ಅತಿ ಹೆಚ್ಚು ಅಧಿಕಾರ ಅನುಭವಿಸಿದ ಪಕ್ಷ ದಲಿತ ನಾಯಕರನ್ನು ಮುಖ್ಯಮಂತ್ರಿ ಮಾಡಲಿಲ್ಲ. ತಮ್ಮ ಜವಾಬ್ದಾರಿ ನಿರ್ವಹಿಸುವುದನ್ನು ಮರೆತು ಬಿಜೆಪಿಗೆ ಸವಾಲು ಹಾಕಿದೆ. ಕೇಂದ್ರ ಮಂತ್ರಿ ಮಂಡಲದಲ್ಲಿ 47 ಸಚಿವರು ದಲಿತ ಮತ್ತು ಹಿಂದುಳಿದ ವರ್ಗದವರು’ ಎಂದರು.

‘ಜೀವನದಲ್ಲಿ ಸಾಕಾಗುವಷ್ಟು ಕುಡಿದಿದ್ದೇವೆ. ಆದರೂ, ಚುನಾವಣೆಯಲ್ಲಿ ನೀಡುವ ಹೆಂಡಕ್ಕೆ ಮನಸೋಲುತ್ತೇವೆ. ಇಂತಹ ಮನಸ್ಥಿತಿಯಿಂದ ಹೊರಬಂದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಈವರೆಗೆ ನಮ್ಮಿಂದ ನಾವು ಹಾಳಾಗಿದ್ದೇವೆ. ಇನ್ನು ಮುಂದೆಯೂ ಹೀಗೆ ಆಗುವುದು ಬೇಡ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸೋಣ. ಮಕ್ಕಳನ್ನು ವಿದ್ಯಾವಂತರಾಗಿ ಮಾಡೋಣ’ ಎಂದು ಹೇಳಿದರು.

‘ಅಂಬೇಡ್ಕರ್‌ ಹೆಸರನ್ನು ಅತಿ ಹೆಚ್ಚು ಬಳಸಿಕೊಂಡ ಪಕ್ಷ ಚುನಾವಣೆಯಲ್ಲಿ ಅವರನ್ನೇ ಸೋಲಿಸಿತು. ಅಂಬೇಡ್ಕರ್‌ ನಿಧರಾದಾಗ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗ ನೀಡಲಿಲ್ಲ. ಈಗ ದಲಿತರ ಉದ್ಧಾರದ ಮಾತುಗಳನ್ನು ಆಡಲಾಗುತ್ತಿದೆ. ವಿದ್ಯಾವಂತರು ಈ ಬಗ್ಗೆ ಆಲೋಚಿಸಬೇಕು. ಸಮುದಾಯದ ಹಿತಕ್ಕೆ ಯಾರು ಸೂಕ್ತ ಎಂಬುದನ್ನು ನಿರ್ಧರಿಸಬೇಕು. ಪಕ್ಷಕ್ಕೆ ನಿಷ್ಠೆ ತೋರಿದ ಎ.ನಾರಾಯಣಸ್ವಾಮಿ ಅವರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ಕೊಡಿಸಲು ಪ್ರಯತ್ನಿಸಿದೆ. ಇದು ಬೂಟಾಟಿಕೆಯ ಮಾತಲ್ಲ’ ಎಂದರು.

‘ಉಗ್ರ ಮಾತುಗಾರ, ಮಾತೃ ಹೃದಯಿ’

‘ಕೆ.ಎಸ್‌.ಈಶ್ವರಪ್ಪ ಆಡುವ ಮಾತುಗಳು ಉಗ್ರವಾಗಿರುತ್ತವೆ. ಆದರೆ, ಅವರು ಮಾತೃ ಹೃದಯಿ. ಹಸುವಿನಂತಹ ಮನಸು ಉಳ್ಳವರು’ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಬಣ್ಣಿಸಿದರು.

‘ದಲಿತ ಮತ್ತು ಹಿಂದುಳಿದ ಸಮುದಾಯಗಳ ಬಗ್ಗೆ ಈಶ್ವರಪ್ಪ ಅಪಾರ ಕಾಳಜಿ ಇಟ್ಟುಕೊಂಡಿದ್ದಾರೆ. ಮಠಗಳಿಗೆ ಸರ್ಕಾರದ ಉದಾರ ಅನುದಾನ ಸಿಗಲು ಇವರ ಶ್ರಮವೂ ಇದೆ. ಸಚಿವರಾಗಿ ಶಿವಮೊಗ್ಗಕ್ಕೆ ತೆರಳಿದ ಅವರು ಹರಿಜನ ಕೇರಿಗೆ ಭೇಟಿ ನೀಡಿ ಮಾದಿಗ ಸಮುದಾಯದ ಕಾರ್ಯಕರ್ತನ ಮನೆಯ ಹಾಲು ಸ್ವೀಕರಿಸಿದ್ದು ಸಾಮರಸ್ಯದ ಸಂಕೇತ’ ಎಂದರು.

‘ಮಠದ ಅಭಿವೃದ್ಧಿಗೆ ₹ 3 ಕೋಟಿ ಅನುದಾನ ನೀಡಿದ್ದಾರೆ. ಸಮುದಾಯದ ಮೇಲಿನ ಪ್ರೀತಿಯಿಂದ ಶಿವಮೊಗ್ಗದಲ್ಲಿ ಎಕರೆ ಜಾಗ ನೀಡಿದ್ದಾರೆ. ದಲಿತ ಮತ್ತು ಹಿಂದುಳಿದ ಸಮುದಾಯದ ಮಠಗಳ ಬಗ್ಗೆ ಅವರು ತೋರುವ ಕಾಳಜಿ ಅಪಾರ’ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ.ಕಾಂತೇಶ್‌ ಇದ್ದರು.

***

ಹುಟ್ಟಿನ ಕಾರಣಕ್ಕೆ ಜಾತಿ ಅಂಟಿಕೊಂಡಿದೆ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಬಗ್ಗೆ ಜಾಗೃತರಾಗೋಣ. ಸಮಾಜದಲ್ಲಿ ಸಮಾನತೆ ತರಲು ಸಚಿವನಾಗಿ ಶಕ್ತಿಮೀರಿ ಪ್ರಯತ್ನಿಸುವೆ.

ಕೆ.ಎಸ್‌.ಈಶ್ವರಪ್ಪ
ಗ್ರಾಮೀಣಾಭಿವೃದ್ಧಿ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು