ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಾಬಿಟ್ಟಿ ಜಕಾತಿ; ಅತಿ ಸಣ್ಣ ವ್ಯಾಪಾರಿಗಳು ಹೈರಾಣು

ಎಲ್ಲ ಗ್ರಾಮ ಸಂತೆಗಳಲ್ಲೂ ಎದ್ದು ಕಾಣುವ ಮೂಲ ಸೌಕರ್ಯ ಕೊರತೆ
Last Updated 13 ಏಪ್ರಿಲ್ 2022, 4:30 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ಬಹುತೇಕ ವಾರದ ಸಂತೆ ನಡೆಯುವ ಎಲ್ಲ ಗ್ರಾಮಗಳಲ್ಲಿ ಸಂತೆ ಸ್ಥಳದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ವ್ಯಾಪಾರಿಗಳು, ಗ್ರಾಹಕರು ತೊಂದರೆಗೆ ಒಳಗಾಗುವುದು ಸಾಮಾನ್ಯವಾಗಿದೆ.

ಕಾನೂನು ಪ್ರಕಾರ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ, ಮೂತ್ರಾಲಯ, ನೆರಳಿನ ವ್ಯವಸ್ಥೆ, ಆಸನ ವ್ಯವಸ್ಥೆ, ಕಟ್ಟೆ ನಿರ್ಮಾಣವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಮಾಡಬೇಕು. ಇದನ್ನು ಮಾಡದಿದ್ದರೂ ಪಂಚಾಯಿತಿಗಳು ಪ್ರತಿ ವರ್ಷ ಕರಪತ್ರ ಮೂಲಕ ವ್ಯಾಪಕ ಪ್ರಚಾರ ಮಾಡಿ ಸಂತೆ ಜಕಾತಿ ವಸೂಲಿಯನ್ನು ಬಹಿರಂಗ ಹರಾಜು ಮಾಡುತ್ತಿವೆ. ಕೆಲವೆಡೆ ಹರಾಜು ಪ್ರಕ್ರಿಯೆ ಪಂಚಾಯಿತಿ ಸದಸ್ಯರ ಬಲಾಬಲಕ್ಕೂ ಕನ್ನಡಿಯಾಗಿದೆ ಎಂಬ ಅನಿಸಿಕೆ ವ್ಯಕ್ತವಾಗಿದೆ. ತಾಲ್ಲೂಕಿನಲ್ಲಿ ಪ್ರಮುಖವಾಗಿ ರಾಂಪುರ, ನಾಗಸಮುದ್ರ, ಮೊಳಕಾಲ್ಮುರು, ಕೋನಸಾಗರ, ಕೊಂಡ್ಲಹಳ್ಳಿ, ಬಿ.ಜಿ. ಕೆರೆಯಲ್ಲಿ ವಾರದ ಸಂತೆಗಳು ನಡೆಯುತ್ತಿವೆ.

ರಾಂಪುರದಲ್ಲಿ ತೇರುಬೀದಿ ಇಕ್ಕೆಲಗಳಲ್ಲಿ, ಮೊಳಕಾಲ್ಮುರಿನಲ್ಲಿ ರಾಯದುರ್ಗ-ಮೊಳಕಾಲ್ಮುರು ಮುಖ್ಯರಸ್ತೆಯಲ್ಲಿ, ಬಿ.ಜಿ. ಕೆರೆಯಲ್ಲಿ ಹೆದ್ದಾರಿ ಸೇವಾ ರಸ್ತೆ ಸಮೀಪದಲ್ಲಿ ಸಂತೆ ನಡೆಸಲಾಗುತ್ತಿದೆ. ಕೊಂಡ್ಲಹಳ್ಳಿ, ನಾಗಸಮುದ್ರ ಮತ್ತು ಕೋನಸಾಗರದಲ್ಲಿ ಮಾರುಕಟ್ಟೆ ಜಾಗದಲ್ಲಿ ನಿರ್ಮಿಸಿರುವ ಸ್ವಲ್ಪ ಪ್ರಮಾಣದ ಶೆಡ್ ಕೆಳಗಡೆ ಸಂತೆ ನಡೆಯುತ್ತಿದೆ.

ರಾಂಪುರ ವಾರದ ಸಂತೆಗೆ ದೇವಸಮುದ್ರ ಹೋಬಳಿಯ 30ಕ್ಕೂ ಹೆಚ್ಚು ಗ್ರಾಮಗಳ ಜನರು ಖರೀದಿಗೆ ಬರುತ್ತಾರೆ. ತೇರುಬೀದಿಯ ಕಿಷ್ಕಿಂಧೆ ಸ್ಥಳದಲ್ಲಿ ನಡೆಯುವ ಸಂತೆಯನ್ನು ಎಪಿಎಂಸಿ ಅಥವಾ ಹೊರಭಾಗಕ್ಕೆ ಸ್ಥಳಾಂತರ ಮಾಡುವ ಬೇಡಿಕೆ ಹಲವು ವರ್ಷಗಳಿಂದ ಮಾಡುತ್ತಿದ್ದರೂ ಸ್ಥಳೀಯ ಗ್ರಾಮ ಪಂಚಾಯಿತಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ತಾಲ್ಲೂಕಿನ ಮಟ್ಟಿಗೆ ಇದು ದೊಡ್ಡ ವಾರದ ಸಂತೆಯಾಗಿದೆ. ಇಲ್ಲಿ ವಾರ್ಷಿಕ ಜಕಾತಿ ₹ 2 ಲಕ್ಷಕ್ಕೆ ಹರಾಜಾಗುತ್ತಿದೆ. ಕೋವಿಡ್ ಕಾರಣ ಈ ಬಾರಿ ಇದನ್ನು ₹ 1.50 ಲಕ್ಷಕ್ಕೆ ಇಳಿಸಲಾಗಿದೆ ಎಂದು ಪಂಚಾಯಿತಿ ಮೂಲಗಳು ತಿಳಿಸಿವೆ.

‘ಎಲ್ಲ ಸಂತೆಗಳಲ್ಲಿ ಶೌಚಾಲಯ, ಮೂತ್ರಾಲಯ ವ್ಯವಸ್ಥೆ ಇಲ್ಲದ ಕಾರಣ ಆವರಣದ ಇಕ್ಕೆಲಗಳು ಬಯಲು ಶೌಚಾಲಯಗಳಾಗಿ ಬಳಕೆಯಾಗುತ್ತಿವೆ. ಸಂತೆ ನಡೆದ ಮರುದಿನ ಅಲ್ಲಿ ಕಾಲಿಡಲು ಸಹ ಅಸಹ್ಯಪಡುವ ಮಟ್ಟಿಗೆ ಗಬ್ಬೆದ್ದು ನಾರುತ್ತಿರುತ್ತದೆ. ಜಕಾತಿ ಹಣ ಪಡೆದು
ಕೊಳ್ಳುವ ಗ್ರಾಮ ಪಂಚಾತಿಗಳು ಸಿಬ್ಬಂದಿ ನಿಯೋಜನೆ, ಸ್ವಚ್ಛತೆ ನಿರ್ಲಕ್ಷ್ಯ ಮಾಡುತ್ತಿವೆ. ಟ್ಯಾಂಕರ್ ಅಥವಾ ನಲ್ಲಿ ಮೂಲಕ ನೀರಿನ ವ್ಯವಸ್ಥೆ ಮಾಡಿರುವುದು ಎಲ್ಲಿಯೂ ಕಾಣಸಿಗುತ್ತಿಲ್ಲ. ಮಹಿಳಾ ವ್ಯಾಪಾರಿಗಳ ಪಾಡು ಹೇಳತೀರದು’ ಎಂದು ಸಂತೆ ವ್ಯಾಪಾರಿ
ಗಳಾದ ಹಿರೇಹಳ್ಳಿಯ ತಿಮ್ಮಕ್ಕ, ನಾಗಮ್ಮ ದೂರಿದರು.

‘ಸಂತೆಯಲ್ಲಿ ವ್ಯಾಪಾರಿಗಳನ್ನು ವಿಂಗಡಣೆ ಮಾಡಿಲ್ಲ. ದೊಡ್ಡ ಪ್ರಮಾಣದ ವಹಿವಾಟು ನಡೆಸುವವರನ್ನು ಹಾಗೂ ಸಣ್ಣ ಪ್ರಮಾಣದಲ್ಲಿ ಕೈತೋಟದಲ್ಲಿ ಬೆಳೆದು ತಂದು ಮಾರುವ ಸೊಪ್ಪು, ತರಕಾರಿ ಮಾರಾಟಗಾರರಿಗೆ ಇದೇ ದರ ವಿಧಿಸಲಾಗುತ್ತದೆ. ಸೊಪ್ಪು ದರ ಕುಸಿದಾಗ ಜಕಾತಿ ಕಟ್ಟುವುದು ದೊಡ್ಡಸವಾಲಾಗಿರುತ್ತದೆ. ಜಕಾತಿ ವ್ಯವಸ್ಥೆಯಿಂದ ನಮ್ಮನ್ನು ಹೊರಗಿಡಬೇಕು’ ಎನ್ನುತ್ತಾರೆ ಕೈತೋಟ ಸೊಪ್ಪು ಬೆಳೆಗಾರ ತಿಪ್ಪೇಸ್ವಾಮಿ.

......

ಕೆಲ ಬಾರಿ ₹ 1ಕ್ಕೆ ಒಂದು ಕಟ್ಟು ಸೊಪ್ಪು ಮಾರಾಟ ಮಾಡಬೇಕಾಗುತ್ತದೆ. ಆಗ ಜಕಾತಿ ಕಟ್ಟಲೆಂದು 20 ಕಟ್ಟು ಸೊಪ್ಪು ಮಾರುವುದು ಅನಿವಾರ್ಯವಾಗುತ್ತದೆ. ಯಾವ ನಷ್ಟವನ್ನು ನಾವು ಭರಿಸೋಣ.

- ಶಾರದಮ್ಮ, ಸೊಪ್ಪು ವ್ಯಾಪಾರಿ

........

ಸ್ಥಳ ಹುಡುಕಾಟ

ಮೊಳಕಾಲ್ಮುರಿನ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ವಾರದ ಸಂತೆಯನ್ನು ತಹಶೀಲ್ದಾರರ ನಿವಾಸ ರಸ್ತೆಗೆ ಸ್ಥಳಾಂತರ ಮಾಡುವ ಮಾತುಗಳು ಕೇಳಿ ಬರುತ್ತಿವೆ. 25ಕ್ಕೂ ಹೆಚ್ಚು ವರ್ಷದಿಂದ ರಸ್ತೆ ಬದಿ ಸಂತೆಯನ್ನು ಸ್ಥಳಾಂತರಿಸಿ ಎನ್ನುವ ಬೇಡಿಕೆ, ಪ್ರತಿಭಟನೆಗೆ ಸೊಪ್ಪು ಹಾಕದ ಪಟ್ಟಣ ಪಂಚಾಯಿತಿ ಈಗ ತಾಲ್ಲೂಕು ಪಂಚಾಯಿತಿ ಹಿಂಭಾಗದಲ್ಲಿರುವ ಲೋಕೋಪಯೋಗಿ ಇಲಾಖೆಯ ವಸತಿಗೃಹ ಸ್ಥಳವನ್ನು ವಶಕ್ಕೆ ಪಡೆದು ಮಾರುಕಟ್ಟೆ ನಿರ್ಮಿಸಲಾಗುವುದು ಎಂದು ಹೇಳುತ್ತಿದೆ. ಇದನ್ನು ಪ್ರಚಾರಕ್ಕೆ ಬಳಸಿಕೊಳ್ಳದೇ ಕಾರ್ಯರೂಪಕ್ಕೆ ತಂದಲ್ಲಿ ಅನುಕೂಲವಾಗುತ್ತದೆ.

– ರವಿಕುಮಾರ್, ರೈತಸಂಘದ ತಾಲ್ಲೂಕು ಘಟಕದ ಅಧ್ಯಕ್ಷ

ಜಕಾತಿ ದರ ಪ್ರದರ್ಶಿಸಬೇಕು

ಕೆಲ ಸಂತೆಗಳಲ್ಲಿ ಜಕಾತಿ ವಸೂಲಿ ಮಾಡುವುದು ಶೋಷಣೆಯಾಗುತ್ತಿದೆ. ಆದ್ದರಿಂದ ಸಂತೆಯಲ್ಲಿ ನಿಗದಿ ಮಾಡಿರುವ ಜಕಾತಿ ದರವನ್ನು ಪ್ರದರ್ಶಿಸಬೇಕು. ಮೂಲಸೌಲಭ್ಯಗಳನ್ನು ಕಲ್ಪಿಸಿದಲ್ಲಿ ಮಾತ್ರ ಜಕಾತಿ ವಸೂಲಿಗೆ ಕ್ರಮ ಕೈಗೊಳ್ಳಬೇಕು. ಕೋವಿಡ್ ನಂತರ ಗ್ರಾಹಕರು ಸಾಕಷ್ಟು ಬದಲಾಗಿದ್ದಾರೆ. ಎಲ್ಲವನ್ನೂ ನಿಭಾಯಿಸಿಕೊಂಡು ವ್ಯಾಪಾರ ಮಾಡುವ ಪರಿಸ್ಥಿತಿಯಲ್ಲಿದ್ದೇವೆ.

– ವಾಸೀಂ, ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT