ಸಾಮರಸ್ಯದ ಬದುಕು ನಡೆಸಲು ಸಲಹೆ

ಚಿತ್ರದುರ್ಗ: ದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥ ಮಾಡಿಕೊಳ್ಳುವುದು ಮುಖ್ಯ. ಕೂಡಿಬಾಳುವ ಮನಸ್ಥಿತಿ ಹೊಂದಿರಬೇಕು. ಸಾಮರಸ್ಯ ಜೀವನದಲ್ಲಿ ಸ್ವಾರಸ್ಯವೂ ಇರುತ್ತದೆ ಎಂದು ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.
ಮುರುಘಾ ಮಠದಲ್ಲಿ ಸೋಮವಾರ ನಡೆದ ಮೂವತ್ತೊಂದನೇ ವರ್ಷದ ಏಳನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ವಧು–ವರರನ್ನು ಹರಸಿ ಅವರು ಮಾತನಾಡಿದರು. ಸಾಮೂಹಿಕ ವಿವಾಹದಲ್ಲಿ ಏಳು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದರಲ್ಲಿ ಒಂದು ಜೋಡಿ ಅಂತರ್ಜಾತಿ ವಿವಾಹ ನಡೆಯಿತು.
‘ಜಾತಿ, ಧರ್ಮ ಮೀರುವಂತಹ ಸಾಮರಸ್ಯದ ಅಗತ್ಯವಿದೆ. ಹೃದಯಗಳ ಬೆಸುಗೆಯೇ ವಿವಾಹ. ಆರೋಗ್ಯದ ಕಡೆ, ಸುರಕ್ಷತೆಯತ್ತ ಪ್ರತಿಯೊಬ್ಬರು ಗಮನ ಹರಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಶಿಕಾರಿಪುರದ ಸುನ್ನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಮ್ಜಾದ್ ಹುಸೇನ್ ಮಾತನಾಡಿ, ‘ಮದುವೆ ನೆಪದಲ್ಲಿ ದುಂದು ವೆಚ್ಚ ಮಾಡಲಾಗುತ್ತಿದೆ. ಇದರಿಂದ ಖರ್ಚು ಹೆಚ್ಚಾಗಿ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ದೇಶದಲ್ಲಿ ಬಡತನ ಹೆಚ್ಚಾಗಲು ಇದು ಕೂಡ ಕಾರಣವಾಗಿದೆ. ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಸೇರಿ ಎಲ್ಲರೂ ಇಂತಹ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡುವ ಅಗತ್ಯವಿದೆ’ ಎಂದು ಹೇಳಿದರು.
ಶಿಕಾರಿಪುರ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ, ಪೈಲ್ವಾನ್ ತಿಪ್ಪೇಸ್ವಾಮಿ, ಬಸವರಾಜ ಕಟ್ಟಿ, ಪತ್ರಕರ್ತ ಕೆ.ಎಸ್.ಹುಚ್ರಾಯಪ್ಪ, ಎನ್.ತಿಪ್ಪಣ್ಣ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.