ಮಂಗಳವಾರ, ಸೆಪ್ಟೆಂಬರ್ 21, 2021
21 °C
ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅಭಿಪ್ರಾಯ

‘ಮತ್ತೆ ಕಲ್ಯಾಣ’ ಸಮಾಜದ ಶುದ್ಧಿಗೆ ನಾಂದಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಣೇಹಳ್ಳಿ (ಹೊಸದುರ್ಗ): ‘ಸಮಾಜಕ್ಕೆ ಕಲ್ಯಾಣ ಕ್ರಾಂತಿಯ ಮೌಲ್ಯಗಳ ಅವಶ್ಯಕತೆ, ಪುನರಾವರ್ತನೆ, ಪುನರ್ ಬೋಧೆ ಮಾಡುವ ಅಗತ್ಯ, ತುರ್ತು ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ಏಕೆಂದರೆ ಇಂದು ನಾವು ಭ್ರಷ್ಟಾಚಾರವನ್ನು ಬದುಕಿನ ಭಾಗ ಎಂದು ಒಪ್ಪಿಕೊಳ್ಳುವಷ್ಟು ಭ್ರಷ್ಟರಾಗಿದ್ದೇವೆ. ಮತ್ತೆ ಕಲ್ಯಾಣ ಕಾರ್ಯಕ್ರಮ ಸಮಾಜ ಮತ್ತು ಸಮಷ್ಠಿಯ ಶುದ್ಧೀಕರಣಕ್ಕೆ ನಾಂದಿಯಾಗಲಿ’ ಎಂದು ಸಾಹಿತಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಆಶಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ಭಾನುವಾರ ಆಯೋಜಿಸಿದ್ದ ‘ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಜ್ಞಾನ, ಸಂಶೋಧನೆ, ನಾಗರಿಕತೆ ಬೆಳೆದರೂ ಬಡವ-ಬಲ್ಲಿದರ ನಡುವಿನ ಅಂತರ ದಿನೇ ದಿನೇ ದೊಡ್ಡದಾಗುತ್ತಿದೆ. ವೈಯಕ್ತಿಕ ಪ್ರತಿಷ್ಠೆ, ಸವಾಲಿಗಾಗಿ ಮಿಲಿಯಗಟ್ಟಲೇ ಹಣ ಖರ್ಚು ಮಾಡುವುದನ್ನು ನೋಡುತ್ತಿದ್ದೇವೆ. ಯಾರದ್ದೋ ಹಣ, ಅವನಿಷ್ಟ ಎಂದು ಉಡಾಫೆಯಿಂದ ಮಾತನಾಡಲು ಸಾಧ್ಯವಿಲ್ಲ. ಏಕೆಂದರೆ ಕೋವಿಡ್‌ ದಾರುಣ ಪರಿಸ್ಥಿತಿಯಲ್ಲಿ ಇಡೀ ಜಗತ್ತು ನರಳುವಾಗ, ಬಡವರು ಮತ್ತಷ್ಟು ಬಡವರಾಗಿ ದುಃಖಕ್ಕೆ, ಆತ್ಮಹತ್ಯೆಗೆ ಬಲಿಯಾಗುತ್ತಿರುವಾಗ ಸಿರಿವಂತರ ಸಂಖ್ಯೆ ಹೆಚ್ಚುತ್ತಿರುವುದು ವಿಪರ್ಯಾಸ’ ಎಂದರು.

‘ರೈತರು, ಕೃಷಿ, ದುಡಿಮೆಗೆ ಪೂರಕವಾಗಿರುವ ಎಲ್ಲ ಸಂಗತಿಗಳು ನಗಣ್ಯವಾಗುತ್ತಿವೆ. ರೈತರನ್ನು ಭಯೋತ್ಪಾದಕರು ಎಂದು ಕರೆಯುವಷ್ಟರ ಮಟ್ಟಿಗೆ ನಮ್ಮ ಸಮಾಜ ಮುಂದೆಹೋಗಿದೆ. ಕಾಯಕದ ಬಗ್ಗೆ ಅಪನಂಬಿಕೆ ಬಂದಿದೆ ಎಂದರೆ ಮಧ್ಯಮ ವರ್ಗ ಕೂಡ ದುಡಿಮೆಯಲ್ಲಿ ವಿಶ್ವಾಸ ಕಳೆದುಕೊಂಡಿದೆ. ಈ ಕಾರಣಕ್ಕಾಗಿಯೇ ನಾವು 12 ನೇ ಶತಮಾನದ ಕಡೆ ಮುಖಮಾಡಬೇಕಿದೆ’ ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಮತ್ತೆ ಕಲ್ಯಾಣ ನೈಜ ಬದುಕನ್ನು ಕಟ್ಟಿಕೊಳ್ಳಲು ನೆರವಾಗುವಂತಹುದು. ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಕಾಯಕಜೀವಿಗಳನ್ನು ಕರೆದೊಯ್ಯುವ ಕಾರ್ಯವನ್ನು ಬಸವಾದಿ ಶಿವಶರಣರು ಮಾಡಿದ್ದು ಸ್ಮರಣಾರ್ಹ. ಮತ್ತೆ ಕಲ್ಯಾಣ ಕಾರ್ಯಕ್ರಮದ ಮೂಲಕ ನಾವೆಲ್ಲರೂ ಆ ಪಥದಲ್ಲಿ ಒಂದೊಂದೇ ಹೆಜ್ಜೆ ನಡೆಯುವ ಸಂಕಲ್ಪ ಮಾಡೋಣ’ ಎಂದು ಸಲಹೆ ನೀಡಿದರು.

‘ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮ’ ವಿಷಯ ಕುರಿತು ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಕವಿತಾ ರೈ ಉಪನ್ಯಾಸ ನೀಡಿದರು.

ಅಧ್ಯಾಪಕ ಎಚ್.ಎಸ್.ದ್ಯಾಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಸಂಚಾರದ ಕೆ.ಜ್ಯೋತಿ, ಕೆ.ದಾಕ್ಷಾಯಣಿ, ಎಚ್.ಎಸ್.ನಾಗರಾಜ್, ತಬಲಸಾರಥಿ ಶರಣ್ ತಂಡ ಸುಶ್ರಾವ್ಯವಾಗಿ ವಚನ ಗೀತೆಗಳನ್ನು ಹಾಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಮತ್ತು ಹೊಸದುರ್ಗದ ಕನಕ ಪ್ರಿಯ ನಾಟ್ಯಕಲಾ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು. ಅಧ್ಯಾಪಕ ವಿ.ಬಿ.ಚಳಗೇರಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಸಿದ್ದೇಶ್ ಕಾರ್ಯಕ್ರಮ ನಡೆಸಿಕೊಟ್ಟರು.

‘ಬಸವಣ್ಣ ವಿಶ್ವಕ್ಕೆ ಬೆಳಕು’

‘ಬಸವಣ್ಣ ವಿಶ್ವದ ಬೆಳಕು. ವಿಶ್ವಕ್ಕೇ ಗುರುವಾಗುವ ಗುರುತ್ವವನ್ನು ಹೊಂದಿದವರು. ಅವರು ನಮಗೆಲ್ಲ ನಡೆಯುವುದನ್ನು, ನುಡಿಯುವುದನ್ನು, ಉಣ್ಣುವುದನ್ನು, ಉಡುವುದನ್ನು ಕಲಿಸಿದರು. ಆಸ್ತಿಕರಲ್ಲಿ ಸ್ಥಾವರ ಪೂಜಕರು, ಜಂಗಮ ಆರಾಧಕರು ಎನ್ನುವ ಎರಡು ಪಂಗಡಗಳಿವೆ. ಶರಣರು ಜಂಗಮ ಆರಾಧಕರು. ಅರಿವು ಆಚಾರವುಳ್ಳ ವ್ಯಕ್ತಿಯೇ ಜಂಗಮ. ಇಷ್ಟಲಿಂಗ ಸಂಸ್ಕಾರದಿಂದ ಯಾರು ಬೇಕಾದರೂ ಜಂಗಮರಾಗಲು ಸಾಧ್ಯ. ಇಷ್ಟಲಿಂಗ ಬದುಕಿಗೆ ಚೈತನ್ಯ ತುಂಬುವ ಸಾಧನ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಗುರುಬಸವ ಮಹಾಮನೆಯಲ್ಲಿ ನಡೆದ ಸಾಮೂಹಿಕ ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. 20 ಜನ ಶ್ರದ್ಧಾಸಕ್ತರು ಇಷ್ಟಲಿಂಗ ದೀಕ್ಷೆ ಮತ್ತು ಜಂಗಮ ದೀಕ್ಷೆ ಪಡೆದರು. ಐ.ಜಿ.ಚಂದ್ರಶೇಖರಯ್ಯ ದೀಕ್ಷಾ ಕಾರ್ಯಕ್ರಮ ನಡೆಸಿಕೊಟ್ಟರು.

ಮತ್ತೆ ಕಲ್ಯಾಣ ಶಿವಧ್ವಜಾರೋಹಣ

‘12ನೇ ಶತಮಾನದ ವಿಶ್ವಗುರು ಬಸವಣ್ಣ ಸಮಾಜದಲ್ಲಿ ಮಹತ್ತರ ಬದಲಾವಣೆ ತಂದಿದ್ದರು. ಬಸವಣ್ಣನ ಬಗ್ಗೆ ನಮಗೆಲ್ಲ ವಿಶೇಷ ಅಭಿಮಾನವಿದೆ. ಅದನ್ನೇ ಈಗ 21ನೇ ಶತಮಾನದಲ್ಲಿ ನೆನಪಿಸುವ ಸದುದ್ದೇಶ ಉಳ್ಳದ್ದೇ ಮತ್ತೆ ಕಲ್ಯಾಣ ಕಾರ್ಯಕ್ರಮ. ಬಸವಣ್ಣನವರಂತೆ ಆ ಕಾಲದಲ್ಲಿ ಹಜ್ಮೀರ್ ಮಹಮದ್ ಚುಸ್ತಿ ಖಾಜಾ ಕೂಡ ಸಮಾಜ ಸುಧಾರಣೆಗೆ ಪ್ರಯತ್ನಿಸಿದರು. ಆ ಇಬ್ಬರೂ ಮಹಾನ್ ಶಕ್ತಿಗಳು ಜಾತಿ, ಮತ, ಪಂಥ ಎನ್ನದೆ ಜನರನ್ನು ಒಗ್ಗೂಡಿಸಿದರು. ಇದೇ ಕೆಲಸವನ್ನು ಈಗ ಪಂಡಿತಾರಾಧ್ಯ ಸ್ವಾಮೀಜಿ ಅವರು ಮಾಡುತ್ತಿದ್ದಾರೆ’ ಎಂದು ಮತ್ತೆ ಕಲ್ಯಾಣ ಕಾರ್ಯಕ್ರಮದ ಶಿವಧ್ವಜಾರೋಹಣ ನೆರವೇರಿಸಿದ ಮಂಗಳೂರಿನ ಇಷ್ಸಾನ್ ಸಂಚಾಲಕ ಮೌಲಾನ ಬಿ.ಎ.ಇಬ್ರಾಹಿಂ ಸಕಾಫಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು