ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯದಾನಕ್ಕೆ ವೈದ್ಯಕೀಯ ಸಾಕ್ಷ್ಯ ಕೊರತೆ

ಪೋಕ್ಸೊ ಕಾಯ್ದೆಯ ಕಾರ್ಯಾಗಾರದಲ್ಲಿ ನ್ಯಾಯಾಧೀಶೆ ಬಿ.ಕೆ.ಕೋಮಲಾ ಬೇಸರ
Last Updated 28 ಜನವರಿ 2023, 11:46 IST
ಅಕ್ಷರ ಗಾತ್ರ

ಚಿತ್ರದುರ್ಗ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದಾಖಲಾದ ಪ್ರಕರಣದ ತನಿಖೆಯಲ್ಲಿ ವೈದ್ಯಕೀಯ ಸಾಕ್ಷ್ಯವನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿ ನ್ಯಾಯಾಲಯಕ್ಕೆ ಒದಗಿಸದಿರುವ ಪರಿಣಾಮವಾಗಿ ನ್ಯಾಯದಾನಕ್ಕೆ ತೊಂದರೆಯಾಗಿದೆ ಎಂದು ನ್ಯಾಯಾಧೀಶೆ ಬಿ.ಕೆ.ಕೋಮಲಾ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪೊಲೀಸ್‌ ಅಧಿಕಾರಿಗಳಿಗೆ ಪೋಕ್ಸೊ ಕಾಯ್ದೆಯ ಕುರಿತು ಶನಿವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ವೈದ್ಯಕೀಯ ಸಾಕ್ಷ್ಯದಲ್ಲಿ ಲೋಪ ಉಂಟಾದರೆ ಪೊಲೀಸರು ಕಷ್ಟಪಟ್ಟು ತನಿಖೆ ನಡೆಸಿದರೂ ಆರೋಪಿಗೆ ಶಿಕ್ಷೆ ಕೊಡಿಸಲು ಸಾಧ್ಯವಾಗದೇ ಹೋಗಬಹುದು’ ಎಂದರು.

‘ಪೋಕ್ಸೊ ಕಾಯ್ದೆಯಲ್ಲಿ ವೈದ್ಯಕೀಯ ಸಾಕ್ಷ್ಯ ಮಹತ್ವ ಪಡೆದಿದೆ. ಆದರೆ, ವೈದ್ಯಕೀಯ ವರದಿಗಳು ಸರಿಯಾದ ರೀತಿಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಯಾಗುತ್ತಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಮಾದರಿಗಳನ್ನು ಸಂಗ್ರಹಿಸುವಲ್ಲಿ ಕೂಡ ಎಡವಟ್ಟುಗಳು ಆಗುತ್ತಿವೆ. ಮಾದರಿಯ ಕೊರತೆಯ ಕಾರಣಕ್ಕೆ ತಜ್ಞರು ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.

‘ವೈದ್ಯಕೀಯ ಹಾಗೂ ವಿಧಿವಿಜ್ಞಾನ ಪರೀಕ್ಷೆಗೆ ತಜ್ಞರನ್ನು ನೇಮಕ ಮಾಡಿಕೊಳ್ಳುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ತಜ್ಞರ ಕೊರತೆಯಿಂದ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ಸಂತ್ರಸ್ತೆಯನ್ನು ಪರೀಕ್ಷೆಗೆ ಒಳಪಡಿಸುವಲ್ಲಿ ಕೂಡ ವಿಳಂಬವಾಗುತ್ತಿದೆ. ವೈದ್ಯಾಧಿಕಾರಿ ಹಾಗೂ ವಿಧಿವಿಜ್ಞಾನ ತಜ್ಞರ ನಡುವೆ ಸಮನ್ವಯತೆ ಇದ್ದರೆ ಸಾಕಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ’ ಎಂದರು.

‘ಪೋಕ್ಸೊ ಪ್ರಕರಣಗಳ ತನಿಖೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಆತುರದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗುತ್ತಿದೆ. ದೋಷಾರೋಪ ಪಟ್ಟಿ ಸಲ್ಲಿಕೆಯಿಂದ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ ಆಗುತ್ತದೆ. ದೋಷಾರೋಪ ಪಟ್ಟಿಯಲ್ಲಿ ಬಲವಾದ ಸಾಕ್ಷ್ಯಗಳು ಇಲ್ಲವಾದರೆ ಪ್ರಯೋಜನವಾಗದು. ಸಾಕ್ಷ್ಯ ಸಂಗ್ರಹದತ್ತ ತನಿಖಾಧಿಕಾರಿ ಗಮನ ಹರಿಸಬೇಕು ಹಾಗೂ ಜಾಗರೂಕತೆಯಿಂದ ತನಿಖೆ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಪೋಕ್ಸೊ ಇತರ ಕಾಯ್ದೆಗಳಿಗಿಂತ ಭಿನ್ನ. ಪ್ರಕರಣ ದಾಖಲಾದಾಗಿನಿಂದ ತೀರ್ಪು ಬರುವವರೆಗೆ ಎಲ್ಲ ಹಂತದಲ್ಲಿ ಸಂಬಂಧಿಸಿದ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಪೊಲೀಸರು, ವೈದ್ಯರು, ಮಕ್ಕಳ ರಕ್ಷಣಾಧಿಕಾರಿ, ವಕೀಲರ ನಡುವೆ ಸಮನ್ವಯತೆ ಇರಬೇಕು. ಪ್ರತಿಯೊಬ್ಬರು ತಮ್ಮ ಕೆಲಸವನ್ನು ಲೋಪವಿಲ್ಲದೇ ಮಾಡಬೇಕು’ ಎಂದು ಸೂಚಿಸಿದರು.

‘ಪೋಕ್ಸೊ ಪ್ರಕರಣದ ತನಿಖೆ ನಡೆಸುವ ಪೊಲೀಸರಿಗೆ ಬಾಲನ್ಯಾಯ ಕಾಯ್ದೆಯ ಅರಿವು ಇರಬೇಕು. ಸಂತ್ರಸ್ತರ ವಯಸ್ಸಿನ ದೃಢೀಕರಣದ ದಾಖಲೆಯನ್ನು ಕಡ್ಡಾಯವಾಗಿ ಸಂಗ್ರಹಿಸಬೇಕು. ಮೊಬೈಲ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸೇರಿ ಸಾಮಾಜಿಕ ಜಾಲತಾಣ ಬಳಕೆ ಹೆಚ್ಚಾಗುತ್ತಿದ್ದು, ವಿದ್ಯುನ್ಮಾನ ಸಾಕ್ಷ್ಯ ಸಂಗ್ರಹಿಸಬೇಕು. 12 ವರ್ಷದ ಬಾಲಕಿಯೊಬ್ಬಳು ಇನ್‌ಸ್ಟಾಗ್ರಾಂನಲ್ಲಿ ಪರಿಚಿತನಾದ ಹುಡುಗನೊಂದಿಗೆ ಸಮಸ್ಯೆಗೆ ಸಿಲುಕಿ ನ್ಯಾಯಾಲಯಕ್ಕೆ ಬಂದಿದ್ದಾಳೆ’ ಎಂದು ವಿವರಿಸಿದರು.

‘ದೂರ ಸಂಚರಿಸಿದರೆ ಸಾಕ್ಷ್ಯ ನಾಶ’

ಲೈಂಗಿಕ ದೌರ್ಜನ್ಯಕ್ಕೆ ಸಿಲುಕಿದ ಸಂತ್ರಸ್ತೆ 16ಕಿ.ಮೀ. ಗಿಂತ ಹೆಚ್ಚು ಪ್ರಯಾಣ ಮಾಡಿದಾಗ ವೈದ್ಯಕೀಯ ಸಾಕ್ಷ್ಯಗಳು ನಾಶವಾಗುವ ಸಾಧ್ಯತೆ ಹೆಚ್ಚು. ಸಂತ್ರಸ್ತೆಯನ್ನು ಸಮೀಪದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸುವುದು ಸೂಕ್ತ ಎಂದು ಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ರೂಪಶ್ರೀ ಸಲಹೆ ನೀಡಿದರು.

‘ಲೈಂಗಿಕ ದೌರ್ಜನ್ಯಕ್ಕೆ ಸಿಲುಕಿದ ಸಂತ್ರಸ್ತೆಗೆ ನಡೆಸುವ ವೈದ್ಯಕೀಯ ಪರೀಕ್ಷೆಯ ಬಗ್ಗೆ ಪೊಲೀಸರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಆಸ್ಪತ್ರೆಗೆ ಕರೆತಂದಾಗ ಸಂತ್ರಸ್ತೆಗೆ ಮಾಹಿತಿ ನೀಡಲಾಗುತ್ತಿದೆ. ಆತಂಕಗೊಂಡ ಸಂತ್ರಸ್ತೆ ವೈದ್ಯಕೀಯ ಪರೀಕ್ಷೆಯನ್ನು ನಿರಾಕರಿಸುತ್ತಿದ್ದಾಳೆ. ಪೊಲೀಸರು ಈ ಬಗ್ಗೆ ಮೊದಲೇ ಮನವರಿಕೆ ಮಾಡುವುದು ಒಳಿತು’ ಎಂದು ಹೇಳಿದರು.

‘96 ಗಂಟೆಯೊಳಗೆ ಸಾಕ್ಷ್ಯ ಸಂಗ್ರಹಿಸಿ’

ಲೈಂಗಿಕ ದೌರ್ಜನ್ಯ ನಡೆದ 96 ಗಂಟೆಯ ಒಳಗೆ ಮಾತ್ರ ವೈದ್ಯಕೀಯ ಸಾಕ್ಷ್ಯ ಸಂತ್ರಸ್ತೆಯ ದೇಹದ ಮೇಲೆ ಇರುತ್ತದೆ. ವಿಳಂಬವಾದರೆ ವೈದ್ಯಕೀಯ ಸಾಕ್ಷ್ಯ ನಾಶವಾಗುವ ಸಾಧ್ಯತೆ ಹೆಚ್ಚು ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ.ಆರ್‌.ಪಿ.ವೇಣು ತಿಳಿಸಿದರು.

‘ದೌರ್ಜನ್ಯ ನಡೆದ ಸಮಯವನ್ನು ತನಿಖಾಧಿಕಾರಿ ಅರಿಯಬೇಕು. ದೌರ್ಜನ್ಯ ನಡೆದು ಹಲವು ದಿನ, ತಿಂಗಳು ಕಳೆದಿದ್ದರೆ ಬೇರೆ ಸಾಕ್ಷ್ಯದತ್ತ ಗಮನ ಹರಿಸಬೇಕು. ಸಂತ್ರಸ್ತೆ ಹಾಗೂ ಆರೋಪಿಯ ಬಟ್ಟೆ ಸೇರಿ ಇತರ ವಸ್ತುಗಳನ್ನು ಸಂಗ್ರಹಿಸಲು ಗಮನ ಕೇಂದ್ರೀಕರಿಸಬೇಕು. ವಸ್ತುಗಳ ಮೇಲೆ ವೈದ್ಯಕೀಯ ಸಾಕ್ಷ್ಯ ಹೆಚ್ಚು ದಿನ ಇರುತ್ತದೆ’ ಎಂದು ಮಾಹಿತಿ ನೀಡಿದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಆರ್‌.ಪ್ರಭಾಕರ್‌, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಲೋಕೇಶ್ವರಪ್ಪ ಇದ್ದರು.

2012ರಲ್ಲಿ ಜಾರಿಗೆ ಬಂದಿರುವ ಪೋಕ್ಸೊ ಕಾಯ್ದೆ ಹಲವು ಬದಲಾವಣೆ ಕಂಡಿದೆ. ಪೋಕ್ಸೊ ಪ್ರಕರಣದ ತನಿಖೆಯಲ್ಲಿ ಸುಧಾರಣೆ ಕಾಣಲು ಪೊಲೀಸರಿಗೆ ತರಬೇತಿಯ ಅಗತ್ಯವಿದೆ.

-ಎಸ್‌.ಜೆ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ

ಸಾಕ್ಷ್ಯ ಸಂಗ್ರಹದಲ್ಲಾದ ಲೋಪದಿಂದ ಭರಮಸಾಗರ ಠಾಣಾ ವ್ಯಾಪ್ತಿಯ ಇಸಾಮುದ್ರ ಗ್ರಾಮದ ಪ್ರಕರಣ ಖುಲಾಸೆ ಆಗಿದೆ. ಪೊಲೀಸರು ಜಾಗರೂಕತೆಯಿಂದ ತನಿಖೆ ನಡೆಸಬೇಕು.

-ಎಚ್‌.ಆರ್‌.ಜಗದೀಶ್‌, ವಿಶೇಷ ಸರ್ಕಾರಿ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT