ಶುಕ್ರವಾರ, ಸೆಪ್ಟೆಂಬರ್ 24, 2021
26 °C
ಆರೋಗ್ಯ ರಕ್ಷಾ ಸಮಿತಿ ಸಾಮಾನ್ಯ ಸಭೆಯಲ್ಲಿ ಶಾಸಕ ಎಂ. ಚಂದ್ರಪ್ಪ ಸೂಚನೆ

ಔಷಧ ತರಲು ಚೀಟಿ ಬರೆಯುವುದನ್ನು ನಿಲ್ಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ‘ಖಾಸಗಿ ಔಷಧ ಅಂಗಡಿಗಳಲ್ಲಿ ಔಷಧ ತರಲು ಚೀಟಿ ಬರೆಯುವುದನ್ನು ನಿಲ್ಲಿಸಿ’ ಎಂದು ಶಾಸಕ ಎಂ.ಚಂದ್ರಪ್ಪ ವೈದ್ಯರಿಗೆ ಸೂಚಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ಆರೋಗ್ಯ ರಕ್ಷಾ ಸಮಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಔಷಧ ಖರೀದಿಗೆ ಸರ್ಕಾರ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತದೆ. ಎಲ್ಲ ಕಾಯಿಲೆಗಳಿಗೂ ಮಾತ್ರೆ, ಇಂಜೆಕ್ಷನ್, ಟಾನಿಕ್ ಮತ್ತಿತರ ಔಷಧಗಳನ್ನು ಸರಬರಾಜು ಮಾಡಲಾಗುತ್ತದೆ. ಆದರೂ ವೈದ್ಯರು ಖಾಸಗಿ ಔಷಧ ಅಂಗಡಿಗಳಲ್ಲಿ ಔಷಧ ತರಲು ಚೀಟಿ ಬರೆದು ಕಳುಹಿಸುವುದಾಗಿ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಅಗತ್ಯ ಇರುವಷ್ಟು ಔಷಧಗಳಿಗೆ ಬೇಡಿಕೆ ಸಲ್ಲಿಸಿ ತರಿಸಿಕೊಳ್ಳಬೇಕು’ ಎಂದು ಶಾಸಕ ಎಂ. ಚಂದ್ರಪ್ಪ ಆಡಳಿತ ವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ ಅವರಿಗೆ ಸೂಚಿಸಿದರು.

‘ಸಣ್ಣ, ಪುಟ್ಟ ಕಾಯಿಲೆಗಳಿಗೆ ಕೊಡುವ ಕಡಿಮೆ ಬೆಲೆಯ ಮಾತ್ರೆಗಳು ಖಾಲಿ ಆಗಿ ಆರು ತಿಂಗಳಾದರೂ ತರಿಸುವುದಿಲ್ಲ. ಕೆಲವು ಮಾತ್ರೆಗಳು ಖಾಸಗಿ ಔಷಧ ಅಂಗಡಿಗಳಲ್ಲೂ ಸಿಗುವುದಿಲ್ಲ. ಬೇಕಾದರೆ ಇಂಡೆಂಟ್ ಪುಸ್ತಕ ತರಿಸಿ ಪರೀಕ್ಷಿಸಿ’ ಎಂದು ಸಾಮಾಜಿಕ ಕಾರ್ಯಕರ್ತ ಮಾಫೂಸ್ ಶಾಸಕರಿಗೆ ಮನವಿ ಮಾಡಿದರು. ‘ವೈದ್ಯೋ ನಾರಾಯಣೋ ಹರಿಃ’ ಎನ್ನುತ್ತಾರೆ. ಅದನ್ನು ಉಳಿಸಿಕೊಳ್ಳುವುದು ನಿಮ್ಮ ಮೇಲಿದೆ. ಸಾರ್ವಜನಿಕರಿಗೆ ಸ್ಪಂದಿಸಿ ಕೆಲಸ ಮಾಡಿ’ ಎಂದು ವೈದ್ಯಾಧಿಕಾರಿಗೆ ಸೂಚನೆ ನೀಡಿದರು.

‘ಆಸ್ಪತ್ರೆಯಲ್ಲಿದ್ದ ಜನೌಷಧ ಕೇಂದ್ರ ಮುಚ್ಚಲಾಗಿದೆ. ಜನೌಷಧ ಕೇಂದ್ರ ಆರಂಭಿಸಿದರೆ ಬಡವರಿಗೆ ಅನುಕೂಲ ಆಗಲಿದೆ’ ಎಂದು ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ಸಲಹೆ ನೀಡಿದರು. ‘ಹಿಂದಿನ ಪರವಾನಗಿ ರದ್ದುಪಡಿಸಿ ಹೊಸದಾಗಿ ಜನೌಷಧ ಕೇಂದ್ರ ಆರಂಭಿಸಲು ಅರ್ಜಿ ಆಹ್ವಾನಿಸಿ. ಜನೌಷಧ ಕೇಂದ್ರ ತೆರೆಯುವವರು ನಿಯಮಗಳನ್ನು ಪಾಲಿಸಬೇಕು. ನಿಗದಿತ ಬೆಲೆಗಿಂತ ಹೆಚ್ಚು ಹಣಕ್ಕೆ ಔಷಧಗಳನ್ನು ಮಾರಾಟ ಮಾಡದಂತೆ ನೋಡಿಕೊಳ್ಳಬೇಕು’ ಎಂದು ಶಾಸಕರು ಸೂಚಿಸಿದರು.

‘ಆಸ್ಪತ್ರೆಗೆ ದಿನದ 24 ಗಂಟೆಯೂ ವಿದ್ಯುತ್ ಸರಬರಾಜು ಮಾಡಬೇಕು. ಆಸ್ಪತ್ರೆಗೆ ಪ್ರತ್ಯೇಕ ಮಾರ್ಗ ಇರಬೇಕು’ ಎಂದು ಬೆಸ್ಕಾಂ ಎಇಇ ನಾಗರಾಜ್‌ಗೆ ಸೂಚನೆ ನೀಡಿದರು. ‘ಪಟ್ಟಣ ವ್ಯಾಪ್ತಿಯಲ್ಲಿ ಭೂಮಿಯ ಒಳಗೆ 12 ಕಿ.ಮೀ. ಉದ್ದದ ಕೇಬಲ್ ಅಳವಡಿಸುವ ಯೋಜನೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅಲ್ಲಿಯವರೆಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಬೆಸ್ಕಾಂ ಎಇಇ ಉತ್ತರಿಸಿದರು.

‘ಆಸ್ಪತ್ರೆಗೆ ಹೆರಿಗೆಗೆ ಬರುವ ಬಾಣಂತಿಯರಿಗೆ ಬಿಸಿನೀರು ಅಗತ್ಯವಾಗಿದ್ದು, ಗುಣಮಟ್ಟದ ಗೀಸರ್ ಖರೀದಿಸಿ. ಲಭ್ಯವಿರುವ ಹಣದಲ್ಲಿ ಆಂಬುಲೆನ್ಸ್ ದುರಸ್ತಿ ಮಾಡಿಸಿ’ ಎಂದು ಶಾಸಕರು ಆಡಳಿತಾಧಿಕಾರಿಗೆ ಸೂಚನೆ ನೀಡಿದರು.

‘ಆಸ್ಪತ್ರೆಯಲ್ಲಿ ಅಡುಗೆ ಮನೆ, ಧೋಬಿ ಘಾಟ್, ಶವಾಗಾರ ನಿರ್ಮಿಸಲಾಗುವುದು. ಆಸ್ಪತ್ರೆಯ ಮುಂಭಾಗದಲ್ಲಿ ಸಾರ್ವಜನಿಕರ ವಾಹನ. ಎಡಭಾಗದಲ್ಲಿ ಆಂಬುಲೆನ್ಸ್ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ಆಸ್ಪತ್ರೆಯ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗುವುದು’ ಎಂದು ಶಾಸಕರು ಭರವಸೆ ನೀಡಿದರು.

ಪುರಸಭೆ ಅಧ್ಯಕ್ಷ ಅಶೋಕ್, ಉಪಾಧ್ಯಕ್ಷ ಕೆ.ಸಿ.ರಮೇಶ್, ಸದಸ್ಯ ಮುರುಗೇಶ್, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಗೋಪಾಲ ನಾಯಕ, ಅಲ್ಲಾಭಕ್ಷಿ, ಕುಬೇರಪ್ಪ, ಲೋಕೋಪಯೋಗಿ ಎಇಇ ಮಹಾಬಲೇಶ್, ಬಸವರಾಜ್, ಪ್ರವೀಣ್ ಇದ್ದರು.

ಯಶೋದಮ್ಮ ಪ್ರಾರ್ಥಿಸಿದರು. ಬಿ.ಟಿ. ರಮೇಶ್ ವಂದಿಸಿದರು.

‘ವೇತನ ಹೆಚ್ಚಿಸಿದರೂ ವೈದ್ಯರು ಬರುತ್ತಿಲ್ಲ’

‘ಆಸ್ಪತ್ರೆಯಲ್ಲಿ ಫಿಜಿಷಿಯನ್, ಚರ್ಮ ರೋಗ ಹಾಗೂ ಅರಿವಳಿಕೆ ತಜ್ಞರಿಲ್ಲ. ಎಷ್ಟು ಬಾರಿ ಮನವಿ ಸಲ್ಲಿಸಿದರೂ ವೈದ್ಯರನ್ನು ನೇಮಕ ಮಾಡಿಲ್ಲ’ ಎಂದು ವೈದ್ಯಾಧಿಕಾರಿ ತಿಳಿಸಿದರು. ‘350 ಫಿಜಿಷಿಯನ್‌ಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ನಾಲ್ವರು ವೈದ್ಯರು ಮಾತ್ರ ಅರ್ಜಿ ಸಲ್ಲಿಸಿದ್ದರು. ₹ 60 ಸಾವಿರ ವೇತನವನ್ನು ₹ 1 ಲಕ್ಷಕ್ಕೆ ಏರಿಸಿದರೂ ವೈದ್ಯರು ಬರುತ್ತಿಲ್ಲ’ ಎಂದು ಶಾಸಕ ಎಂ. ಚಂದ್ರಪ್ಪ ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.