ಮಂಗಳವಾರ, ಜನವರಿ 18, 2022
15 °C
ಉಸ್ತುವಾರಿ ಸಚಿವರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೆಳಕಿಗೆ ಬಂದ ನಿಜಾಂಶ, ಶಾಸಕರ ಅಸಮಾಧಾನ

ಸ್ಥಾಪನೆಯಾದ ಘಟಕ: ಲಭ್ಯವಾಗದು ಆಮ್ಲಜನಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೋವಿಡ್‌ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಜಿಲ್ಲೆಯಲ್ಲಿ ಏಳು ಆಮ್ಲಜನಕ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಪರಿಸ್ಥಿತಿ ಇನ್ನಷ್ಟು ತೀವ್ರಗೊಂಡು ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾದರೆ ಈ ಘಟಕಗಳಿಂದ ಆಮ್ಲಜನಕ ಸಕಾಲಕ್ಕೆ ಲಭ್ಯವಾಗದು ಎಂಬ ಸತ್ಯ ಹೊರಬಿದ್ದಿದೆ.

ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಮ್ಲಜನಕ ಘಟಕಗಳ ನೈಜ ದರ್ಶನವಾಗಿದೆ. ಆಮ್ಲಜಕ ಉತ್ಪಾದನೆಗೆ ಅಗತ್ಯವಾಗಿ ಬೇಕಾಗಿರುವ ವಿದ್ಯುತ್‌ ಸಂಪರ್ಕ ಇನ್ನೂ ಸಿಕ್ಕಿಲ್ಲ ಎಂಬುದು ಶಾಸಕರು, ಸಚಿವರನ್ನು ಅಚ್ಚರಿಗೆ ಒಳಪಡಿಸಿತು.

ಕೋವಿಡ್‌ ಪರಿಸ್ಥಿತಿ ಹಾಗೂ ಚಿಕಿತ್ಸೆಗೆ ಮಾಡಿಕೊಂಡಿರುವ ಸಿದ್ಧತೆಯ ಬಗ್ಗೆ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅವರು ಕೇಳಿದ ಪ್ರಶ್ನೆ ಆಮ್ಲಜನಕ ಘಟಕಗಳ ಸ್ಥಿತಿಯತ್ತ ಬೆಳಕು ಚೆಲ್ಲಿತು. ‘ಹೊಳಲ್ಕೆರೆ ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕಿನ ಆಮ್ಲಜನಕ ಘಟಕಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಜನರೇಟರ್‌ ಮತ್ತು ವಿದ್ಯುತ್‌ ಪರಿವರ್ತಕದ ಸಂಪರ್ಕ ಸಿಗಬೇಕಿದೆ. ಟೆಂಡರ್‌ ಕರೆಯಲಾಗಿದ್ದು, ಶೀಘ್ರವೇ ಸಂಪರ್ಕ ಸಿಗುವ ವಿಶ್ವಾಸವಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗನಾಥ್‌ ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಶಾಸಕರಾದ ಜಿ.ಎಚ್‌. ತಿಪ್ಪಾರೆಡ್ಡಿ, ಟಿ. ರಘುಮೂರ್ತಿ ಹಾಗೂ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ತೀವ್ರ ಕಳವಳ ವ್ಯಕ್ತಪಡಿಸಿದರು. ‘ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕಕ್ಕೆ ಉಂಟಾದ ತೊಂದರೆ ಈ ಬಾರಿ ಉದ್ಭವಿಸದು ಎಂದುಕೊಂಡಿದ್ದೆವು. ಆದರೆ, ವಾಸ್ತವ ಪರಿಸ್ಥಿತಿ ಭಿನ್ನವಾಗಿದೆ. ಇಷ್ಟು ದಿನ ಏಕೆ ವಿದ್ಯುತ್‌ ಸಂಪರ್ಕ ಪಡೆಯಲು ಸಾಧ್ಯವಾಗಲಿಲ್ಲ’ ಎಂದು ಪ್ರಶ್ನಿಸಿದರು.

ಮಧ್ಯ ಪ್ರವೇಶಿಸಿದ ಸಚಿವ ಬಿ. ಶ್ರೀರಾಮುಲು, ‘ಕೋವಿಡ್‌ ಪರಿಸ್ಥಿಯನ್ನು ಸಮರ್ಥವಾಗಿ ನಿರ್ವಹಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಜಿಲ್ಲೆಯಲ್ಲಿ ಸ್ಥಾಪನೆ ಮಾಡಿದ ಘಟಕಗಳಿಂದ ಆಮ್ಲಜನಕ ಲಭ್ಯವಾಗದಿದ್ದರೆ ಹೊರಜಿಲ್ಲೆಯಿಂದ ವ್ಯವಸ್ಥೆ ಮಾಡಲಾಗುವುದು. ಆಮ್ಲಜನಕದ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಆಶ್ವಾಸನೆ ನೀಡಿದರು.

ಹಣ ದುರುಪಯೋಗ ತನಿಖೆ: ‘ಕೇಂದ್ರ ಸರ್ಕಾರದ ವತಿಯಿಂದ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದವರಿಗೆ ಹಸು ಖರೀದಿಸಲು ಅನುದಾನ ನೀಡಲಾಗುತ್ತಿದೆ. ಪ್ರತಿ ಫಲಾನುಭವಿಗೆ ₹ 1.20 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ ಹಸು ಖರೀದಿಗೆ ₹ 95 ಸಾವಿರ, ಮೇವಿಗೆ ₹ 10 ಸಾವಿರ ಹಾಗೂ ಸಾಗಣೆ ವೆಚ್ಚ, ವಿಮಾ ಕಂತಿಗೆ ತಲಾ ₹ 5 ನೀಡಲಾಗುತ್ತಿದೆ. ಹಸು ಖರೀದಿಯ ಮೊತ್ತ, ಸಾಗಣೆಯ ವೆಚ್ಚದ ಮೊತ್ತವನ್ನು ಒಬ್ಬನೇ ವ್ಯಕ್ತಿಗೆ ನೀಡಲಾಗಿದೆ. ಈ ಯೋಜನೆಯ ಬಗ್ಗೆ ಯಾವುದೇ ಜನಪ್ರತಿನಿಧಿಯ ಗಮನಕ್ಕೆ ತರದಂತೆ ಅನುಷ್ಠಾನ ಮಾಡಲಾಗಿದೆ. ಯಾವ ಮಾನದಂಡದ ಆಧಾರದ ಮೇಲೆ ಈ ಎಲ್ಲ ಪ್ರಕ್ರಿಯೆ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಪಟ್ಟು ಹಿಡಿದರು.

‘ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ₹ 1 ಲಕ್ಷ ಸಾಲ ಮತ್ತು ₹ 50 ಸಾವಿರ ಸಹಾಯಧನ ಸೇರಿ ₹ 1.5 ಲಕ್ಷ ನೀಡಲಾಗುತ್ತಿದೆ. ಆದರೆ, ಇದನ್ನು ಯಾವುದೋ ಸಹಕಾರ ಸಂಸ್ಥೆಯ ಮೂಲಕ ಸೌಲಭ್ಯ ವಿತರಿಸಲಾಗಿದೆ. ಇದರಲ್ಲಿ ಅಂದಾಜು ₹ 3 ಕೋಟಿಗೂ ಹೆಚ್ಚಿನ ಹಣದ ದುರುಪಯೋಗವಾಗಿದೆ. ಈ ಬಗ್ಗೆಯೂ ಕೂಲಂಕಶ ತನಿಖೆ ಆಗಬೇಕಿದೆ’ ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಇದ್ದರು.

*

₹ 95 ಸಾವಿರದಲ್ಲಿ ಯಾವ ಹಸು ಖರೀದಿ ಮಾಡಲಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಇಷ್ಟು ಮೊತ್ತಕ್ಕೆ ಹರಿಯಾಣದ ಮುರ‍್ರಾ ಎಮ್ಮೆಯನ್ನು ಖರೀದಿಸಿ ತರಬಹುದು.
-ಕೆ.ಎಸ್‌. ನವೀನ್‌, ವಿಧಾನಪರಿಷತ್‌ ಸದಸ್ಯ

....

ಬಗರ್‌ಹುಕುಂ ಸಮಿತಿಯಲ್ಲಿ ಭೂ ಮಂಜೂರಾತಿ ನೀಡಿದ ಹಕ್ಕುಪತ್ರಗಳನ್ನು ತಹಶೀಲ್ದಾರ್‌ ಅನುಮೋದನೆಗೆ ಅವಕಾಶವಿದೆ. ಬಗರ್‌ಹುಕುಂ ಹಕ್ಕುಪತ್ರಗಳನ್ನು ಫೆಬ್ರುವರಿಯಲ್ಲಿ ವಿತರಿಸಲು ಕ್ರಮ ವಹಿಸಬೇಕು.
-ಬಿ. ಶ್ರೀರಾಮುಲು, ಜಿಲ್ಲಾ ಉಸ್ತುವಾರಿ ಸಚಿವ

ತನಿಖೆಗೆ 15 ದಿನ ಕಾಲಾವಕಾಶ
ಜಲಾಮೃತ ಯೋಜನೆಯಡಿ 31 ಕೆರೆ ಅಭಿವೃದ್ಧಿಗೆ ₹ 3.34 ಕೋಟಿ ವೆಚ್ಚದಲ್ಲಿ ನಡೆದ ಕಾಮಗಾರಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು 15 ದಿನಗಳ ಕಾಲಾವಕಾಶ ನೀಡಲಾಯಿತು.

2020ರ ಜ. 16ರಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಜಿ.ಎಚ್‌. ತಿಪ್ಪಾರೆಡ್ಡಿ ಅವರು ಪ್ರಸ್ತಾಪ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸದಿರುವ ಬಗ್ಗೆ ಸಚಿವರು ತೀವ್ರ ಅಸಮಾಧಾನ ಹೊರಹಾಕಿದರು.

ಕೇಂದ್ರ ಸಚಿವ ನಾರಾಯಣಸ್ವಾಮಿ ಮಾತನಾಡಿ, ‘ಮುಖ್ಯಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯಬೇಕು. ಸಮಿತಿಯೊಂದನ್ನು ರಚಿಸಿ ತನಿಖೆ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

ಪ್ರತ್ಯೇಕ ಸಭೆಗೆ ಸೂಚನೆ
ವಸತಿ ಯೋಜನೆ, ಅಭಿವೃದ್ಧಿ ನಿಗಮಗಳ ಸಾಲ ವಿತರಣೆ, ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆಯೊಂದನ್ನು ನಿಗದಿ ಮಾಡುವಂತೆ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಅವರಿಗೆ ಸಚಿವ ಶ್ರೀರಾಮುಲು ಸೂಚಿಸಿದರು.

‘ಸಾಲ ಯೋಜನೆಗಳಿಗೆ ಫಲಾನುಭವಿ ಆಯ್ಕೆ ಮಾಡಿ ಪಟ್ಟಿ ಕಳುಹಿಸಲಾಗುತ್ತದೆ. ಆದರೆ, ಸಕಾಲಕ್ಕೆ ಸಾಲಸೌಲಭ್ಯ ಕಲ್ಪಿಸಲು ಬ್ಯಾಂಕುಗಳು ಸ್ಪಂದಿಸುವುದಿಲ್ಲ’ ಎಂದು ಶಾಸಕಿ ಕೆ. ಪೂರ್ಣಿಮಾ ದೂರಿದರು. ಇದಕ್ಕೆ ದನಿಗೂಡಿಸಿದ ಕೇಂದ್ರ ಸಚಿವ ನಾರಾಯಣಸ್ವಾಮಿ, ‘ಈ ಸಮಸ್ಯೆ ಬಹುದಿನಗಳಿಂದ ಹಾಗೆಯೇ ಇದೆ. ನಿಗಮದಲ್ಲಿ ಇರುವ ಅನುದಾನ ಸದ್ಬಳಕೆ ಆಗಬೇಕು. ಪ್ರತ್ಯೇಕ ಸಭೆ ಕರೆಯುವುದು ಸೂಕ್ತ’ ಎಂಬ ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.