ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕಾಡುಗೊಲ್ಲರಿಗೆ ಎಸ್ಟಿ ಸೌಲಭ್ಯ: ಸಚಿವ ಸುಧಾಕರ್

ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಭರವಸೆ
Published 16 ಮಾರ್ಚ್ 2024, 14:34 IST
Last Updated 16 ಮಾರ್ಚ್ 2024, 14:34 IST
ಅಕ್ಷರ ಗಾತ್ರ

ಹಿರಿಯೂರು: ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಭರವಸೆ ನೀಡಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾಡುಗೊಲ್ಲ ಸಮುದಾಯದವರಿಗೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

‘ರಾಜಕಾರಣದಲ್ಲಿ ಮತ ಹಾಕುವುದು ಬಿಡುವುದು ಎರಡನೇ ಪ್ರಶ್ನೆ. ಆದರೆ ಅನ್ಯಾಯಕ್ಕೆ ಒಳಗಾದ ಸಮುದಾಯಕ್ಕೆ ನ್ಯಾಯ ಕೊಡಿಸುವುದು ಜನಪ್ರತಿನಿಧಿಗಳ ಹಾಗೂ ಸರ್ಕಾರದ ಆದ್ಯ ಕರ್ತವ್ಯ. ಚಿತ್ರದುರ್ಗ ಜಿಲ್ಲೆಯಲ್ಲಿ ಕಾಡುಗೊಲ್ಲ ಸಮುದಾಯವು ಬಹು ದೊಡ್ಡ ಸಂಖ್ಯೆಯಲ್ಲಿದೆ. ಈ ಸಮುದಾಯ ತನ್ನದೇ ಆದ ಆಚಾರ ವಿಚಾರ ಸಂಸ್ಕೃತಿ ನಡೆ-ನುಡಿಯನ್ನು ರೂಢಿಸಿಕೊಂಡು ಬಂದಿದೆ. ಸಾಮಾಜಿಕ ಪರಿಕಲ್ಪನೆಯಲ್ಲಿ ಈ ಸಮುದಾಯಕ್ಕೆ ನ್ಯಾಯ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಸಚಿವರು ಹೇಳಿದರು.

‘2008ರಲ್ಲಿ ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಈ ಸಮುದಾಯಕ್ಕೆ ₹5 ಕೋಟಿ ಅನುದಾನ ನೀಡಿದ್ದೆ. 2013–2018ರ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ನಿರ್ಣಯ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಕಡತ ಕಳಿಸಿತ್ತು. ಆದರೆ ಜಾತಿ ಪ್ರಮಾಣ ಪತ್ರದಲ್ಲಿ ಕಾಡುಗೊಲ್ಲ ಇಲ್ಲವೆಂದು ಕಡತವನ್ನು ವಾಪಸ್ ಕಳಿಸಲಾಯಿತು. ರಾಜ್ಯದಲ್ಲಿ ಕಾಡುಗೊಲ್ಲ ಜನಾಂಗ ಇದೆ ಎಂಬುದನ್ನು ಸಾಬೀತು ಪಡಿಸಲು ಸರ್ಕಾರದಿಂದ ಜಾತಿ ಪ್ರಮಾಣ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಮುಂದೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮೀಸಲಾತಿಗೆ ವಿರೋಧವಾಗಿದೆ’ ಎಂದು ಸುಧಾಕರ್ ಆರೋಪಿಸಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿ ಗೌಡ, ಮುಖಂಡರಾದ ಯಲ್ಲದಕೆರೆ ಮಂಜುನಾಥ್, ಶಿವರಂಜಿನಿ ಯಾದವ್, ಎಸ್.ಆರ್. ತಿಪ್ಪೇಸ್ವಾಮಿ, ಕಲ್ಲಟ್ಟಿ ತಿಪ್ಪೇಸ್ವಾಮಿ, ಹೇಮಂತ್ ಯಾದವ್, ಟಿ.ಬಿ.ರಾಮಕೃಷ್ಣಪ್ಪ, ವಕೀಲ ಯತೀಶ್, ಪ್ರಭು ಯಾದವ್, ಕೆ.ಟಿ. ತಿಪ್ಪೇಸ್ವಾಮಿ, ಗುಯಿಲಾಳು ನಾಗರಾಜಯ್ಯ, ವಿದ್ಯಾಧರ್, ಗೋಪಿ ಯಾದವ್, ಪಿಡಿ ಕೋಟೆ ಪುಟ್ಟೇಗೌಡ, ಬೀರೇನಹಳ್ಳಿ ಷಡಕ್ಷರಿ, ದಿಂಡಾವರ ಮಹೇಶ್, ನಾಗಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT