ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟನೂರು ಸಮೀಪದ ಬೊಮ್ಮೇನಹಳ್ಳಿಯಲ್ಲಿ ಭಾನುವಾರ ಮುಂಜಾನೆ ಸೌಹಾರ್ದದ ಸಂಕೇತವಾಗಿರುವ ಮೊಹರಂ ಕೆಂಡಾರ್ಚನೆ ವೇಳೆ ತಾತ, ಮೊಮ್ಮಗ ಗಾಯಗೊಂಡಿದ್ದಾರೆ.
ಸಂಪ್ರದಾಯದಂತೆ ಗ್ರಾಮದ ರಮೇಶ್ ಪ್ರತಿ ವರ್ಷ ಕೆಂಡ ಹಾಯುತ್ತಿದ್ದರು. ಆದರೆ ಈ ಬಾರಿ ಎರಡು ವರ್ಷದ ಮೊಮ್ಮಗ ರವಿಯನ್ನು ಎತ್ತಿಕೊಂಡು ಕೆಂಡ ಹಾಯುವಾಗ ಆಯತಪ್ಪಿ ಬಿದ್ದಿದ್ದಾರೆ. ಸ್ಥಳದಲ್ಲಿದ್ದ ಭಕ್ತರು ಕೂಡಲೇ ಇಬ್ಬರನ್ನು ರಕ್ಷಿಸಿದ್ದಾರೆ. ಅಲ್ಪ ಪ್ರಮಾಣದಲ್ಲಿ ಗಾಯಗೊಂಡ ತಾತ, ಮೊಮ್ಮಗನನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಪೊಲೀಸರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು.
ವೈದ್ಯರ ನಿರ್ಲಕ್ಷ್ಯ–ಆರೋಪ:
ಬೆಳಿಗ್ಗೆ ಆಸ್ಪತ್ರೆಗೆ ದಾಖಲಾದ ಗಾಯಾಳುಗಳಿಗೆ ಮಧ್ಯಾಹ್ನದವರೆಗೂ ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದರು. ವಿಷಯ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಕೆ.ಸಿ.ವೀರೇಂದ್ರ, ಟಿ.ರಘುಮೂರ್ತಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದರು.
ಗಾಯಾಳು ಮಗು, ತಾತನಿಗೆ ಹಾಗೂ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಜಿಲ್ಲಾ ಶಸ್ತ್ರಚಿಕಿತ್ಸಕ, ವೈದ್ಯರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಸಂಬಂಧಿಕರು ದೂರಿದರು.
‘ಜಿಲ್ಲಾ ಶಸ್ತ್ರಚಿಕಿತ್ಸಕ ಬಸವರಾಜ್, ವೈದ್ಯರಾದ ಅನೂಪ್ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂಬುದು ಕಂಡುಬಂದಿದೆ. ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಅಮಾನತು ಮಾಡಲು ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ತಿಳಿಸಿದರು.