ಬುಧವಾರ, ಡಿಸೆಂಬರ್ 8, 2021
21 °C
ಸಮೀಕ್ಷಾ ವರದಿ ವಾರದೊಳಗೆ ತಂತ್ರಾಂಶದಲ್ಲಿ ದಾಖಲಿಸಿ: ಡಾ.ಪಿ.ಸಿ. ಜಾಫರ್

ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಕೃಷಿ ಬೆಳೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಿಲ್ಲೆಯಲ್ಲಿ ಈಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಸುಮಾರು 1,02,731 ಹೆಕ್ಟೇರ್ ಕೃಷಿ ಬೆಳೆಗಳು ಹಾನಿಗೆ ಒಳಗಾಗಿವೆ. 346 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿ ಉಂಟಾಗಿದೆ ಎಂಬ ಮಾಹಿತಿ ಇದೆ. ಜಂಟಿ ಸಮೀಕ್ಷೆ ಕೂಡ ಮುಂದುವರಿದಿದ್ದು, ವರದಿಯನ್ನು ತಂತ್ರಾಂಶದಲ್ಲಿ ಅಳವಡಿಸುವಾಗ ನೈಜ ಚಿತ್ರಣ ದಾಖಲಿಸಿ...

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಮಳೆ ಹಾನಿ ಮಾಹಿತಿ, ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಪಿ.ಸಿ. ಜಾಫರ್ ಅಧಿಕಾರಿಗಳಿಗೆ ತಾಕೀತು ಮಾಡಿದ ಪರಿ ಇದು.

‘ಕಟಾವು ಹಂತದಲ್ಲಿದ್ದ ಜಿಲ್ಲೆಯ ಪ್ರಮುಖ ಬೆಳೆಗಳಾದ ಶೇಂಗಾ, ರಾಗಿ, ಮೆಕ್ಕೆಜೋಳ ಬೆಳೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಇದರ ಜತೆಗೆ ಇತರ ಬೆಳೆಗಳು ಸೇರಿವೆ. ಇದರಿಂದ ರೈತರಿಗೆ ತುಂಬಾ ನಷ್ಟವಾಗಿದೆ. ಸಕಾಲದಲ್ಲಿ ನೆರವು ನೀಡುವುದು ಸರ್ಕಾರದ ಆದ್ಯತೆಯಾಗಿದೆ. ಹೀಗಾಗಿ ಹಾನಿಯ ಸಂಪೂರ್ಣ ವಿವರದ ಮಾಹಿತಿಯನ್ನು ಪರಿಹಾರ ತಂತ್ರಾಂಶದಲ್ಲಿ ನ.30ರ ಒಳಗೆ
ದಾಖಲಿಸಿ’ ಎಂದು ಸೂಚನೆ ನೀಡಿದರು.

‘ಈಗಾಗಲೇ ಹಾನಿಗೆ ಒಳಗಾದ ಜಮೀನುಗಳ ಪೈಕಿ 7,524 ಫಲಾನುಭವಿ
ಗಳ ಅಂಕಿ–ಅಂಶವನ್ನು ಪೋರ್ಟಲ್‌ನಲ್ಲಿ ದಾಖಲಿಸಲಾಗಿದೆ. ಕಂದಾಯ, ಕೃಷಿ, ತೋಟಗಾರಿಕೆ, ಪಂಚಾಯತ್ ರಾಜ್‌ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸುತ್ತಿದ್ದು, ವೇಗವಾಗಿ ನಡೆಯುತ್ತಿದೆ’ ಎಂದು ಕೃಷಿ ಇಲಾಖೆ ಅಧಿ
ಕಾರಿಗಳು ಸಭೆಗೆ ಮಾಹಿತಿ ನೀಡಿದರು.

‘ಬೆಳೆ ನಷ್ಟದ ಸಂದರ್ಭದಲ್ಲಿ ಬೆಳೆ ವಿಮೆಯಿಂದ ರೈತರಿಗೆ ಅನುಕೂಲವಾಗಲಿದೆ. ಈ ಕುರಿತು ಏಕೆ ಹೆಚ್ಚಿನ ಅರಿವು ಮೂಡಿಸುತ್ತಿಲ್ಲ ಎಂದು ಜಾಫರ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಜಿಲ್ಲೆಯ ರೈತರನ್ನು ಮನವೊಲಿಸುವ ಮೂಲಕ ಬೆಳೆ ವಿಮೆ ನೋಂದಣಿ ಕಾರ್ಯ ಹೆಚ್ಚಾಗಲು ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

1,211 ಮನೆಗಳಿಗೆ ಹಾನಿ: ‘2021ರ ಜ.1ರಿಂದ ನ. 23ರವರೆಗೆ ಜಿಲ್ಲೆಯ ವಾಡಿಕೆ ಮಳೆ 528 ಮಿ.ಮೀ ಇದೆ. ಆದರೆ, ಈ ಅವಧಿಯಲ್ಲಿ 843 ಮಿ.ಮೀ. ವಾಸ್ತವಿಕ ಮಳೆಯಾಗಿದ್ದು, ಶೇ 60ರಷ್ಟು ಅಧಿಕ ಮಳೆಯಾಗಿದೆ. ವಾರದ ಹಿಂದೆಯಷ್ಟೇ ಸುರಿದ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ 2 ಪೂರ್ಣ ಮನೆಗಳು, 1,209 ಮನೆಗಳು ಹಾನಿಗೊಳಗಾಗಿವೆ. ಜಿಲ್ಲೆಯಲ್ಲಿ ಒಟ್ಟು 1,211 ವಾಸದ ಮನೆಗಳು ಅಕಾಲಿಕ ಮಳೆಯಿಂದಾಗಿ ಹಾನಿಗೊಳಗಾಗಿವೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಜಿಲ್ಲೆಯಲ್ಲಿ 32 ಜಾನುವಾರಿಗೆ ಜೀವಹಾನಿ ಉಂಟಾಗಿದೆ. ತಾಲ್ಲೂಕುವಾರು ಪರಿಹಾರ ನೀಡುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ವರದಿ ನೀಡಲಾಗಿದೆ. ಅಮೃತಧಾರೆ, ಅಮೃತಸಿರಿ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆದರೆ, ಪಶುಪಾಲನಾ ಸೇವಾ ಇಲಾಖೆಯಲ್ಲಿ ಶೇ 50ರಷ್ಟು ಸಿಬ್ಬಂದಿ ಕೊರತೆ ಇದೆ’ ಎಂದು ಇಲಾಖೆಯ ಉಪನಿರ್ದೇಶಕರು ಸಭೆಯ ಗಮನಕ್ಕೆ ತಂದರು.

‘ಯುಎಸ್‍ಎ ಹಾಗೂ ಯೂರೋಪ್‌ ದೇಶಗಳಲ್ಲಿ ಈಗಾಗಲೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮುಂಬರುವ ಮಾರ್ಚ್‍ನಲ್ಲಿ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಶೇ 100ರಷ್ಟು ಪ್ರಗತಿ ಸಾಧಿಸಬೇಕು. ಮೊಳಕಾಲ್ಮುರು ಹಾಗೂ ಚಳ್ಳಕೆರೆ ತಾಲ್ಲೂಕಿನಲ್ಲಿ ಪ್ರಗತಿ ಮಂದಗತಿಯಲ್ಲಿ ಸಾಗಿದೆ. ಈ ಭಾಗಗಳಲ್ಲಿ ವಿಶೇಷ ಅಭಿಯಾನ ಕೈಗೊಂಡು ಪ್ರಗತಿ ಸಾಧಿಸಬೇಕು. ಜಿಲ್ಲೆಯಲ್ಲಿ ಇರುವ ಆಮ್ಲಜನಕ ಘಟಕಗಳ ನಿರ್ವಹಣೆಯನ್ನು ನಿತ್ಯ ಪರಿಶೀಲಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ ನೀಡಿದರು.

ಕೋವಿಡ್‍ನಿಂದಾಗಿ ಜಿಲ್ಲೆಯಲ್ಲಿ ಈವರೆಗೂ 208 ಜನರು ಮರಣ ಹೊಂದಿದ್ದಾರೆ. ಅದರಲ್ಲಿ 118 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. 98 ಪ್ರಕರಣಗಳಿಗೆ ಪರಿಹಾರ ವಿತರಿಸುವುದು ಬಾಕಿ ಇದೆ. ಎಲ್ಲ ದಾಖಲೆಗಳನ್ನು ಈಗಾಗಲೇ ಸಂಗ್ರಹಿಸಿದ್ದು, ತಕ್ಷಣ ಪರಿಹಾರ ನೀಡಲು ಕ್ರಮ ವಹಿಸಲಾಗುವುದು ಎಂದು ಡಿಎಚ್‌ಒ ಡಾ.ಆರ್. ರಂಗನಾಥ್‌ ಹೇಳಿದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ ಇದ್ದರು.

ಪೂರ್ಣ ಹಾನಿಗೆ ₹ 95 ಸಾವಿರ ಪರಿಹಾರ:

ಜಿಲ್ಲೆಯಲ್ಲಿ ಅನೇಕ ಮನೆಗಳು ಹಾನಿಗೆ ಒಳಗಾಗಿವೆ. ಹೀಗಾಗಿ ಪೂರ್ಣ ಹಾಗೂ ತೀವ್ರ ಸ್ವರೂಪದಲ್ಲಿ ಹಾನಿ ಉಂಟಾಗಿದ್ದರೆ ಅಂತಹ ಮನೆಗಳಿಗೆ ₹ 95 ಸಾವಿರ, ಭಾಗಶಃ ಹಾನಿಯಾಗಿದ್ದರೆ ₹ 50 ಸಾವಿರ ಪರಿಹಾರ ಮಂಜೂರು ಮಾಡಲು ತಂತ್ರಾಂಶದಲ್ಲಿ ವರದಿ ದಾಖಲಿಸಿ ಎಂದು ಡಾ.ಪಿ.ಸಿ. ಜಾಫರ್ ಸೂಚನೆ ನೀಡಿದರು.

ಸಮೀಕ್ಷೆ ನಂತರ ದುರಸ್ತಿ ಮಾಡುವಂತಿದ್ದರೆ, ವಾಸಿಸಲು ಯೋಗ್ಯ ಎನಿಸಿದರೆ ಮಾನದಂಡ ಅನುಸರಿಸಿ ತಕ್ಷಣವೇ ಪರಿಹಾರ ನೀಡಲು ಕ್ರಮವಹಿಸಿ. ಸಂಪೂರ್ಣ ಹಾನಿ ಕಂಡು ಬಂದ್ದಲ್ಲಿ ತಡಮಾಡದೆಯೇ ಮನೆಗಳ ಅಂಕಿ–ಅಂಶ ತಕ್ಷಣವೇ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಲು ಮುಂದಾಗಿ ಎಂದು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು