ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರ ಪ್ರಕರಣ: ಮುರುಘಾ ಶರಣರ ಕೊಠಡಿಯ ಮಹಜರು

Last Updated 4 ಸೆಪ್ಟೆಂಬರ್ 2022, 21:54 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಸೆ. 1ರಂದು ಬಂಧನಕ್ಕೆ ಒಳಗಾಗಿರುವ ಶಿವಮೂರ್ತಿ ಮುರುಘಾ ಶರಣರನ್ನು ಭಾನುವಾರ ಮುರುಘಾ ಮಠಕ್ಕೆ ಕರೆತಂದ ಪೊಲೀಸರು, ಅವರು ತಂಗುತ್ತಿದ್ದ ಕೊಠಡಿಯ ಮಹಜರು ನಡೆಸಿದರು.

ಪೊಲೀಸ್‌ ವಾಹನದಲ್ಲಿ ಭಾನುವಾರ ಆರೋಪಿಯನ್ನು ಮಠಕ್ಕೆ ಕರೆದೊಯ್ದ ತನಿಖಾ ತಂಡ, ಅವರು ತಂಗುತ್ತಿದ್ದ ಕೊಠಡಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನೂ ಪರಿಶೀಲಿಸಿದೆ. ಅಂದಾಜು ಎರಡೂವರೆ ಗಂಟೆ ಮಹಜರು ನಡೆಯಿತು.

‘ಪ್ರಕರಣದ ಪ್ರಮುಖ ಆರೋಪಿಯಾದ ಮುರುಘಾ ಶರಣರನ್ನು ಮಠಕ್ಕೆ ಕರೆದೊಯ್ದು ಮಹಜರು ಮಾಡಲಾಗಿದೆ. ಅವರು ತಂಗುತ್ತಿದ್ದ ಕೊಠಡಿಯಲ್ಲಿ ದೋಷಾರೋಪಕ್ಕೆ ಪೂರಕವಾಗಿ ಲಭ್ಯವಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ಇನ್ನೂ ಮುಂದುವರಿದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಹೇಳಿದ್ದಾರೆ.

ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿ ಸಂತ್ರಸ್ತ ಬಾಲಕಿಯರು ನ್ಯಾಯಾಲಯದಲ್ಲಿ ದಾಖಲಿಸಿದ ಹೇಳಿಕೆಯ ಪ್ರತಿಯು ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿಯ ಕೈಸೇರಿದೆ. ಇದರಲ್ಲಿರುವ ಅಂಶಗಳ ಆಧಾರದಲ್ಲಿ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಲೈಂಗಿಕ ದೌರ್ಜನ್ಯ ಎಸಗಿದ್ದರು ಎನ್ನಲಾದ ಸ್ಥಳಕ್ಕೆ ಆರೋಪಿಯೊಂದಿಗೆ ತೆರಳಿ ಪರಿಶೀಲನೆ ನಡೆಸಿದರು.

ತನಿಖಾ ತಂಡದೊಂದಿಗೆ ವಿಧಿವಿಜ್ಞಾನ ತಜ್ಞರು ಇರಲಿಲ್ಲ. ವಶಕ್ಕೆ ಪಡೆದ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಾಧ್ಯತೆ ಇದೆ. ಮಹಜರು ಸಂದರ್ಭ ಮಠದ ಆವರಣದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಎಲ್ಲ ಪ್ರವೇಶ ದ್ವಾರಗಳನ್ನು ಮುಚ್ಚಿ ಭಕ್ತರು, ಪ್ರವಾಸಿಗರು ಬಾರದಂತೆ ನಿರ್ಬಂಧಿಸಲಾಗಿತ್ತು.

ಆರೋಪಿಯನ್ನು ಸೆ.2ರಂದು ವಿಚಾರಣೆಗಾಗಿ ವಶಕ್ಕೆ ಪಡೆದಿರುವ ತನಿಖಾ ತಂಡ ಡಿವೈಎಸ್‌ಪಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದೆ. ತನಿಖಾಧಿಕಾರಿ ಆಗಿರುವ ಡಿವೈಎಸ್‌ಪಿ ಅನಿಲ್‌ ಕುಮಾರ್‌ ನೇತೃತ್ವದ ತಂಡ ಕೇಳಿದ ಪ್ರಶ್ನೆಗಳಿಗೆ ಆರೋಪಿಯಿಂದ ಸಮರ್ಪಕ ಉತ್ತರ ಲಭ್ಯವಾಗಿಲ್ಲ ಎಂದು ಪೊಲೀಸ್‌ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ವಿಚಾರಣೆ ನಡೆಸುತ್ತಿರುವ ಡಿವೈಎಸ್‌ಪಿ ಕಚೇರಿ ಆವರಣದಲ್ಲಿಯೇ ವೈದ್ಯರ ತಂಡ ಬೀಡುಬಿಟ್ಟಿದೆ. ಆರೋಪಿಯನ್ನು ಆಗಾಗ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಆರೋಗ್ಯದ ಮೇಲೆ ನಿಗಾ ಇಟ್ಟಿದೆ. ಪೊಲೀಸ್‌ ಕಸ್ಟಡಿ ಅವಧಿಯು ಸೆ.5ರಂದು ಮುಕ್ತಾಯವಾಗಲಿದೆ. ತನಿಖಾ ತಂಡವು ಆರೋಪಿಯನ್ನು ಸೋಮವಾರ ನ್ಯಾಯಾಲಯದ ಎದುರು ಹಾಜರುಪಡಿಸಲಿದೆ.

ವರದಿ ಸಲ್ಲಿಕೆಗೆ ಆಯೋಗ ಸೂಚನೆ

ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ತನಿಖಾ ಕ್ರಮಗಳ ಕುರಿತು ರಾಜ್ಯ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಆಯೋಗ ವಿವರವಾದ ವರದಿ ಕೇಳಿದೆ.

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಆಯೋಗದ ಕಾರ್ಯದರ್ಶಿ ಈ ಸಂಬಂಧ ಪತ್ರ ಬರೆದಿದ್ದಾರೆ.

‘ಪರಿಶಿಷ್ಟ ಜಾತಿಯ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದೂರು ದಾಖಲಾಗಿರುವುದಾಗಿ ವರದಿಯಾಗಿದೆ. ಬಾಲಕಿಯ ಭವಿಷ್ಯದ ಮೇಲೆ ಇದು ಪರಿಣಾಮ ಬೀರಲಿದೆ. ಈ ಬಗ್ಗೆ ವಿವರವಾದ ವರದಿ ನೀಡಿ’ ಎಂದು ಪತ್ರದಲ್ಲಿ ಸೂಚಿಸಲಾಗಿದೆ.

ಸಾಮೂಹಿಕ ವಿವಾಹ ಇಂದು

ಮುರುಘಾ ಮಠದಲ್ಲಿ ನಡೆಯಲಿರುವ ಮಾಸಿಕ ಸಾಮೂಹಿಕ ವಿವಾಹ ಸಮಾರಂಭಕ್ಕೆ ಸಿದ್ಧತೆಗಳು ನಡೆದಿವೆ. ಸೆ.5ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಶಿಕ್ಷಕರ ದಿನಾಚರಣೆಯು ಪ್ರಭಾರ ಪೀಠಾಧಿಪತಿ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ.

ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಏಳು ಜೋಡಿ ವಧು–ವರರು ನೋಂದಣಿ ಮಾಡಿಕೊಂಡಿದ್ದಾರೆ. ಗುರುಮಠಕಲ್‌ ಶಾಖಾ ಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಭಾಗವಹಿಸಲಿದ್ದಾರೆ.

ಮಠದಲ್ಲಿ 32 ವರ್ಷಗಳಿಂದ ಪ್ರತಿ ತಿಂಗಳ 5ರಂದು ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ. ಗ್ರಹಣ, ಅಮಾವಾಸ್ಯೆ ಎದುರಾದ ದಿನವೂ ಸಾಮೂಹಿಕ ವಿವಾಹ ಸ್ಥಗಿತಗೊಂಡಿರಲಿಲ್ಲ. ಶಿವಮೂರ್ತಿ ಮುರುಘಾ ಶರಣರು ಬಂಧಿತರಾಗಿದ್ದರಿಂದ ಈ ಕಾರ್ಯ ನೆರವೇರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT