ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಮಠಕ್ಕೆ ಪರಿಶಿಷ್ಟರು ಪೀಠಾಧ್ಯಕ್ಷರಾಗಲಿ

ಪರಿಶಿಷ್ಟ ಜಾತಿ, ಪಂಗಡ ಸಮುದಾಯದ ನಾಯಕರ ಆಗ್ರಹ
Last Updated 30 ಸೆಪ್ಟೆಂಬರ್ 2022, 12:50 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುರುಘಾ ಮಠಕ್ಕೆ ನೂತನ ಪೀಠಾಧ್ಯಕ್ಷರ ನೇಮಕದ ಅವಕಾಶ ಒದಗಿಬಂದರೆ ಪರಿಶಿಷ್ಟ ಜಾತಿ, ಪಂಗಡ ಅಥವಾ ಹಿಂದುಳಿದ ಸಮುದಾಯಕ್ಕೆ ಸೇರಿದ ವಟುವನ್ನು ಪರಿಗಣಿಸಬೇಕು. ವೀರಶೈವ ಲಿಂಗಾಯತರು ಮಠವನ್ನು ಕಬ್ಜ ಮಾಡಿಕೊಳ್ಳಲು ಬಿಡುವುದಿಲ್ಲ ಎಂದು ನಗರಸಭೆಯ ಮಾಜಿ ಅಧ್ಯಕ್ಷ ಬಿ.ಕಾಂತರಾಜ್‌ ಹೇಳಿದರು.

‘ಮುರುಘಾ ಮಠ ಶೂನ್ಯಪೀಠ ಪರಂಪರೆ ಹೊಂದಿದೆ. ಬಸವತತ್ವಕ್ಕೆ ಬದ್ಧವಾಗಿ ಮುನ್ನಡೆಯುತ್ತಿದೆ. ಸರ್ವ ಜನಾಂಗ ಶ್ರೀಮಠಕ್ಕೆ ನಡೆದುಕೊಳ್ಳುತ್ತ ಬಂದಿದೆ. ಪಾಳೆಗಾರರು ಮಠವನ್ನು ಕಟ್ಟಿಸಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಸಾಮಾಜಿಕ ನ್ಯಾಯ ಪರಿಪಾಲಿಸುವ ದೃಷ್ಟಿಯಿಂದ ಶೋಷಿತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವುದು ಸೂಕ್ತ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಶಿವಮೂರ್ತಿ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿರುವ ಕಾರಣಕ್ಕೆ ಮಠದ ಆಡಳಿತಕ್ಕೆ ತಾತ್ಕಾಲಿಕವಾಗಿ ತೊಂದರೆಯಾಗಿದೆ. ಇದೇ ಸಂದರ್ಭವನ್ನು ದುರುಪಯೋಗ ಮಾಡಿಕೊಂಡ ಕೆಲವರು ವೀರಶೈವ ಲಿಂಗಾಯತ ಸಮುದಾಯದ ಹೆಸರಿನಲ್ಲಿ ಸಭೆ ನಡೆಸಿದ್ದು ಅಕ್ಷಮ್ಯ. ಇತರ ಜಾತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನೂತನ ಪೀಠಾಧಿಪತಿ ನೇಮಕದ ಪ್ರಸ್ತಾವ ಮುಂದಿಡಲಾಗಿದೆ. ಈ ಪ್ರಸ್ತಾವವನ್ನು ಸರ್ಕಾರ ಪರಿಗಣಿಸಬಾರದು’ ಎಂದು ಒತ್ತಾಯಿಸಿದರು.

‘ಪೀಠಾಧ್ಯಕ್ಷ ವಿಚಾರವಾಗಿ ಸಭೆ ನಡೆಸಿದವರು ಸರ್ವ ಜನಾಂಗದ ವಿಶ್ವಾಸ ಪಡೆದಿಲ್ಲ. ಮಠ ವೀರಶೈವ ಲಿಂಗಾಯತ ಸಮುದಾಯದ ಆಸ್ತಿ ಎಂಬಂತೆ ವರ್ತಿಸಿದ್ದಾರೆ. ಇತ್ತೀಚಿನವರೆಗೆ ಪೀಠಾಧ್ಯಕ್ಷರ ಸುತ್ತ ಇದ್ದವರೇ ಮಗ್ಗಲು ಬದಲಿಸಿ ಪರ್ಯಾಯ ವ್ಯವಸ್ಥೆಗೆ ಮುಂದಾಗಿರುವುದು ಅನುಮಾನ ಮೂಡಿಸಿದೆ. ಮುರುಘಾ ಮಠಕ್ಕೆ ಎದುರಾಗಿರುವ ಸಂಕಷ್ಟ ನಿವಾರಣೆಗೆ ಸರ್ವ ಜನಾಂಗದ ಪ್ರಾತಿನಿಧ್ಯ ಕಡ್ಡಾಯವಾಗಬೇಕು’ ಎಂದರು.

ಭೋವಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ, ನಾಯಕ ಸಮುದಾಯದ ಮುಖಂಡರಾದ ಲಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ವೀರಣ್ಣ ಯಾದವ್, ಪಾಳೆಗಾರ ಕರಿಯಪ್ಪ, ನಗರಸಭೆ ಮಾಜಿ ಸದಸ್ಯ ಇ.ಮಂಜುನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT