ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖದ ಸ್ವಾರ್ಥ ತ್ಯಜಿಸಿದರಷ್ಟೇ ನೆಮ್ಮದಿ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

Last Updated 13 ಅಕ್ಟೋಬರ್ 2021, 16:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಸುಖದ ಬಯಕೆಯಿಂದ ಕಾಯಕ ಮಾಡುವುದು ತಪ್ಪಲ್ಲ. ಅಂತಹ ವೃತ್ತಿ ಮತ್ತೊಬ್ಬರ ದುಃಖಕ್ಕೆ ಕಾರಣವಾಗಬಾರದು. ಇದರಿಂದ ಸಮಾಜದಲ್ಲಿ ನೆಮ್ಮದಿ ನೆಲೆಸಲು ಸಾಧ್ಯವಿಲ್ಲ. ಸುಖದ ಸ್ವಾರ್ಥವನ್ನು ತ್ಯಜಿಸಿದಾಗ ಸಮಾಜದಲ್ಲಿ ದುಃಖ ಇರುವುದಿಲ್ಲ ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಬುಧವಾರ ಸಂಜೆ ನಡೆದ ಮುರುಘಾಶ್ರೀ ಹಾಗೂ ಭರಮಣ್ಣನಾಯಕ ಶೌರ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ‘ದುರ್ಗಣ ಇಲ್ಲವಾದರೆ ದೇವರಾಗುತ್ತೇವೆ. ಆದರೆ, ಲೋಕದಲ್ಲಿ ಬಹುತೇಕರು ದುರ್ಗುಣ ಮೈದುಂಬಿಸಿಕೊಂಡಿದ್ದಾರೆ. ಹೀಗಿರುವಾಗ ಸುಖ ಎಲ್ಲಿಂದ ಬರಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಕಾಯಕವನ್ನು ದೇವರ ಪೂಜೆಯಷ್ಟೇ ನಿಷ್ಠೆಯಿಂದ ಮಾಡಬೇಕು ಎಂಬುದನ್ನು ಸ್ಮೃತಿ, ಪುರಾಣಗಳೂ ಹೇಳಿವೆ. ಗುಡಿಯಲ್ಲಿ ಪೂಜೆ ಮಾಡಿ ಹೊರಗೆ ಬಂದು ದ್ವೇಷ ಕಾರಿದರೆ ದೇವರಿಗೆ ಮೆಚ್ಚುಗೆ ಆಗುವುದಿಲ್ಲ. ದೇವರ ಕೋಣೆಯಲ್ಲಿನ ಪೂಜೆಯಿಂದ ಪಡೆದ ಸ್ಫೂರ್ತಿಯನ್ನು ಜೀವನದ ಉದ್ದಕ್ಕೂ ಅಳವಡಿಸಿಕೊಳ್ಳಬೇಕು. ಬದುಕು ದೇವರ ಪೂಜೆಯಾಗಬೇಕು. ಪ್ರತಿ ಹೆಜ್ಜೆಯೂ ಹೂವು, ಹಣ್ಣು ಆಗಬೇಕು’ ಎಂದು ಹೇಳಿದರು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ‘ತಾತ್ಸಾರಕ್ಕೆ ಒಳಗಾಗಿರುವ ಮಧ್ಯ ಕರ್ನಾಟಕದಲ್ಲಿ ಶರಣ ಸಂಸ್ಕೃತಿ ಉತ್ಸವ ನಡೆಯುತ್ತಿರುವುದು ಸಂತಸದ ಸಂಗತಿ. ಸಂಸ್ಕೃತಿ, ಸಾಹಿತ್ಯ, ಬದುಕು, ಸಾಮಾಜಿಕ ಹೋರಾಟವನ್ನು ಮಠ ಪರಿಚಯಿಸುತ್ತಿದೆ. ವ್ಯಕ್ತಿತ್ವದ ಪರಿಚಯ, ವ್ಯಕ್ತಿತ್ವ ವಿಕಸನಕ್ಕೆ ಇದು ನೆರವಾಗುತ್ತಿದೆ. ಇಂತಹ ಮಠಕ್ಕೆ ಮಹಾತ್ಮ ಗಾಂಧೀಜಿ, ಅಬ್ದುಲ್‌ ಕಲಾಂ ಅವರ ಪಾದಸ್ಪರ್ಶವಾಗಿದೆ’ ಎಂದು ಹೇಳಿದರು.

‘ದಲಿತ, ಹಿಂದುಳಿದ ಹಾಗೂ ಅಸ್ಪೃಶ್ಯರಿಗೆ ಧರ್ಮ ದೀಕ್ಷೆ ನೀಡಿದಾಗ ಮಠವನ್ನು ಅನೇಕರು ಪ್ರಶ್ನಿಸಿದರು. ಇವರು ಕಮ್ಯುನಿಸ್ಟ್‌ ಮಠಾಧೀಶರೇ ಎಂಬ ಚರ್ಚೆ ಕೂಡ ನಡೆಯಿತು. ಇಂತಹ ಚರ್ಚೆಗೆ ಶರಣರು ಗಮನ ಕೊಡಲಿಲ್ಲ. ಪ್ರತಿ ಜಾತಿಗೆ ಸಂತನನ್ನು ಪರಿಚಯಿಸಿ ದಿಕ್ಕು ತೋರಿದರು. ದೀಕ್ಷೆ ನೀಡಿ ಕಳುಹಿಸದೇ ಭೂದಾನ ಮಾಡಿದರು. ಮೌಢ್ಯಾಚರಣೆ ವಿರುದ್ಧ ಧ್ವನಿ ಎತ್ತಿದರು. ಮಾನವೀಯತೆ, ಮೌಲ್ಯ, ಸದ್ಗುಣಗಳನ್ನು ಮರೆಯಲು ಅಮವಾಸ್ಯೆ, ಹುಣ್ಣಿಮೆ ಬೇಕಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಮುರುಘಾಶ್ರೀ’ ಪ್ರಶಸ್ತಿ ಸ್ವೀಕರಿಸಿದ ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮಾತನಾಡಿ, ‘ರಾಜರು ವಿಜಯೋತ್ಸವದ ಸಂಕೇತವಾಗಿ ದಸರಾ ಆಚರಣೆ ಮಾಡುವುದು ರೂಢಿ. ಇದನ್ನು ಜನರ ಉತ್ಸವವಾಗಿ ರೂಪಿಸಿದ ಕೀರ್ತಿ ಶರಣರಿಗೆ ಸಲ್ಲಬೇಕು. ಮುರುಘಾಶ್ರೀ ಪ್ರಶಸ್ತಿಯ ಜೊತೆಗೆ ಭರಮಣ್ಣನಾಯಕ ಶೌರ್ಯಪ್ರಶಸ್ತಿ ನೀಡುತ್ತಿರುವುದು ಉತ್ತಮ ನಡೆ. ಹಳೆ ಬೇರು ಹೊಸ ಚಿಗುರು ಸೇರಿಸುವ ಪ್ರಕ್ರಿಯೆ ಅದ್ಭುತ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂತೆಬೆನ್ನೂರು ಸಿದ್ಧನಮಠದ ಯುಗಧರ್ಮ ರಾಮಣ್ಣ, ತಮಿಳುನಾಡು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ನಾಗರತ್ನಂ, ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ, ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಶಿಕಾರಿಪುರ ಜುಬೇದಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಡಾ.ಅಮ್ಜಾದ್ ಹುಸ್ಸೇನ್ ಅವರಿಗೆ ಮುರುಘಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.ಯೋಗಪಟು ತನುಶ್ರೀ ಅವರಿಗೆ ಭರಮಣ್ಣನಾಯಕ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು,ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕೆ.ಎಸ್‌.ನವೀನ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT