ಗುರುವಾರ , ಜನವರಿ 20, 2022
15 °C

ಗಡಿಗ್ರಾಮ ನಾಗಸಮುದ್ರ: ಸರ್ಕಾರಿ ಪಿಯು ಕಾಲೇಜು ಆರಂಭಕ್ಕೆ ಮನವಿ

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ತಾಲ್ಲೂಕಿನ ನಾಗಸಮುದ್ರದಲ್ಲಿ ಸರ್ಕಾರಿ ಪಿಯು ಕಾಲೇಜು ಆರಂಭಿಸುವ ಮೂಲಕ ಸ್ಥಳೀಯ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಜನಸಂಖ್ಯೆಯಲ್ಲಿ ತಾಲ್ಲೂಕಿನಲ್ಲಿಯೇ ದೊಡ್ಡ ಗ್ರಾಮವಾದ ನಾಗಸಮುದ್ರ ಸೀಮಾಂಧ್ರ ಗಡಿಯಲ್ಲಿದೆ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳವಾದ ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಕೃಷಿ ಮತ್ತು ದಿನಗೂಲಿ ಇವರ ಪ್ರಮುಖ ಕಸುಬಾಗಿದೆ.

‘ನಾಗಸಮುದ್ರದಲ್ಲಿ ಸರ್ಕಾರಿ ಪ್ರೌಢಶಾಲೆ, ಎರಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಇದರಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಸಮೀಪದ ಅಶೋಕ ಸಿದ್ದಾಪುರ, ರೊಪ್ಪ, ರಾಮಸಾಗರ, ಹುಚ್ಚಂಗಿದುರ್ಗ, ಹೆರೂರು, ಬೈರಾಪುರ, ಭಟ್ರಹಳ್ಳಿ, ಚಿಕ್ಕೇರಹಳ್ಳಿ, ಅಮಕುಂದಿ, ಬಸವೇಶ್ವರ ನಗರ ಮುಂತಾದ ಗ್ರಾಮಗಳ ವಿದ್ಯಾರ್ಥಿಗಳಿಗೆ ಇಲ್ಲಿ ಪಿಯು ಕಾಲೇಜು ಆರಂಭದಿಂದ ಅನುಕೂಲವಾಗಲಿದೆ’ ಎಂದು ಗ್ರಾಮದ ಮುಖಂಡ ಗೋವಿಂದಪ್ಪ ಅನಿಸಿಕೆ ವ್ಯಕ್ತಪಡಿಸಿದರು.

‘ಕಾಲೇಜು ವ್ಯವಸ್ಥೆ ಇಲ್ಲದ ಕಾರಣ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ದೂರವಾಗಿದ್ದಾರೆ. ಹೆಣ್ಣುಮಕ್ಕಳ ಸಂಖ್ಯೆ ಇದರಲ್ಲಿ ಹೆಚ್ಚಿದೆ. ದೂರದ ಬಳ್ಳಾರಿ, ಮೊಳಕಾಲ್ಮುರು, ಚಳ್ಳಕೆರೆ, ಚಿತ್ರದುರ್ಗಕ್ಕೆ ಹೋಗಬೇಕಿದೆ. ರಾಂಪುರದಲ್ಲಿ ಸಹ ಸರ್ಕಾರಿ
ಶಿಕ್ಷಣ ವ್ಯವಸ್ಥೆ 8ನೇ ತರಗತಿಗೆ ಸೀಮಿತವಾಗಿದೆ. ಹೋಗಿ ಬರಲು ಸಾರಿಗೆ ವ್ಯವಸ್ಥೆ ಇಲ್ಲದ ಪರಿಣಾಮ ಪ್ರಾಣದ ಹಂಗು ತೊರೆದು ಆಟೊಗಳಲ್ಲಿ ವಿದ್ಯಾರ್ಥಿಗಳು ಹೋಗಿ ಬರುತ್ತಿದ್ದಾರೆ’ ಎಂದು ವಿವರಿಸಿದರು.

‘ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣ ವಿಶಾಲವಾಗಿದ್ದು, ಕೊಠಡಿಗಳು ಲಭ್ಯವಿವೆ. ಕಾಲೇಜು ಪ್ರಾರಂಭಿಸಲು ಸೂಕ್ತವಾಗಿದೆ. ಮಂಜೂರಾತಿ ಸಿಕ್ಕಲ್ಲಿ ಮುಂದಿನ ದಿನಗಳಲ್ಲಿ ಸ್ಥಳದ ವ್ಯವಸ್ಥೆಗೆ ಗ್ರಾಮಸ್ಥರೂ ಕೈಜೋಡಿಸುತ್ತಾರೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಅಡವಿ ಮಾರಯ್ಯ, ತಿಪ್ಪೇಸ್ವಾಮಿ ಹೇಳಿದರು.

‘ಕಾಲೇಜು ಆರಂಭಿಸುವಂತೆ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಯಾವುದೇ ಕ್ರಮ ಜರುಗಿಲ್ಲ. ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು