ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಸ್ಥಳೀಯ ಅಭಿವೃದ್ಧಿ ನಿಧಿ ಬಳಸಿ: ಸಚಿವ ನಾರಾಯಣಗೌಡ ಸೂಚನೆ

Last Updated 6 ಜುಲೈ 2021, 15:05 IST
ಅಕ್ಷರ ಗಾತ್ರ

ಚಿತ್ರದುರ್ಗ: ಶಾಸಕರ ಸ್ಥಳೀಯ ಅಭಿವೃದ್ಧಿ ನಿಧಿ ಜಿಲ್ಲೆಯಲ್ಲಿ ₹ 24.94 ಕೋಟಿ ಇದ್ದು, ಶೇ 1ರಷ್ಟು ಕೂಡ ಬಳಕೆ ಆಗಿಲ್ಲ. ಖರ್ಚಾಗದ ಅನುದಾನವನ್ನು ಸರ್ಕಾರ ವಾಪಾಸ್‌ ಪಡೆಯಲಿದೆ. ಅಧಿಕಾರಿಗಳು ಜಾಗೃತರಾಗಿ ಕೆಲಸ ಮಾಡಬೇಕು ಎಂದು ಯುವ ಸಬಲೀಕರಣ, ಕ್ರೀಡಾ ಹಾಗೂ ಸಾಂಖ್ಯಿಕ ಸಚಿವ ನಾರಾಯಣಗೌಡ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ‘ಸರ್ಕಾರದಿಂದ ಬಿಡುಗಡೆ ಮಾಡಲಾದ ಅನುದಾನವನ್ನು ಸಕಾಲದಲ್ಲಿ ಬಳಕೆ ಮಾಡಬೇಕು. ನಿಗದಿತ ಉದ್ದೇಶಕ್ಕೆ ಮಾತ್ರವೇ ವಿನಿಯೋಗಿಸಬೇಕು. ಕಾರ್ಯಾದೇಶ ಸಿಕ್ಕ ಬಳಿಕವೂ ಏಜೆನ್ಸಿ ಸರಿಯಾಗಿ ಕೆಲಸ ಮಾಡದಿದ್ದರೆ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ತರಾಟೆ ತೆಗೆದುಕೊಂಡರು. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಹಾಗೂ ನಿರ್ಮಿತಿ ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದರು.

‘ಕ್ರಿಯಾ ಯೋಜನೆಗಳಿಗೆ ಅಧಿಕಾರಿಗಳು ಅನುಮತಿ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಇಂತಹ ಸಮಸ್ಯೆ ಸೃಷ್ಟಿಯಾಗುತ್ತಿವೆ. ದಾಖಲೆಗಳ ಪ್ರಕಾರ ಪ್ರದೇಶಾಭಿವೃದ್ಧಿ ನಿಧಿಯ ಬಳಕೆಯಲ್ಲಿ ಜಿಲ್ಲೆ ಅತ್ಯಂತ ಹಿಂದುಳಿದಿದೆ. ಇದು ಹೀಗೆ ಮುಂದುವರಿಯಬಾರದು’ ಎಂದು ಎಚ್ಚರಿಕೆ ನೀಡಿದರು.

ಶಾಸಕಿ ಕೆ.ಪೂರ್ಣಿಮಾ ಮಾತನಾಡಿ, ‘ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ಸರಳೀಕರಿಸುವ ಅಗತ್ಯವಿದೆ. ಅನುದಾನ ಮಂಜೂರಾತಿಯಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಇದರಿಂದ ಹಲವು ಕಾಮಗಾರಿಗಳನ್ನು ಸಕಾಲಕ್ಕೆ ಕೈಗೆತ್ತಿಕೊಳ್ಳಲು, ಪೂರ್ಣಗೊಳಿಸಲು ಆಗುತ್ತಿಲ್ಲ. ಈ ನಿಮಯಗಳನ್ನು ಇನ್ನಷ್ಟು ಸರಳೀಕರಿಸಿ’ ಎಂದು ಕೋರಿದರು.

ಸುಮ್ಮನಿರಲು ಸಾಧ್ಯವಿಲ್ಲ:‘ಯೋಜನಾ ಇಲಾಖೆ ಸಾಮಾನ್ಯವಾಗಿ ಮುಖ್ಯಮಂತ್ರಿ ಬಳಿ ಇರುತ್ತಿತ್ತು. ಸಮಯದ ಅಭಾವದಿಂದ ಎಲ್ಲವನ್ನು ಗಮನಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಜವಾಬ್ದಾರಿಯನ್ನು ಮುಖ್ಯಮಂತ್ರಿ ನನಗೆ ನೀಡಿದ್ದಾರೆ. ಹೀಗಾಗಿ, ಸುಮ್ಮನೆ ಕೂರಲು ಸಾಧ್ಯವಿಲ್ಲ. ಪ್ರತಿ ಜಿಲ್ಲೆಗೆ ತೆರಳಿ ಪರಿಶೀಲನೆ ನಡೆಸುತ್ತಿದ್ಧೇನೆ. ಕೂಲಂಕುಷವಾಗಿ ಎಲ್ಲವನ್ನು ಗಮನಿಸಿ ಅನುದಾನ ಬಿಡುಗಡೆ, ಬಳಕೆಯನ್ನು ಗಮನಿಸುತ್ತಿದ್ದೇನೆ’ ಎಂದು ಸಚಿವ ನಾರಾಯಣಗೌಡ ತಿಳಿಸಿದರು.

‘ಅನುದಾನ ಬಿಡುಗಡೆ ಹಾಗೂ ಕಾಮಗಾರಿಯಲ್ಲಿ ಅಧಿಕಾರಿಗಳು ಲೋಪ ಉಂಟು ಮಾಡುವಂತಿಲ್ಲ. ಲೋಪವೆಸಗಿದ್ದು ಗೊತ್ತಾದರೆ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು. ಇದಕ್ಕೆ ಅವಕಾಶ ನೀಡದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಕೃಷಿ ಹೊಂಡ ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮ ನಡೆಯುತ್ತಿದೆ. ಶಾಸಕರ ಗಮನಕ್ಕೆ ತರದೇ ಫಲಾನುಭವಿಗಳನ್ನು ಆಯ್ಕೆ ಮಾಡಬಾರದು. ಕೃಷಿ ಹೊಂಡ ತೆಗೆದು ಒಂದೇ ವರ್ಷದಲ್ಲೇ ಮುಚ್ಚಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಐದು ವರ್ಷದಲ್ಲಿ ನಿರ್ಮಾಣಗೊಂಡ ಕೃಷಿ ಹೊಂಡದ ಸಂಪೂರ್ಣ ಮಾಹಿತಿ ಪಡೆದು ಶಾಸಕರು ಸ್ಥಳ ಪರಿಶೀಲನೆ ಮಾಡಬೇಕು’ ಎಂದು ಹೇಳಿದರು.

ಒಲಿಪಿಂಕ್ಸ್‌ ಕ್ರೀಡಾಪಟುಗೆ ₹ 10 ಲಕ್ಷ
ಟೋಕಿಯೊ ಒಲಿಪಿಂಕ್ಸ್‌ನಲ್ಲಿ ಪಾಲ್ಗೊಳ್ಳುವ ಕರ್ನಾಟಕದ ಕ್ರೀಡಾಪಟುಗಳಿಗೆ ತಲಾ ₹ 10 ಲಕ್ಷ ನೀಡಲಾಗುವುದು ಎಂದು ಯುವ ಸಬಲೀಕರಣ, ಕ್ರೀಡಾ ಸಚಿವ ನಾರಾಯಣಗೌಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕಿದೆ. ಇದಕ್ಕೆ ಪ್ರೋತ್ಸಾಹಧನ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ’ ಎಂದು ಹೇಳಿದರು.

ಶಾಸಕ ಟಿ.ರಘುಮೂರ್ತಿ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಜೀವನ್‍ಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ಚಂದ್ರಯ್ಯ ಇದ್ದರು.

***

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಬಳಕೆ ಮಾಡಲಾಗುತ್ತಿದೆ. ಕ್ರಿಯಾಯೋಜನೆ ಸಿದ್ಧಪಡಿಸಿ ನೀಡಲಾಗಿದೆ. ಹೆಚ್ಚಿನ ಅನುದಾನಕ್ಕೂ ಬೇಡಿಕೆ ಸಲ್ಲಿಸಲಾಗಿದೆ.
-ಜಿ.ಎಚ್.ತಿಪ್ಪಾರೆಡ್ಡಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT