ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನಹಟ್ಟಿ: ನಿರ್ವಹಣೆಯಿಲ್ಲದೆ ಪಾಳುಬಿದ್ದ ತಳಕು ಸಸ್ಯಕ್ಷೇತ್ರ

ಸಾಮಾಜಿಕ ಅರಣ್ಯ ಇಲಾಖೆ ನಿರ್ಲಕ್ಷ್ಯ
Published 17 ಸೆಪ್ಟೆಂಬರ್ 2023, 7:33 IST
Last Updated 17 ಸೆಪ್ಟೆಂಬರ್ 2023, 7:33 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಸದಾ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ತಳಕು ಗ್ರಾಮದ ತರಾಸು ಸಸ್ಯಕ್ಷೇತ್ರ ಸೂಕ್ತ ನಿರ್ವಹಣೆ ಕೊರತೆಯಿಂದ ಪಾಳುಬಿದ್ದಿದೆ. 

ತಳಕು ಗ್ರಾಮವು ಹೋಬಳಿ ಕೇಂದ್ರವಾಗಿದ್ದು, ಗ್ರಾಮದಲ್ಲಿ ಉತ್ತಮವಾದ ಶಾಲಾ ಕಾಲೇಜುಗಳು, ಪೊಲೀಸ್‌ ಠಾಣೆ, ಬೆಸ್ಕಾಂ ಉಪವಿಭಾಗೀಯ ಕಚೇರಿ, ರೈಲು ನಿಲ್ದಾಣದ ಜತೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಮಿನುಗಿದ ಟಿ.ಎಸ್.ವೆಂಕಣ್ಣಯ್ಯ, ತ.ಸು.ಶಾಮರಾಯ, ತರಾಸು ಅವರ ಹುಟ್ಟೂರು ಸಹ ಆಗಿದೆ. ವೆಂಕಣ್ಣಯ್ಯ ಹೆಸರಿನಲ್ಲಿ ಸುಸಜ್ಜಿತವಾದ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಲಾಗಿದೆ. ಹಸಿರಿನಿಂದ ಕಂಗೊಳಿಸಬೇಕು ಎಂಬ ಉದ್ದೇಶದಿಂದ ತರಾಸು ಹೆಸರಿನಲ್ಲಿ ಸಸ್ಯಕ್ಷೇತ್ರ ತೆರೆಯಲಾಯಿತು.

ಈ ಸಸ್ಯಕ್ಷೇತ್ರವು ಜಿಲ್ಲಾ ಪಂಚಾಯಿತಿಯ ಸಾಮಾಜಿಕ ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ಸಸ್ಯಕ್ಷೇತ್ರದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು, ಅರಣ್ಯ ರಕ್ಷಕರು, ಕಾವಲುಗಾರರು ಮುತುವರ್ಜಿ ವಹಿಸಿ ಹತ್ತಾರು ವರ್ಷಗಳಿಂದ ಆಲ, ಬೇಲ, ಬೇವು, ಮಾವು, ಅಶೋಕ, ತೇಗ ಸೇರಿದಂತೆ ತರಹೇವಾರಿ ಗಿಡಮರಗಳನ್ನು ಬೆಳೆಸಿದ್ದಾರೆ. ಹಾಗೇ ಈ ಸಸ್ಯಕ್ಷೇತ್ರದಲ್ಲಿ ಹೋಬಳಿಯ ರೈತರಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಮಾವು, ಬೇವು, ಹೊಂಗೆ, ತೇಗ, ಹೊನ್ನೆ, ಹುಣಸೆ, ನೇರಳೆ, ಅಶೋಕ, ಕರಿಬೇವು, ಸಿಮರುಬಾ, ಹೆಬ್ಬೇವು, ಕಮರ ಮರಗಳ ಸಸಿಗಳನ್ನು ಬೆಳೆಸಿ ನೀಡುತ್ತಿದ್ದರು.

ಇದರಿಂದ ತಳಕು ಹೋಬಳಿಯ 48 ಗ್ರಾಮಗಳಿಂದಲೂ ರೈತರು ತಮಗೆ ಅಗತ್ಯವಾದ ಗಿಡಗಳನ್ನು ಇಲ್ಲಿಯೇ ಖರೀದಿಸುತ್ತಿದ್ದರು. ಗಿಡಗಳನ್ನು ಆರೈಕೆಮಾಡಲು ನೀರಿಗಾಗಿ ಹಲವು ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ. 20ರಿಂದ 25ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಜತೆಗೆ ನರೇಗಾ ಯೋಜನೆಯಲ್ಲಿ ಕೃಷಿಹೊಂಡವನ್ನೂ ನಿರ್ಮಿಸಲಾಗಿದೆ. ಒಟ್ಟಾರೆಯಾಗಿ ಈ ಸಸ್ಯಕ್ಷೇತ್ರ ಸುಸಜ್ಜಿತವಾಗಿ ನಿರ್ವಹಣೆಯಾಗುತ್ತಿತ್ತು.

ಸಸ್ಯಕ್ಷೇತ್ರವು ಹೆದ್ದಾರಿಯ ಪಕ್ಕದಲ್ಲೇ ಇರುವುದರಿಂದ ಇಲ್ಲಿನ ಹಸಿರುಸಿರಿ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿತ್ತು. ಹಾಗೇ ಪರಿಸರ ಪ್ರೇಮಿಗಳಿಗೆ, ವಾಯುವಿಹಾರಿಗಳಿಗೆ ಮತ್ತು ಸುತ್ತಮುತ್ತಲ ಗ್ರಾಮಗಳ ಹತ್ತಾರು ಶಾಲೆಗಳ ಮಕ್ಕಳ ಹೊರಸಂಚಾರಕ್ಕೆ ಈ ಸಸ್ಯಕ್ಷೇತ್ರ ಅಚ್ಚುಮೆಚ್ಚಿನ ತಾಣವಾಗಿತ್ತು. ಅಷ್ಟೇ ಅಲ್ಲದೇ ರಾಜಕೀಯ ಸಭೆ ಸಮಾರಂಭಗಳಿಗೆ ಖಾಸಗಿ ಮತ್ತು ಸರ್ಕಾರಿ ಪ್ರಯೋಜಿತ ಬೃಹತ್ ಕಾರ್ಯಕ್ರಮಗಳಿಗೆ ಸೂಕ್ತ ಸ್ಥಳವಾಗಿತ್ತು. ಜಾತ್ರೆ, ಹಬ್ಬ ಹರಿದಿನಗಳಲ್ಲಿ ಸಾವಿರಾರು ಜನರು ಈ ಮರಗಳ ನೆರಳಿನ ಆಶ್ರಯ ಪಡೆಯುತ್ತಿದ್ದರು.

ಆದರೆ ಕಳೆದ ಒಂದು ವರ್ಷದಿಂದ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತವಾಗಿ ನಿರ್ವಹಣೆ ಮಾಡದೇ ಹಾಳುಗೆಡವಿ ಸಸ್ಯಕ್ಷೇತ್ರವನ್ನು ಮುಚ್ಚಿದ್ದಾರೆ. ಇದರಿಂದ ಹಲವು ವರ್ಷಗಳಿಂದ ಸಾವಿರಾರು ಜನರಿಗೆ ಅಚ್ಚುಮೆಚ್ಚಿನ ತಾಣವಾಗಿದ್ದ ತರಾಸು ಸಸ್ಯಕ್ಷೇತ್ರವು ತನ್ನ ಅಚ್ಚ ಹಸಿರಿನ ಗತವೈಭವದಿಂದ ದೂರ ಸರಿದಿದೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಸ್ಯಕ್ಷೇತ್ರವನ್ನು ಸೂಕ್ತ ರೀತಿಯಿಂದ ನಿರ್ವಹಿಸಿ, ಹಸಿರೀಕರಣಕ್ಕೆ ಮತ್ತೆ ಮುನ್ನುಡಿ ಬರೆಯಬೇಕು ಎಂದು ತಳಕು ಗ್ರಾಮಸ್ಥರಾದ ಬಿ.ಟಿ.ಪಾಲನಾಯಕ, ಶ್ರೀನಿವಾಸಮೂರ್ತಿ ಒತ್ತಾಯಿಸಿದ್ದಾರೆ. 

ತರಾಸು ಸಸ್ಯಕ್ಷೇತ್ರದ ದುಃಸ್ಥಿತಿ
ತರಾಸು ಸಸ್ಯಕ್ಷೇತ್ರದ ದುಃಸ್ಥಿತಿ
ಸಸ್ಯಕ್ಷೇತ್ರದಲ್ಲಿ ಜಲಮರುಪೂರಣಕ್ಕೆ ನಿರ್ಮಿಸಿದ್ದ ಕೃಷಿಹೊಂಡ ನೀರಿಲ್ಲದೆ ಬತ್ತಿದೆ
ಸಸ್ಯಕ್ಷೇತ್ರದಲ್ಲಿ ಜಲಮರುಪೂರಣಕ್ಕೆ ನಿರ್ಮಿಸಿದ್ದ ಕೃಷಿಹೊಂಡ ನೀರಿಲ್ಲದೆ ಬತ್ತಿದೆ
ಮಧುರನಾಥ್
ಮಧುರನಾಥ್
ಬಿ.ಟಿ.ಪಾಲನಾಯಕ
ಬಿ.ಟಿ.ಪಾಲನಾಯಕ
ಅಧಿಕಾರಿಗಳು ವಿವಿಧ ನೆಪವೊಡ್ಡಿ ತರಾಸು ಹೆಸರಿನ ಸಸ್ಯಕ್ಷೇತ್ರವನ್ನು ಕಡೆಗಣಿಸಿದ್ದಾರೆ.ಮರಗಳ್ಳರು ಗಿಡಮರಗಳನ್ನು ಕಡಿಯುವ ಕೆಲಸಕ್ಕೆ ಮುಂದಾಗಿದ್ದಾರೆ. ಅವನತಿಯತ್ತ ಸಾಗುತ್ತಿದೆ
ಮಧುರನಾಥ್ ತರಾಸು ಸಂಬಂಧಿ
ಸಸ್ಯಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಬೇರೆಡೆಗೆ ನಿಯೋಜಿಸಿದ್ದು ಕಾವಲುಗಾರರ ಎರಡು ವಸತಿಗೃಹ ಪಾಳುಬಿದ್ದಿವೆ. ಕಿಡಿಗೇಡಿಗಳು ಕಿಟಕಿ ಬಾಗಿಲು ಮುರಿದಿದ್ದು ಅಕ್ರಮ ಚಟುವಟಿಕೆಗಳ ತಾಣವಾಗಿದೆ
ಬಿ.ಟಿ.ಪಾಲನಾಯಕ. ತಳಕು ಗ್ರಾಮಸ್ಥ

ನೀರಿನ ಕೊರತೆ:  ತಳಕು ಸಸ್ಯಕ್ಷೇತ್ರಕ್ಕೆ ನೀರಿನ ಕೊರತೆಯಿದೆ. ನೀರಿಗಾಗಿ ಹಲವು ಕೊಳವೆ ಬಾವಿಗಳನ್ನು ಕೊರೆಯಸಿದರೂ ಪ್ರಯೋಜನವಾಗಿಲ್ಲ ಎಂದು ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಬಾಬು ತಿಳಿಸಿದ್ದಾರೆ.  ಸಸಿಗಳನ್ನು ಬೆಳೆಸಲು ಹಲವು ವರ್ಷಗಳಿಂದ ಟ್ಯಾಂಕರ್ ನೀರು ಬಳಸಲಾಗಿದೆ. ಬೇಸಿಗೆ ಬಂದರೆ ನೀರಿಗೆ ಹಾಹಾಕಾರ ಶುರುವಾಗುತ್ತದೆ. ತಾತ್ಕಾಲಿಕವಾಗಿ ಸಸ್ಯಕ್ಷೇತ್ರದ ನಿರ್ವಹಣೆಯಿಂದ ಹಿಂದೆ ಸರಿಯಲಾಗಿದೆ. ಮುಂದಿನ ದಿನಗಳಲ್ಲಿ ಸಸ್ಯಕ್ಷೇತ್ರವನ್ನು ಪುನಶ್ಚೇತನಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT