ನಾಯಕನಹಟ್ಟಿ: ಪಟ್ಟಣದಲ್ಲಿ ನಬಾರ್ಡ್ ಯೋಜನೆ ಅಡಿ ₹ 10 ಕೋಟಿ ವೆಚ್ಚದಲ್ಲಿ ಸಂತೆ ಮಳಿಗೆ ಮತ್ತು ಮಾರುಕಟ್ಟೆ ನಿರ್ಮಿಸಲಾಗುವುದು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ತಿಳಿಸಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ವಾಣಿಜ್ಯ ಮಳಿಗೆಗಳು ಮತ್ತು ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಅಗತ್ಯ ಸ್ಥಳವನ್ನು ಸದಸ್ಯರು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗಿದೆ ಎಂದು ಹೇಳಿದರು.
ಪಟ್ಟಣದಲ್ಲಿ ಸುಸಜ್ಜಿತ ಬಸ್ ನಿಲ್ದಾಣಕ್ಕೆ ವಿಶಾಲವಾದ ಪ್ರದೇಶದ ಅಗತ್ಯವಿದೆ. ಲೋಕೋಪಯೋಗಿ ಹಾಗೂ ವಿವಿಧ ಇಲಾಖೆಗಳ ಧಿಕಾರಿಗಳ ಜತೆ ಈ ಕುರಿತು ಚರ್ಚೆ ನಡೆಸಲಾಗುವುದು ಎಂದರು.
ಮೊಳಕಾಲ್ಮುರು ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ನಿಧಾನಗೊಂಡಿದೆ. ಹಾಲಿ ಗುತ್ತಿಗೆದಾರನಿಗೆ ನೀಡಿರುವ ಟೆಂಡರ್ ರದ್ದುಗೊಳಿಸಿ ಹೊಸ ಗುತ್ತಿಗೆದಾರನಿಗೆ ಟೆಂಡರ್ ನೀಡುವಂತೆ ನಿಗಮದ ವ್ಯವಸ್ಥಾಪಕ ಜೊತೆಗೆ ಚರ್ಚೆ ನಡೆಸಲಾಗಿದೆ. ಕೆರೆಗಳಿಗೆ ಪೈಪ್‌ಲೈನ್ ಅಳವಡಿಸಿದರೆ ಮುಂದೆ ಒಂದು ದಿನ ನೀರು ಹರಿಯುತ್ತದೆ ಎಂಬ ವಿಶ್ವಾಸ ಜನರಿಗೆ ಮೂಡುತ್ತದೆ ಎಂದು ಶಾಸಕರು ಹೇಳಿದರು.
ಪಟ್ಟಣ ಪಂಚಾಯಿತಿ ಚುನಾವಣೆ ನಡೆದು ಎರಡು ವರ್ಷವಾದರೂ ಇಲ್ಲಿಯವರೆಗೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೋಷಿಸಿಲ್ಲ. ಹೀಗಾಗಿ ಜನಪ್ರತಿನಿಧಿಗಳಿಲ್ಲದೆ ಆಡಳಿತ ಯಂತ್ರ ಕುಸಿದಿದೆ ಎಂದು ಸದಸ್ಯ ಸೈಯದ್ ಅನ್ವರ್ ಶಾಸಕರ ಗಮನಕ್ಕೆ ತಂದರು.
ಬೈಪಾಸ್ ರಸ್ತೆಯ ಬದಿಯಲ್ಲಿರುವ ಎರಡು ವಾರ್ಡ್‌ಗಳ ಮನೆಗಳು ಅನಧಿಕೃತ ಎಂದು ಘೋಷಿಸಲಾಗಿದೆ. ಇದರಿಂದ ನೂರಾರು ಜನರಿಗೆ ತೊಂದರೆಯಾಗಿದೆ. ಅಕ್ರಮ ಸಕ್ರಮ ಯೋಜನೆಯಡಿ ಜನರಿಗೆ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸದಸ್ಯ ತಿಪ್ಪೇಶ್, ಮುಖಂಡ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ, ಮುಖಂಡರಾದ ಎಸ್.ಉಮಾಪತಿ, ಬಾಲರಾಜ್, ಬಂಡೆಕಪಿಲೆ ಓಬಣ್ಣ, ಪಿಎಸ್‌ಐ ದೇವರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.