ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿಕಾ ವಿತರಕರು ಕಾಯಕ ಜೀವಿಗಳು

ಹೈಸ್ಕೂಲ್ ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ಜೀವಗಳೂ ಈ ಕಾಯಕದಲ್ಲಿ ತೊಡಗಿದ್ದಾರೆ
Last Updated 4 ಸೆಪ್ಟೆಂಬರ್ 2021, 3:22 IST
ಅಕ್ಷರ ಗಾತ್ರ

ಚಿತ್ರದುರ್ಗ: ಸೂರ್ಯನ ರಶ್ಮಿ ಭುವಿಗೆ ತಡವಾಗಿಯೇ ಬೀಳಲಿ. ಆದರೆ, ಬಹುತೇಕ ಓದುಗರು ಕಾಫಿ ಸೇವಿಸುವುದಕ್ಕೂ ಮುನ್ನವೇ ಅವರಿಗೆ ದಿನಪತ್ರಿಕೆ ತಲುಪಿಸಬೇಕು. ಇದು ಸುಲಭದ ಕೆಲಸ ಅಲ್ಲದಿದ್ದರೂ ಪತ್ರಿಕೆ ಮುಟ್ಟಿಸುವ ಗುಂಗಿನಲ್ಲೇ ಕಾಯಕದ ಮಹತ್ವ ಸಾರುವ ವರ್ಗವಿದೆ. ಬೀದಿ ನಾಯಿಗಳ ಹಾವಳಿಯ ಮಧ್ಯೆಯೇ ನಸುಕಿನಲ್ಲೇ ರಸ್ತೆಗೂ ಇಳಿಯುತ್ತಾರೆ.

ದಿನಪತ್ರಿಕೆ ತಲುಪಿಸಿದ ನಂತರವೇ ನೆಮ್ಮದಿ ಕಂಡುಕೊಳ್ಳುವ ಕಾಯಕ ಜೀವಿಗಳಿಗೆ ರಜೆ ಎಂಬುದೇ ಅಪರೂಪ. ಇವರ ಕಾಯಕ ಸೇವೆ ಗೌರವಿಸುವುದಕ್ಕಾಗಿಯೇ ಸೆ.4ರಂದು ‘ಪತ್ರಿಕಾ ವಿತರಕರ ದಿನ’ ಆಚರಿಸಲಾಗುತ್ತಿದೆ. ಕೋವಿಡ್ ಅವಧಿಯಲ್ಲಿ ಕೊರೊನಾ ಯೋಧರಂತೆ ಕಾರ್ಯನಿರ್ವಹಿಸಿದ ಇವರನ್ನು ದಿನಾಚರಣೆಯ ನೆಪದಲ್ಲಿ ಸ್ಮರಿಸುವ ಪ್ರಯತ್ನವಿದು.

ಮಧ್ಯರಾತ್ರಿ ಮುದ್ರಣಾಲಯದಿಂದ ವಾಹನವೇರಿ ಹೊರಟ ಪತ್ರಿಕೆಗಳು ನಗರ, ಪಟ್ಟಣ, ಹಳ್ಳಿಗಳನ್ನು ತಲುಪುತ್ತವೆ. ನಸುಕಿನ 3 ಗಂಟೆಯ ವೇಳೆಗೆ ಮುಚ್ಚಿರುವ ಅಂಗಡಿ ಮಳಿಗೆಗಳ ಎದುರಿನಲ್ಲೋ, ಬಸ್ ನಿಲ್ದಾಣದಲ್ಲೋ, ದೀಪದ ಬೆಳಕಿನ ಕೆಳಗೆ ಬಂಡಲ್‌ಗಳನ್ನು ಇಳಿಸಿಕೊಂಡು, ಬಿಚ್ಚಿದೊಡನೆ ಸರಿಯಾಗಿ ಜೋಡಿಸಿ­­ಕೊಂಡು, ಸೈಕಲ್‌, ದ್ವಿಚಕ್ರ ವಾಹನಗಳ ಮೂಲಕ ಮನೆ–ಮನೆಗೆ ತಲುಪಿಸುತ್ತಾರೆ.

‘ಚಿತ್ರದುರ್ಗದಲ್ಲಿ 50ಕ್ಕೂ ಹೆಚ್ಚು ಏಜೆಂಟರಿದ್ದೇವೆ. 150ಕ್ಕೂ ಹೆಚ್ಚು ವಿತರಕರಿದ್ದಾರೆ. ಹೈಸ್ಕೂಲ್ ವಿದ್ಯಾರ್ಥಿಗಳಿಂದ ಹಿರಿಯ ಜೀವಿಗಳೂ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ’ ಎನ್ನುತ್ತಾರೆ ಪತ್ರಿಕಾ ವಿತರಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ತಿಪ್ಪೇಸ್ವಾಮಿ.

ಮಳೆಗಾಲದಲ್ಲಿ ತೊಂದರೆ

‘ಮಳೆಗಾಲದಲ್ಲಿ ವಿತರಕರಿಗೆ ತುಂಬಾ ತೊಂದರೆ. ವಾಹನದಿಂದ ಪತ್ರಿಕೆ ಬಂಡಲ್‌ಗಳನ್ನು ಇಳಿಸಿಕೊಳ್ಳಲು ಹಾಗೂ ವಿತಕರಿಗೆ, ಪತ್ರಿಕೆ ಹಂಚುವ ಹುಡುಗರಿಗೆ ಪತ್ರಿಕೆಯನ್ನು ಮನೆಗಳಿಗೆ ತಲುಪಿಸಲು ಕಷ್ಟವಾಗುತ್ತದೆ. ಮಳೆ ನೀರು ಸ್ವಲ್ಪ ಬಿದ್ದರೂ ಪತ್ರಿಕೆ ಹಾಳಾಗುತ್ತದೆ. ಹೀಗಾಗಿ, ಗ್ರಾಹಕರು ಪತ್ರಿಕೆ ಪಡೆಯುವುದಿಲ್ಲ. ಆದ್ದರಿಂದ ನಿರ್ದಿಷ್ಟ ಜಾಗವನ್ನು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮೀಸಲಿಟ್ಟರೆ ಅನುಕೂಲ’ ಎಂಬುದು ಅವರ ಒತ್ತಾಯ.

‘ಯುಗಾದಿ, ಗಣೇಶ ಚತುರ್ಥಿ, ಆಯುಧ ಪೂಜೆ ಮತ್ತು ದೀಪಾವಳಿ ಹಬ್ಬಗಳಂದು ರಜೆಯ ಕಾರಣ ಮರುದಿನ ಪತ್ರಿಕೆ ಬರುವುದಿಲ್ಲ. ಅಂದು ಮಾತ್ರ ರಜೆ ಇರುತ್ತದೆ. ಉಳಿದಂತೆ ನಮ್ಮ ಮನೆಯಲ್ಲಿ ಯಾವ ಸಮಾರಂಭ ಇದ್ದರೂ ತಪ್ಪದೇ ಗ್ರಾಹಕರ ಮನೆ ಬಾಗಿಲಿಗೆ ಪತ್ರಿಕೆ ತಲುಪಿಸುತ್ತೇವೆ’ ಎನ್ನುತ್ತಾರೆ ಕರಿಬಸಪ್ಪ ಬಣಕಾರ್ (ಶಿವು). ಇದಕ್ಕೆ ದನಿಗೂಡಿಸುತ್ತಾರೆ ವಿತರಕರಾದ ಸುರೇಶ್, ತಿಪ್ಪೇಸ್ವಾಮಿ ಮತ್ತು ಪಿ. ನಾಗರಾಜ್ ಶೆಟ್ಟಿ.

ಯಾವ ಕಾರಣಕ್ಕಾಗಿ ದಿನಾಚರಣೆ

2002ರಲ್ಲಿ ಮೈಸೂರು ನಗರದಲ್ಲಿ ತಂಗರಾಜು ಎಂಬ ವಿತರಕ ಪತ್ರಿಕೆ ಹಂಚುವ ವೇಳೆ ವಾಹನವೊಂದು ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಪೊಲೀಸರಿಗೆ ದೂರು ಕೊಟ್ಟರೂ ನ್ಯಾಯ ಸಿಗಲಿಲ್ಲ. ಇದರಿಂದ ಎಚ್ಚೆತ್ತ ಮೈಸೂರು ನಗರ ಪತ್ರಿಕಾ ವಿತರಕರು ಸೇರಿ ಒಂದು ಸಂಘ ಸ್ಥಾಪಿಸಿದರು. ಪತ್ರಿಕಾ ವಿತರಕರ ಸಂಘಟನೆ ಮಾಡಿ, ರಕ್ತನಿಧಿ ಸ್ಥಾಪಿಸಿ, ಅಪಘಾತಕ್ಕೀಡಾದವರಿಗೆ ರಕ್ತದಾನ ಮಾಡಲು ಆರಂಭಿಸಿದರು. ಪ್ರತಿ ವರ್ಷ ಸೆಪ್ಟೆಂಬರ್ 4 ಅನ್ನು ಪತ್ರಿಕಾ ವಿತರಕರ ದಿನವನ್ನಾಗಿ ಆಚರಿಸತೊಡಗಿದರು.

....

ಕೋವಿಡ್ ಸಮಯದಲ್ಲೂ ಯಾವೊಬ್ಬ ಹುಡುಗನೂ ಅಂಜದೇ ಮನೆಗಳಿಗೆ ಪತ್ರಿಕೆ ತಲುಪಿಸಿದ್ದಾರೆ. ಕೆಲವೊಮ್ಮೆ ಪತ್ರಿಕೆ ವಿತರಿಸುವ ಹುಡುಗರು ರಜೆ ಹಾಕಿದಾಗ ತೊಂದರೆಯಾಗುತ್ತದೆ. ನಾವೇ ಅವರ ಕೆಲಸ ಮಾಡುತ್ತೇವೆ

-ನಾಗಣ್ಣ, ವಿತರಕ, ಹಿರಿಯೂರು

ನಿತ್ಯ ಮನೆ ಬಾಗಿಲಿಗೆ ದಿನಪತ್ರಿಕೆ ತಲುಪಿಸುವುದು ಸುಲಭದ ಕೆಲಸವಲ್ಲ. ಈ ವೇಳೆ ಹಲವು ಸಮಸ್ಯೆ ಎದುರಾಗುತ್ತವೆ. ಮಳೆ ಸುರಿಯುತ್ತಿರಲಿ, ಎಷ್ಟೇ ಚಳಿ ಇರಲಿ, ಅನಾರೋಗ್ಯದಿಂದ ನರಳುತ್ತಿರಲಿ ಯಾವುದಕ್ಕೂ ಜಗ್ಗದೇ ಮುಟ್ಟಿಸುತ್ತೇವೆ.

-ರಂಗನಾಥ್, ವಿತರಕ, ಚಳ್ಳಕೆರೆ

ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲೂ ಪತ್ರಿಕೆ ಹಂಚುವ ಕೆಲಸ ತಪ್ಪದೇ ಮಾಡಿದ್ದೇವೆ. ಈ ವರ್ಗವನ್ನು ಗಮನದಲ್ಲಿಟ್ಟುಕೊಂಡು ಲಸಿಕೆ ಹಾಕಲು ಸರ್ಕಾರ ಮುಂದಾಗಲಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳ ಬಳಿ ಮಾತನಾಡಿ ಕೊನೆಗೂ ಕೋವಿಡ್ ಲಸಿಕೆ ಹಾಕಿಸಬೇಕಾಯಿತು.

-ಚಂದ್ರಶೇಖರ್, ವಿತರಕ, ಹೊಸದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT