ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡು ಹೂ ಕೃಷಿಯಿಂದ ಚೆಂದದ ಬದುಕು

ಹೊಸದುರ್ಗ ತಾಲ್ಲೂಕಿನ ಮಾವಿನಕಟ್ಟೆಯ ರೈತ ಅಣ್ಣಪ್ಪ ಸಾಧನೆ
Last Updated 28 ಸೆಪ್ಟೆಂಬರ್ 2022, 4:37 IST
ಅಕ್ಷರ ಗಾತ್ರ

ಹೊಸದುರ್ಗ: ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಮತ್ತು ಸೂಕ್ತ ಬೆಲೆ ಸಿಗುವ ಚಂಡು ಹೂ ಕೃಷಿ ನೆಚ್ಚಿಕೊಳ್ಳುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ ತಾಲ್ಲೂಕಿನ ಮಾವಿನಕಟ್ಟೆ ಗ್ರಾಮದ ರೈತ ಅಣ್ಣಪ್ಪ.

ತರಕಾರಿ ವ್ಯಾಪಾರ ಮಾಡುತ್ತಿದ್ದ ಅಣ್ಣಪ್ಪ ಅವರು ಸ್ನೇಹಿತರ ಸಲಹೆ ಮೇರೆಗೆ ತಮ್ಮ 2 ಎಕರೆ ಭೂಮಿಯಲ್ಲಿ ಚಂಡು ಹೂ ಬೆಳೆಯಲು ಆರಂಭಿಸಿದರು. ಗಣೇಶ ಚತುರ್ಥಿ, ದಸರಾ, ದೀಪಾವಳಿ, ಕಾರ್ತಿಕೋತ್ಸವದ ಸಂದರ್ಭ ಚಂಡು ಹೂವಿಗೆ ಹೆಚ್ಚಿಕ ಬೇಡಿಕೆ ಇರುವುದರಿಂದ ಚಂಡು ಕೃಷಿಯನ್ನೇ ತಮ್ಮ ಕುಟುಂಬದ ಆದಾಯ ಮೂಲವಾಗಿಸಿಕೊಂಡಿದ್ದಾರೆ.

‘ತರಕಾರಿ ಬೆಳೆಯಲು ಹೆಚ್ಚಿನ ಸಂಖ್ಯೆಯ ಕೂಲಿ ಕಾರ್ಮಿಕರು ಬೇಕಾಗುತ್ತಾರೆ. ಆದರೆ, ಚಂಡು ಹೂ ಕೃಷಿಗೆ ಮನೆಯ ಸದಸ್ಯರೇ ಸಾಕು. ಅಂತೆಯೇ ಚಂಡು ಹೂ ಬೆಳೆಯುವುದನ್ನು ಆರಂಭಿಸಿದೆ. ನಾಲ್ಕರಿಂದ ಐದು ತಿಂಗಳ ಬೆಳೆಯಾದರೂ ಆದಾಯಕ್ಕೆ ಮೋಸವಿಲ್ಲ’ ಎನ್ನುತ್ತಾರೆ ರೈತ ಅಣ್ಣಪ್ಪ.

‘ಆಗಸ್ಟ್‌ ಆರಂಭದಲ್ಲಿ ಭೂಮಿ ಹಸನುಗೊಳಿಸಿ, ಕೊಟ್ಟಿಗೆ ಗೊಬ್ಬರ ಹಾಕಿ, ಡ್ರಿಪ್‌ ಮಾಡಿ, ಚಂಡು ಹೂ ಸಸಿ ನಾಟಿಗೆ ಭೂಮಿಯನ್ನು ಸಿದ್ಧಗೊಳಿಸುತ್ತೇವೆ. ಈ ಬಾರಿ ಎನ್.ಜಿ. ಹಳ್ಳಿ ನರ್ಸರಿಯಿಂದ ತಲಾ ಒಂದು ಸಸಿಯನ್ನು ₹ 3ರಂತೆ ಒಟ್ಟು 8,000 ಸಸಿಗಳನ್ನು ತರಿಸಿ 2 ಅಡಿಗೆ ಒಂದರಂತೆ ನಾಟಿ ಮಾಡಿದ್ದೆವು. ವಾರಕ್ಕೊಮ್ಮೆ ನೀರು, ಗೊಬ್ಬರ, ಔಷಧ ಹಾಕಿದ್ದೆವು. 45 ದಿನಗಳಿಗೆ ಬೆಳೆ ಬರುತ್ತದೆ. ಇದುವರೆಗೆ 4 ಟನ್‌ ಚಂಡು ಹೂ ಬೆಳೆ ಬಂದಿದ್ದು, ಗಣೇಶ ಹಬ್ಬದ ಸಂದರ್ಭದಲ್ಲಿ ಉತ್ತಮ ಬೆಲೆ ಸಿಕ್ಕಿತು’ ಎಂದು ಮಾಹಿತಿ ನೀಡುತ್ತಾರೆ ಅವರು.

‘ಕಡಿಮೆ ಸಮಯ, ಕಡಿಮೆ ಖರ್ಚಿನಲ್ಲಿ ಉತ್ತಮ ಲಾಭಗಳಿಸಲು ಚಂಡು ಹೂ ಕೃಷಿ ಸಹಕಾರಿ. ಮನೆಯವರ ಸಹಕಾರವಿದ್ದರೆ ಸಾಕು. ಒಂದು ಎಕರೆಯಲ್ಲಿ ಹಳದಿ, ಮತ್ತೊಂದು ಎಕರೆಯಲ್ಲಿ ಕೇಸರಿ ಬಣ್ಣದ ಚಂಡು ಹೂ ಬೆಳೆದಿದ್ದು, ಹೂವಿನ ಅಂಗಡಿಯವರಿಗೆ ಕೆ.ಜಿ.ಗೆ ₹ 50ರಿಂದ ₹ 60ರಂತೆ ನೀಡುತ್ತೇವೆ. ಹಬ್ಬದ ಸಮಯದಲ್ಲಿ ಕೆ.ಜಿ.ಗೆ ₹ 100ರಿಂದ ₹ 120ರವರೆಗೂ ದರ ಇರುತ್ತದೆ. ಹೆಚ್ಚು ಹೂ ಬಂದರೆ ಚಿತ್ರದುರ್ಗ ಮಾರುಕಟ್ಟೆಗೂ ಕೊಂಡೊಯ್ಯಲಾಗುತ್ತದೆ. ಮಾರುಕಟ್ಟೆಯಲ್ಲಿ ಹೂ ಕಡಿಮೆಯಿದ್ದರೆ ಉತ್ತಮ ದರ ಇರುತ್ತದೆ’ ಎಂದು ಅವರು ಹೇಳುತ್ತಾರೆ.

‘ನವೆಂಬರ್‌ವರೆಗೂ ಹೂ ಬರುವುದರಿಂದ ಇನ್ನೂ 6 ಟನ್‌ ಹೂವಿನ ಉತ್ಪಾದನೆಯಾಗಲಿದೆ. ಕಳೆದ ಬಾರಿ ಚಳ್ಳಕೆರೆಯವರು ಜಮೀನಿಗೇ ಬಂದು 125 ಕೆ.ಜಿ. ಹೂ ಖರೀದಿಸಿದ್ದರು. ಈ ಬಾರಿ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ನಗರದಿಂದ ಬೇಡಿಕೆ ಇದ್ದು, ಜಮೀನಿಗೇ ಬಂದು ಕೊಂಡು ಹೋಗುವುದಾಗಿ ತಿಳಿಸಿದ್ದಾರೆ. ಚಂಡು ಹೂವಿನ ಸೀಸನ್‌ ಮುಗಿದ ನಂತರ ಜಮೀನನ್ನು ಹಾಗೇ ಬೀಳು ಬಿಡದೆ ಅಗತ್ಯ ನೋಡಿಕೊಂಡು ತರಕಾರಿ ಕೃಷಿ ಮಾಡುತ್ತೇನೆ’ ಎನ್ನುತ್ತಾರೆ ಅಣ್ಣಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT