ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ವಾಸ್ತವ್ಯ ನೆಪದಲ್ಲಿ ನೇರ್ಲಹಳ್ಳಿ ಸ್ವಚ್ಛ

ಶಿಥಿಲಗೊಂಡ ಕಟ್ಟಡಗಳು; ಶುದ್ಧ ಕುಡಿಯುವ ನೀರಿನ ಘಟಕ ಕಾಣದ ಗ್ರಾಮ
ಅಕ್ಷರ ಗಾತ್ರ

ಮೊಳಕಾಲ್ಮುರು:ಸ್ವಚ್ಛಗೊಂಡ ರಸ್ತೆ, ಚರಂಡಿಗಳು, ಸಾಮಾನ್ಯ ದಿನಗಳಲ್ಲಿ ಇತ್ತ ತಲೆಯೂ ಹಾಕದ ಅಧಿಕಾರಿಗಳಿಂದ ಗ್ರಾಮ ಭೇಟಿ, ಗ್ರಾಮಸ್ಥರಿಂದ ಅಹವಾಲು ಸಲ್ಲಿಸಲುಮನವಿ.

ಇದು ತಾಲ್ಲೂಕಿನ ಹಿಂದುಳಿದ ಗ್ರಾಮಗಳಲ್ಲಿ ಒಂದಾದ ನೇರ್ಲಹಳ್ಳಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ ಮಾಡಲಿರುವ ಕಾರಣ ಕಂಡುಬಂದ ಚಿತ್ರಣ.

ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳವಾಗಿರುವ ನೇರ್ಲಹಳ್ಳಿ ವ್ಯಾಪ್ತಿಯಲ್ಲಿ ಮರ್ಲಹಳ್ಳಿ, ಗುಂಡ್ಲೂರು, ಓಬಯ್ಯನಹಟ್ಟಿ, ಪಿಚಾರಹಟ್ಟಿ, ಸುಂಕದ ಹಟ್ಟಿ, ಜಂಗಲಿ ಸೂರಯ್ಯನಹಟ್ಟಿ, ಕೂಡ್ಲಿಗರಹಟ್ಟಿ ಗ್ರಾಮಗಳು ಒಳಪಟ್ಟಿವೆ. 1,500 ಮನೆಗಳಿದ್ದು, 5,620 ಜನಸಂಖ್ಯೆ ಹೊಂದಿದೆ. ಪರಿಶಿಷ್ಟ, ಜಾತಿ, ಪಂಗಡ ಜನರು ಶೇ 80ರಷ್ಟು ವಾಸವಿದ್ದು, ದಿನಗೂಲಿ, ಕೃಷಿ ಕೆಲಸವನ್ನು ನೆಚ್ಚಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ವಾಸ್ತವ್ಯದ ಕಾರಣ ಗುರುವಾರ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಗಳ ಕಂಡುಬಂದವು.

‘ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲದ ಕಾರಣ ನಲ್ಲಿ ನೀರನ್ನು ಕುಡಿಯಬೇಕಾಗಿದೆ. ಮಣ್ಣು ಮಿಶ್ರಿತ ನೀರನ್ನು ಸರಬರಾಜು ಮಾಡಲಾಗುತ್ತಿದ್ದು,ಇದನ್ನು ಎರಡುಬಾರಿ ಸೋಸಿಕೊಂಡು ಕಾಯಿಸಿಕೊಂಡು ಕುಡಿಯಲಾಗುತ್ತಿದೆ. ಹಿಂದೆ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿದ್ದು, ಸ್ಥಳದವಿವಾದದಿಂದಾಗಿ ಕಾರ್ಯರೂಪಕ್ಕೆ ಬರಲಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ದೂರಿದರು.

‘ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ, ಇತ್ತೀಚೆಗೆ ಹಲವು ಚರಂಡಿಗಳನ್ನುನಿರ್ಮಿಸಲಾಗಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಮಾಡದ ಪರಿಣಾಮ ಹಲವುರಸ್ತೆಗಳಲ್ಲಿ ರಸ್ತೆ ಮೇಲೆ ತ್ಯಾಜ್ಯ ನೀರು ಹರಿಯುತ್ತಿದೆ. ಗ್ರಾಮ ಪಂಚಾಯಿತಿ ಮುಂಭಾಗದ ರಸ್ತೆಯಲ್ಲಿಯೇ ಈ ಅವ್ಯವಸ್ಥೆ ಇದೆ. ‌ಜಿಲ್ಲಾಧಿಕಾರಿ ವಾಸ್ತವ್ಯದಿಂದ ಚರಂಡಿಗಳಿಗೆ ಡಿಡಿಟಿ ಪುಡಿ ಸಿಂಪಡಿಸಲಾಗಿದೆ. ಇಲ್ಲವಾದಲ್ಲಿ ಒಂದು ತಿಂಗಳಿಗೆ ಒಮ್ಮೆಯೂ ಹಾಕುವುದಿಲ್ಲ’ ಎಂದು ಗ್ರಾಮಸ್ಥ ಶಾಂತಕುಮಾರ್ ದೂರಿದರು.

ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟ ಪುಸ್ತಕಗಳು ಲಭ್ಯವಿಲ್ಲ. ಇದರಿಂದ ಪದವೀಧರ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಗ್ರಂಥಾಲಯ ಕಟ್ಟಡ ಶಿಥಿಲವಾಗಿದ್ದು, ಗ್ರಾಮ ಪಂಚಾಯಿತಿ ಆವರಣದಲ್ಲಿ ಇದ್ದರೂ ದುರಸ್ತಿ ಮಾಡಿಸಿಲ್ಲ ಎಂದು ಅವರು ದೂರಿದರು.

ಗ್ರಾಮ ಪಂಚಾಯಿತಿಗೆ ಹೊಂದಿಕೊಂಡಿರುವ ಅಂಗನವಾಡಿ ಕೇಂದ್ರ ‘ಎ’ ಚಾವಣಿ ಶಿಥಿಲವಾಗಿದ್ದು, ಗೋಡೆ ಬಿರುಕು ಬಿಟ್ಟಿದೆ. ಮಳೆ ಬಂದಲ್ಲಿ ನೀರುಒಳಗೆ ಬರುತ್ತದೆ. ನೀರು ಹೊರಹಾಕುವುದು ದೊಡ್ಡ ಕೆಲಸವಾಗಿದೆ. ಮಕ್ಕಳು ಭಯದಲ್ಲಿ ಕೇಂದ್ರಕ್ಕೆ ಬರುವಂತಾಗಿದ್ದು, ದುರಸ್ತಿ ಮಾಡುವಂತೆ ಹಲವು ಬಾರಿಮನವಿ ಮಾಡಿದರೂ ಯಾರೂ ಕ್ರಮ ಕೈಗೊಂಡಿಲ್ಲ. ಗ್ರಾಮ ಲೆಕ್ಕಾಧಿಕಾರಿ ಕಚೇರಿ ಶಿಥಿಲಗೊಂಡಿದೆ’ ಎಂದು ಸಿಪಿಐಕಾರ್ಯದರ್ಶಿ ಜಾಫರ್ ಷರೀಫ್ ದೂರಿದರು.

ಡಿಸಿಗಾಗಿ ಎಸಿ ಅಳವಡಿಕೆ..!

ಜಿಲ್ಲಾಧಿಕಾರಿ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ಶುಕ್ರವಾರ ರಾತ್ರಿ ವಾಸ್ತವ್ಯ ಹೂಡಲಿದ್ದು, ಇದಕ್ಕೆ ಪೂರಕವಾಗಿ ಗ್ರಾಮ ಪಂಚಾಯಿತಿ ಗುರುವಾರ ತರಾತುರಿಯಲ್ಲಿಹೊಸ ಹವಾನಿಯಂತ್ರಕ ಯಂತ್ರವನ್ನು ಅಳವಡಿಸಿದೆ. ಒಂದು ದಿನದ ವಾಸ್ತವ್ಯಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಕಚೇರಿಗೆಸುಣ್ಣ, ಬಣ್ಣ, ‌ನಾಮ‍ಫಲಕ ಅಳವಡಿಸಲಾಗಿದೆ. ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಕೇಳಿದರೆ ಪಂಚಾಯಿತಿಯವರು ಹಣವಿಲ್ಲ ಎನ್ನುತ್ತಾರೆ ಎಂದು ಗ್ರಾಮಸ್ಥರು ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದಪಿಡಿಒ ಮಲ್ಲಿಕಾರ್ಜುನ್, ‘ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿಮೊದಲೇ ಎಸಿ ಇತ್ತು’ ಎಂದರು.

ಗ್ರಾಮ ಪಂಚಾಯಿತಿ 8 ವರ್ಷಗಳಿಂದ ಪರಿಶಿಷ್ಟ ಜಾತಿ,ಪಂಗಡದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಕೊಳ್ಳಲು ನೀಡುತ್ತಿದ್ದ ಪ್ರೋತ್ಸಾಹಧನವನ್ನು ಸ್ಥಗಿತಗೊಳಿಸಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಲಿ.

-ಶಾಂತಕುಮಾರ್, ಗ್ರಾಮಸ್ಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT