ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಂಎಂಎಸ್, ಎನ್‌ಟಿಎಸ್‌ಸಿ ತರಬೇತಿಗೆ ಸಜ್ಜು

ಅ. 20 ರವರೆಗೂ ತಾಲ್ಲೂಕಿನ 200 ಮಕ್ಕಳಿಗೆ ತರಬೇತಿ, 12 ದಿನವೂ 6 ಮಂದಿ ಸಂಪನ್ಮೂಲ ವ್ಯಕ್ತಿಗಳಿಂದ ಬೋಧನೆ, ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗುವ ಕುರಿತು ಮಾಹಿತಿ
Last Updated 9 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲಾ ಕೇಂದ್ರದಲ್ಲಿ ನವೆಂಬರ್ 4 ರಂದು ನಡೆಯಲಿರುವ ಎನ್‌ಎಂಎಂಎಸ್ ಹಾಗೂ ಎನ್‌ಟಿಎಸ್‌ಸಿಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ತರಬೇತಿ ಪ್ರಾರಂಭವಾಗಿದ್ದು, 12 ದಿನಗಳವರೆಗೆ ನಡೆಯಲಿದೆ.

ತಾಲ್ಲೂಕಿನ ಸರ್ಕಾರಿ ಮತ್ತು ಅನುದಾನಿತ ಶಾಲೆಯ ಎಂಟನೇ ತರಗತಿಯ ಸುಮಾರು 200 ಮಕ್ಕಳಿಗೆ ವಾಸವಿ ವಿದ್ಯಾಸಂಸ್ಥೆಯಲ್ಲಿ ಅ. 20 ರವರೆಗೂ ಆರು ಮಂದಿ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲು ಮುಂದಾಗಿದ್ದಾರೆ.

ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಹಾಗೂ ನಿರಂತರ ಆರ್ಥಿಕ ನೆರವು (ವಿದ್ಯಾರ್ಥಿ ವೇತನ) ನೀಡುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಎನ್‌ಎಂಎಂಎಸ್‌ (ನ್ಯಾಷನಲ್ ಮೀನ್ಸ್-ಕಮ್-ಮೆರಿಟ್ ಸ್ಕಾಲರ್‌ಶಿಪ್) ಹಾಗೂ ಎನ್‌ಟಿಎಸ್‌ಸಿ (ರಾಷ್ಟ್ರೀಯ ಪ್ರತಿಭಾ­ನ್ವೇಷಣ ಪರೀಕ್ಷೆ) ವಿಶೇಷ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಪ್ರೌಢಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಅಭ್ಯಾಸಕ್ಕೆ ತುಂಬಾ ಉಪಯುಕ್ತವಾಗಲಿದೆ.

‘ಸಾರ್ವಜನಿಕ ಶಿಕ್ಷಣ ಇಲಾಖೆ, ರೋಟರಿ ಕ್ಲಬ್, ವಾಸವಿ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ತರಬೇತಿ ನೀಡಲಾಗುತ್ತಿದೆ.ಭವಿಷ್ಯದಲ್ಲಿ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ಇವೆರಡು ಪರೀಕ್ಷೆಗಳು ಭದ್ರ ಬುನಾದಿ ಹಾಕಲಿವೆ. ಆದ್ದರಿಂದ ಶಿಕ್ಷಕರು,ಪೋಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಇಂತಹ ಪರೀಕ್ಷೆಗಳ ಕುರಿತು ಮಕ್ಕಳಿಗೆ ವಿಶೇಷ ತರಬೇತಿ ನೀಡುವ ಅಗತ್ಯವಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ತಿಳಿಸಿದ್ದಾರೆ.

‘ನವೆಂಬರ್ 4 ರಂದು ಚಿತ್ರದುರ್ಗದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಸಂತ ಜೋಸೆಫರ ಕಾನ್ವೆಂಟ್ ಶಾಲೆ, ವಾಸವಿ ವಿದ್ಯಾಸಂಸ್ಥೆ, ವಿದ್ಯಾವಿಕಾಸ ವಿದ್ಯಾಸಂಸ್ಥೆ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಪಾರ್ಶನಾಥ ವಿದ್ಯಾಸಂಸ್ಥೆ ಸೇರಿ ಒಟ್ಟು ಆರು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಬಾರಿ ಜಿಲ್ಲೆಯಲ್ಲಿ ಎನ್‌ಎಂಎಂಎಸ್‌ಗೆ 1,300 ಹಾಗೂ ಎನ್‌ಟಿಎಸ್‌ಸಿಗೆ 1,200 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ‘ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಇದು ರಾಜ್ಯ, ರಾಷ್ಟ್ರೀಯ ಮಟ್ಟದ ಪರೀಕ್ಷೆಯಾಗಿದೆ. ಗಣಿತ ವಿಭಾಗದಲ್ಲಿ ಸಂಖ್ಯಾ ಶ್ರೇಣಿ ಆಧಾರಿತ ಪ್ರಶ್ನೆಗಳೇ ಹೆಚ್ಚಾಗಿರುತ್ತವೆ. ಸೂಕ್ಷ್ಮವಾಗಿ ಪ್ರಶ್ನೆ ಅರ್ಥ ಮಾಡಿಕೊಂಡರೆ ಸುಲಭವಾಗಿ ಉತ್ತರಿಸಬಹುದು’ ಎಂದು ಸಂಪನ್ಮೂಲ ವ್ಯಕ್ತಿ ಹರೀಶ್ ತಿಳಿಸಿದರು.

‘ವಿಜ್ಞಾನ, ಗಣಿತ ವಿಷಯದಲ್ಲಿ ವಿದ್ಯಾರ್ಥಿಗಳು ನೈಪುಣ್ಯತೆ ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ಕೆಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ವಿಷಯಗಳ ಪ್ರಶ್ನೆಗಳು ಹೆಚ್ಚಿರುತ್ತವೆ. ಕೌಶಲ ಇದ್ದರೆ ಎಂತಹ ಪರೀಕ್ಷೆಗಳಾಗಲಿ ಹಾಲು ಕುಡಿದಷ್ಟು ಸುಲಭವಾಗಿದ್ದು, ಅಧಿಕ ಅಂಕಗಳಿಸಬಹುದು. ಅಲ್ಲದೆ, ಶೈಕ್ಷಣಿಕ ಅವಧಿಯಲ್ಲಿ ನಿರಂತರ ಅಭ್ಯಾಸದೊಂದಿಗೆ ಹೆಚ್ಚು ಶ್ರಮವಹಿಸಿದರೆಸಾಧನೆಗೂ ಮೆಟ್ಟಿಲಾಗಲಿದೆ’ ಎಂದು ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಾದ ಆರ್‌.ಜಿ. ನಟೇಶ್‌ಕುಮಾರ್, ಸಿದ್ದರಾಮೇಶ್ವರ, ಉಮೇಶ್ ಸಲಹೆ ನೀಡಿದರು.

‘ಪರೀಕ್ಷೆಗಳಲ್ಲಿ ಸರ್ಕಾರ ನಿಗದಿಪಡಿಸಿದ ಅಂಕಗಳಿಸಿ ಉತ್ತೀರ್ಣರಾಗ­ಬೇಕು. ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸ ಮೊಟಕುಗೊಳಿಸುವಂತಿಲ್ಲ, ಅನುತ್ತೀರ್ಣರಾಗುವಂತಿಲ್ಲ. ಜತೆಗೆ ಕೆಲ ನಿಬಂಧನೆಗಳು ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗುವ ವಿದ್ಯಾರ್ಥಿ­ಗಳಿಗೆ ಅನ್ವಯಿಸುತ್ತವೆ. ಸರ್ಕಾರದ ನಿಬಂಧನೆಗಳಿಗೆ ಒಳಪಟ್ಟು ಆಯ್ಕೆಯಾಗುವ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗಳಿಗೆ ಸರ್ಕಾರ ಹಣವನ್ನು ನೇರವಾಗಿ ಜಮೆ ಮಾಡುತ್ತದೆ’ ಎಂದು ಸಂಪನ್ಮೂಲ ವ್ಯಕ್ತಿ ಮಹೇಶ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT