ಹಿರಿಯೂರು: ತಾಲ್ಲೂಕಿನ ಯಲ್ಲದಕೆರೆ ಗ್ರಾಮದ ಹತ್ತಾರು ಹಳ್ಳಿಗಳಿಗೆ ಬಸ್ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ಶಾಲೆ–ಕಾಲೇಜಿಗೆ ತೆರಳಲು ನಿತ್ಯವೂ ಪ್ರಯಾಸ ಪಡಬೇಕಾಗಿದೆ.
ಯಲ್ಲದಕೆರೆ ಗ್ರಾಮದಲ್ಲಿ ಪ್ರೌಢಶಾಲೆ ಮತ್ತು ಪಿಯು ಕಾಲೇಜು ಇದ್ದು ಸಮೀಪದ ಕೆ.ಕೆ. ಹಟ್ಟಿ, ಹೊಸಹಳ್ಳಿ, ಶೇಷಪ್ಪನಹಳ್ಳಿ, ಚಿಗಳಿಕಟ್ಟೆ, ಹಂದಿಗನಡು, ಬಡಗೊಲ್ಲರಹಟ್ಟಿ, ಬ್ಯಾರಮಡು, ಮಾದೇನಹಳ್ಳಿ ಗ್ರಾಮಗಳ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಬರಬೇಕಿದೆ. ಪದವಿ ವಿದ್ಯಾಭ್ಯಾಸ ಮಾಡುವವರು ಯಲ್ಲದಕೆರೆಗೆ ಬಂದು ಬಸ್ ಹಿಡಿದು ಹಿರಿಯೂರು–ಚಿತ್ರದುರ್ಗ ನಗರಗಳಿಗೆ ತೆರಳಬೇಕಿದೆ. ಸಮಯಕ್ಕೆ ಸರಿಯಾಗಿ ಬಸ್ಸುಗಳು ಬಾರದ ಕಾರಣ ಪಾಠ- ಪ್ರವಚನದಿಂದ ವಂಚಿತರಾಗುವಂತಾಗಿದೆ.
ಬಹುತೇಕ ಪದವಿ ಕಾಲೇಜುಗಳು ಬೆಳಿಗ್ಗೆ 10ಕ್ಕೆ ಆರಂಭವಾಗುತ್ತವೆ. ಯಲ್ಲದಕೆರೆ ಭಾಗದಿಂದ ಕನಿಷ್ಠ 125–150 ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಹಿರಿಯೂರು–ಚಿತ್ರದುರ್ಗ ನಗರಗಳಿಗೆ ತೆರಳುತ್ತಾರೆ. ಕೆಲ ತಿಂಗಳವರೆಗೆ ಬೆಳಿಗ್ಗೆ 9.15ಕ್ಕೆ ಯಡಿಯೂರು–ಗದಗ, 9.30ಕ್ಕೆ ಮೈಸೂರು–ಮುಂಡರಗಿ ಬಸ್ಸುಗಳು ಬರುತ್ತಿದ್ದವು. ಈಚೆಗೆ ಆ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.
ಆಟೊ ಇಲ್ಲವೇ ಲಾರಿ ಹಿಡಿದು ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ನಿತ್ಯವೂ ಗೋಳಾಡಿಕೊಂಡೇ ಶಾಲೆ–ಕಾಲೇಜಿಗೆ ತೆರಳಬೇಕಿರುವುದರಿಂದ ಮನಸ್ಸಿಟ್ಟು ಪಾಠ ಕೇಳಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿನಿಯರ ಸುರಕ್ಷತೆ ಪ್ರಶ್ನೆ ಎದುರಾಗಿದ್ದು, ಸಂಬಂಧಿಸಿದ ಜನಪ್ರತಿನಿಧಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೆ.ಕೆ. ಹಟ್ಟಿಯ ಜಯಪ್ರಕಾಶ್ ಆಗ್ರಹಿಸಿದರು.
ಬೆಳಿಗ್ಗೆ 8.30ಕ್ಕೆ ಯಲ್ಲದಕೆರೆ ಭಾಗದ ಹಳ್ಳಿಗಳಿಗೆ ದಸೂಡಿ ಗ್ರಾಮದ ಮೂಲಕ ಒಂದು ಬಸ್ಸು, 8.45ಕ್ಕೆ ಹುಳಿಯಾರು ಮಾರ್ಗದಲ್ಲಿ ಮತ್ತೊಂದು ಬಸ್ಸು ಬಿಡಬೇಕು. ಸಂಜೆ 4.30ರ ವೇಳೆಗೆ ಹಿರಿಯೂರಿನಿಂದ ಇವೇ ಮಾರ್ಗದಲ್ಲಿ ಬಸ್ ವ್ಯವಸ್ಥೆ ಮಾಡಬೇಕು ಎಂದು ವರು ಒತ್ತಾಯಿಸಿದರು.
‘ಹಿರಿಯೂರಿನ ಹುಳಿಯಾರು ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೊ ಕಾಮಗಾರಿ ಪೂರ್ಣಗೊಂಡಿದ್ದು ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಉದ್ಘಾಟಿಸಬೇಕು. ಡಿಪೊ ಆರಂಭವಾದಲ್ಲಿ ಗ್ರಾಮೀಣ ಭಾಗಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ. ಬಸ್ಸಿಗಾಗಿ ನಾವು ನಿತ್ಯ ಅನುಭವಿಸುತ್ತಿರುವ ನರಕ ಯಾತನೆಯಿಂದ ಬಿಡುಗಡೆ ದೊರೆಯುತ್ತದೆ’ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.