ಭಾನುವಾರ, ಜೂನ್ 13, 2021
25 °C

ಚಿತ್ರದುರ್ಗ ಜಿಲ್ಲೆ ಕೈತಪ್ಪಿದ ಆಮ್ಲಜನಕ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸುವ ಜಿಲ್ಲಾಡಳಿತದ ಉತ್ಸಾಹ ಕೈಗೂಡುವಂತೆ ಕಾಣುತ್ತಿಲ್ಲ. ಕೇಂದ್ರ ಇಂಧನ ಸಚಿವಾಲಯ ರಾಜ್ಯದ 28 ಜಿಲ್ಲೆಗಳಿಗೆ ಆಮ್ಲಜನಕ ಘಟಕ ಮಂಜೂರು ಮಾಡಿದ್ದು, ಚಿತ್ರದುರ್ಗಕ್ಕೆ ಈ ಅವಕಾಶ ಕೈತಪ್ಪಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಆಮ್ಲಜನಕದ ಅಗತ್ಯವೂ ಹೆಚ್ಚಾಗುತ್ತಿದೆ. ದಿನವೊಂದಕ್ಕೆ ಜಿಲ್ಲೆಗೆ ಏಳು ಸಾವಿರ ಲೀಟರ್‌ ಆಮ್ಲಜನಕದ ಅಗತ್ಯವಿದೆ. ದಾವಣಗೆರೆ, ಹರಿಹರ, ಹೊಸಪೇಟೆ ಹಾಗೂ ಭದ್ರಾವತಿ ತಾಲ್ಲೂಕು ಸೇರಿ ಆರು ಸಾವಿರ ಲೀಟರ್‌ ಮಾತ್ರ ಪೂರೈಕೆ ಆಗುತ್ತಿದೆ. ಇದರಿಂದ ಕೋವಿಡ್‌ ಪೀಡಿತರಿಗೆ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿದೆ.

ಕೋವಿಡ್‌ ಎರಡನೇ ಅಲೆ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿ ಒಂದೂವರೆ ತಿಂಗಳು ಕಳೆದಿದೆ. ಕೋವಿಡ್‌ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಹಾಸಿಗೆಗಳನ್ನು ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಆಮ್ಲಜನಕ ಸರಬರಾಜು ಆಗದ ಕಾರಣ ಹಾಸಿಗೆ ಹೆಚ್ಚಿಸಲು ಆಗುತ್ತಿಲ್ಲ. ಹೀಗಾಗಿ, ಆಮ್ಲಜನಕ ಉತ್ಪಾದನಾ ಘಟಕವನ್ನು ಸ್ಥಾಪಿಸುವುದೇ ಪರಿಹಾರ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಸಂಸದ ಎ.ನಾರಾಯಣಸ್ವಾಮಿ ಹಾಗೂ ಆರು ಶಾಸಕರು ಪ್ರತಿಪಾದಿಸಿದ್ದರು.

ಜಿಲ್ಲೆಯಲ್ಲಿ ಸೋಂಕು ಹರಡುವ ಪ್ರಮಾಣ ರಾಜ್ಯದಲ್ಲಿ ಅತ್ಯಂತ ಕಡಿಮೆ ಎಂಬುದು ಆರೋಗ್ಯ ಇಲಾಖೆಯ ವರದಿ. ಕೋವಿಡ್‌ ದೃಢಪಡುವ ಪ್ರಮಾಣ ಶೇ 5ರಷ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆ ಇದೆ ಎಂಬ ಅಂಕಿ–ಅಂಶಗಳನ್ನು ಆರೋಗ್ಯ ಇಲಾಖೆ ಮುಂದಿಡುತ್ತಿದೆ. ಇದರಿಂದ ಆಮ್ಲಜನಕ ಘಟಕ ಹಾಗೂ ರೆಮ್‌ಡಿಸಿವಿರ್‌ ಚುಚ್ಚುಮದ್ದು ಸೇರಿ ಇತರ ಸೌಲಭ್ಯಗಳು ಕೈತಪ್ಪುತ್ತಿವೆ ಎಂಬುದು ಖಾಸಗಿ ಆಸ್ಪತ್ರೆಯ ವೈದ್ಯರ ಆರೋಪ.

ಬಿ.ಶ್ರೀರಾಮುಲು ಅವರು ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಆಮ್ಲಜನಕ ಘಟಕ ಸ್ಥಾಪನೆಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೂ ಪ್ರಸ್ತಾವ ಸಲ್ಲಿಸಲಾಗಿತ್ತು. ಮೊದಲೇ ಗುರುತಿಸಿದ ಸ್ಥಳದಲ್ಲಿ ಘಟಕ ಸ್ಥಾಪನೆಗೆ ಅನುಮತಿ ಸಿಗುವ ನಿರೀಕ್ಷೆ ಇತ್ತು. ಈ ಕನಸು ಕೈಗೂಡುತ್ತಿಲ್ಲ ಎಂಬುದು ಕೋಟೆನಾಡ ಜನರ ಬೇಸರ.

‘ಚಿತ್ರದುರ್ಗ ಎಲ್ಲಿದೆ ಸ್ವಾಮಿ?’

ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಫೇಸ್‌ಬುಕ್‌ ಪುಟದಲ್ಲಿ ಆದೇಶ ಪ್ರತಿಯನ್ನು ಹಂಚಿಕೊಂಡು ಸ್ವಾಗತ ಕೋರಿರುವುದು ಅಸಮಾಧಾನ ವ್ಯಕ್ತವಾಗಿದೆ. ‘ಮಂಜೂರಾತಿ ಪಟ್ಟಿಯಲ್ಲಿ ಚಿತ್ರದುರ್ಗ ಎಲ್ಲಿದೆ ಸ್ವಾಮಿ’ ಎಂದು ಜನರು ಪ್ರಶ್ನೆ ಮಾಡಿದ್ದಾರೆ.

‘ನೀವು ಹೆಸರಿಗಷ್ಟೇ ಉಸ್ತುವಾರಿ ಸಚಿವರು, ಕನಿಷ್ಠ ಒಂದು ಘಟಕವನ್ನಾದರೂ ಮಂಜೂರು ಮಾಡಿಸಲು ಆಗಲಿಲ್ಲವಾ’ ಎಂದು ಧನು ಯಾದವ್‌ ಎಂಬುವರು ಕೇಳಿದ್ದಾರೆ. ‘ಚಿತ್ರದುರ್ಗದಲ್ಲಿ ಕೊರೊನಾ ಸೋಂಕು ಇಲ್ಲವಲ್ಲಾ ಸಚಿವರೇ’ ಎಂದು ದಾಸೇಗೌಡ ಎಂಬುವರು ಕುಟುಕಿದ್ದಾರೆ. ಸಚಿವರ ಉಸ್ತುವಾರಿ ಜಿಲ್ಲೆಗೆ ಘಟಕ ಕೈತಪ್ಪಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರಧಾನಿಗೆ ಪತ್ರ ಬರೆದ ಸಂಸದ

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಹಾಗೂ ಮೊಳಕಾಲ್ಮುರು ತಾಲ್ಲೂಕು ಆಸ್ಪತ್ರೆಯ ಆವರಣದಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ ಮಾಡುವಂತೆ ಕೋರಿ ಸಂಸದ ಎ.ನಾರಾಯಣಸ್ವಾಮಿ ಅವರು ಪ್ರಧಾನಿ, ಕೇಂದ್ರ ಆರೋಗ್ಯ ಸಚಿವ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

‘ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳ ಸಂಖ್ಯೆ ದಿನಗಳೆದಂತೆ ಹೆಚ್ಚಾಗುತ್ತಿದೆ. ಆಮ್ಲಜನಕ ಸೌಲಭ್ಯದ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಪ್ರಾಣವಾಯು ಪೂರೈಸುವುದು ಕಷ್ಟವಾಗುತ್ತಿದೆ. ಎರಡು ಆಮ್ಲಜನಕ ಘಟಕ ಮಂಜೂರು ಮಾಡಿದರೆ ಅನುಕೂಲವಾಗಲಿದೆ’ ಎಂದು ಪತ್ರದಲ್ಲಿ ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು