ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಟಿ ಮನೆ ದೋಚುತ್ತಿದ್ದ ಕಳ್ಳ ಸೆರೆ

₹ 15 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
Last Updated 12 ನವೆಂಬರ್ 2020, 11:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೆಲಸ ಕೇಳುವ ನೆಪದಲ್ಲಿ ಒಂಟಿ ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ ಆರೋಪಿಯನ್ನು ಚಿಕ್ಕಜಾಜೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹ 15 ಲಕ್ಷ ಮೌಲ್ಯದ 305 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಕೊರಟಿಕೆರೆ ಗ್ರಾಮದ ನಾಗರಾಜಪ್ಪ (45) ಬಂಧಿತ ಆರೋಪಿ. ಈತನ ವಿರುದ್ಧ ಚನ್ನಗಿರಿ, ಹೊಳೆಹೊನ್ನೂರು, ಚಿಕ್ಕಜಾಜೂರು ಹಾಗೂ ಹೊಳಲ್ಕೆರೆ ಠಾಣಾ ವ್ಯಾಪ್ತಿಯಲ್ಲಿ ಹಲವು ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.

‘ಹೊಳಲ್ಕೆರೆ ತಾಲ್ಲೂಕಿನ ಕೊಡಗವಳ್ಳಿಯ ಪರಮೇಶ್ವರಪ್ಪ ಅವರು ಸೆ.22ರಂದು ತೋಟದ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಿಂದ ಮರಳಿದಾಗ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ₹ 70 ಸಾವಿರ ನಗದು ಕಳವಾಗಿದ್ದು ಗಮನಕ್ಕೆ ಬಂದಿತ್ತು. ಈ ಬಗ್ಗೆ ಅವರು ಚಿಕ್ಕಜಾಜೂರು ಠಾಣೆಗೆ ದೂರು ನೀಡಿದ್ದರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಕೂಲಿ ಕೆಲಸ ಮಾಡಿಕೊಂಡಿದ್ದ ನಾಗರಾಜಪ್ಪ ಕಳವು ಕೃತ್ಯದಲ್ಲಿ ತೊಡಗಿಕೊಂಡಿದ್ದ. ಒಂಟಿ ಮನೆಗಳನ್ನು ಹುಡುಕುವ ಆರೋಪಿ, ಕೂಲಿ ಕೆಲಸ ಕೇಳುವ ನೆಪದಲ್ಲಿ ಮನೆಗೆ ತೆರಳುತ್ತಿದ್ದ. ಮನೆಯಲ್ಲಿ ಯಾರಾದರೂ ಇದ್ದರೆ ಕೂಲಿ ಕೆಲಸ ನೀಡುವಂತೆ ಅಂಗಲಾಚುತ್ತಿದ್ದ. ಮನೆಯ ಬೀಗ ಹಾಕಿದ್ದು ಖಚಿತವಾದರೆ ಚಿನ್ನಾಭರಣ ಸೇರಿ ಅಪಾರ ಮೌಲ್ಯದ ವಸ್ತುಗಳನ್ನು ದೋಚುತ್ತಿದ್ದ. ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಆರೋಪಿ, ಜಾಮೀನು ಪಡೆದು ಮತ್ತೆ ಇದೇ ಕೃತ್ಯದಲ್ಲಿ ತೊಡಗುತ್ತಿದ್ದ’ ಎಂದು ವಿವರಿಸಿದರು.

ಇಬ್ಬರು ಬೈಕ್‌ ಕಳ್ಳರ ಬಂಧನ

ದೇಗುಲದ ಹುಂಡಿ ಹಾಗೂ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಹೊಸದುರ್ಗ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಹೊಸದುರ್ಗ ಪಟ್ಟಣದ ಕರುಣ ಅಲಿಯಾಸ್‌ ಕರ್ಣ (18) ಹಾಗೂ ಪ್ರೇಮಕುಮಾರ್‌ (19) ಬಂಧಿತರು. ಆರೋಪಿಗಳಿಂದ ₹ 6 ಲಕ್ಷ ಮೌಲ್ಯದ ಐದು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

‘ಹೊಸದುರ್ಗ ಪಟ್ಟಣದ ಹಿರಿಯೂರು ರಸ್ತೆಯಲ್ಲಿ ನ.11ರಂದು ದ್ವಿಚಕ್ರ ವಾಹನದಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಆರೋಪಿಗಳನ್ನು ಹಿಡಿದು ಪ್ರಶ್ನಿಸಿದಾಗ ಬೈಕ್‌ ಕಳವು ಪ್ರಕರಣ ಬೆಳಕಿಗೆ ಬಂದಿವೆ. ಹೊಸದುರ್ಗ ತಾಲ್ಲೂಕು ಹಾಗೂ ಬೆಂಗಳೂರಿನ ಹಲವೆಡೆ ಕಳವು ಮಾಡಿದ್ದ ಪ್ರಕರಣಗಳು ತನಿಖೆ ವೇಳೆ ಗೊತ್ತಾಗಿವೆ’ ಎಂದು ಎಸ್‌ಪಿ ಜಿ.ರಾಧಿಕಾ ತಿಳಿಸಿದರು.

‘ಕುಟುಂಬದಿಂದ ದೂರ ಉಳಿದಿದ್ದ ಆರೋಪಿಗಳು ಕಳವು ಕೃತ್ಯಕ್ಕೆ ಇಳಿದಿದ್ದರು. ಬಾಲಕರಾಗಿದ್ದಾಗಲೇ ಪೊಲೀಸರಿಗೆ ಸಿಕ್ಕಿಬಿದ್ದು ವಿಕ್ಷಣಾಲಯ ಸೇರಿದ್ದರು. ಭದ್ರತಾ ಸಿಬ್ಬಂದಿಯನ್ನು ಕೋಣೆಯಲ್ಲಿ ಕೂಡಿಹಾಕಿ ಪರಾರಿಯಾಗಿ ಮತ್ತೆ ಕೃತ್ಯದಲ್ಲಿ ತೊಡಗಿಕೊಂಡಿದ್ದರು’ ಎಂದು ವಿವರಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ, ಡಿವೈಎಸ್‌ಪಿ ಪಾಂಡುರಂಗ, ಸಿಪಿಐ ಕೆ.ಎನ್‌.ರವೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT