ಮಂಗಳವಾರ, ಜನವರಿ 26, 2021
ಬೀಜೋತ್ಪಾದನೆ ಜತೆ ಜೇನುಕೃಷಿ ಅಳವಡಿಸಿಕೊಳ್ಳಲು ಕೃಷಿ ಅಧಿಕಾರಿ ಸಲಹೆ

150 ಎಕರೆಯಲ್ಲಿ ಈರುಳ್ಳಿ ಬೀಜೋತ್ಪಾದನೆ

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ಈರುಳ್ಳಿ ಬೀಜೋತ್ಪಾದನೆಯಲ್ಲಿ ಜಿಲ್ಲೆಯ ಗಮನ ಸೆಳೆದಿರುವ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಈ ಬಾರಿ ಹಿಂಗಾರು ಹಂಗಾಮಿನಲ್ಲಿ 150 ಎಕರೆ ಪ್ರದೇಶದಲ್ಲಿ ಬೀಜೋತ್ಪಾದನೆ ಕಾರ್ಯ ನಡೆಯುತ್ತಿದೆ.

ಕಸಬಾ ಹೋಬಳಿಯು ಬೀಜೋತ್ಪಾದನೆಗೆ ಹೆಸರು ವಾಸಿಯಾಗಿದೆ. ಹೋಬಳಿ ವ್ಯಾಪ್ತಿಯ ಹಾನಗಲ್, ಕಾಟನಾಯಕನಹಳ್ಳಿ, ಕೋನಸಾಗರ, ದೇವರಗುಡ್ಡ, ಪೂಜಾರಿಹಟ್ಟಿ, ರಾಯಾಪುರ, ಸೂಲೇನ ಹಳ್ಳಿಯ ಸುತ್ತಮುತ್ತ ಬೀಜೋತ್ಪಾದನೆ ಮಾಡಲಾಗುತ್ತಿದೆ. ಮುಂಗಾರು ಹಂಗಾಮಿನ ಈರುಳ್ಳಿ ಕಟಾವು ನಂತರ ಈ ಬೀಜೋತ್ಪಾದನೆ ಕಾರ್ಯವನ್ನು ಈ ಪ್ರದೇಶದಲ್ಲಿ ಮಾಡಲಾಗುತ್ತಿದೆ ಎಂದು ತೋಟಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ.

‘ಕಳೆದ 2–3 ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಬೀಜೋತ್ಪಾದನೆ ಮಾಡಲಾಗುತ್ತಿದೆ. ಪ್ರತಿ ಎಕರೆಗೆ ಆರೋಗ್ಯ ಪೂರ್ಣವಾಗಿ 4ರಿಂದ 4.5 ಕ್ವಿಂಟಲ್ ಬೀಜ ಉತ್ಪತ್ತಿಯಾಗುತ್ತದೆ. ಪ್ರಸ್ತುತ ಪ್ರತಿ ಕೆ.ಜಿ ಬೀಜಕ್ಕೆ ₹ 600ರಿಂದ ₹ 700 ಇದೆ’ ಎಂದು ತಾಲ್ಲೂಕು ತೋಟಗಾರಿಕಾ ಅಧಿಕಾರಿ ಆರ್.ವಿರೂಪಾಕ್ಷಪ್ಪ ಮಾಹಿತಿ ನೀಡಿದರು.

‘ಗುಡ್ಡದ ತಪ್ಪಲು ಪ್ರದೇಶಗಳಲ್ಲಿ ಜೇನುಹುಳುಗಳ ಮೂಲಕ ಪ್ರಕೃತಿದತ್ತವಾಗಿ ಬೀಜೋತ್ಪಾದನೆ ನಡೆಯುತ್ತದೆ. ಆದ್ದರಿಂದ ತೋಟಗಳಲ್ಲಿ ಜೇನುಸಾಕಣೆ ಮಾಡಿದರೆ ಇನ್ನೂ ಹೆಚ್ಚಿನ ಪರಾಗಸ್ಪರ್ಶ ಮಾಡಿ ಗುಣಮಟ್ಟದ ಬೀಜವನ್ನು ಪಡೆಯಬಹುದು. ಇದಕ್ಕೆ ಇಲಾಖೆಯಲ್ಲಿ ₹ 3,200 ಸಹಾಯಧನ ಹಾಗೂ ಜೇನುಹುಳು ನೀಡುವ ಯೋಜನೆ ಸಹ ಲಭ್ಯವಿದ್ದು, ಅದನ್ನು ಬಳಸಿಕೊಳ್ಳಲು ಮುಂದಾಗಬೇಕು’ ಎಂದು ಹೇಳಿದರು.

‘ಇಲ್ಲಿಂದ ಬೀಜವನ್ನು ಪ್ರಮುಖವಾಗಿ ಚಿಕ್ಕಮಗಳೂರು, ಬಳ್ಳಾರಿ, ದಾವಣಗೆರೆ, ತುಮಕೂರು ಭಾಗಕ್ಕೆ ಕಳುಹಿಸಲಾಗುತ್ತದೆ. ಜಿಲ್ಲೆಯ ವಿವಿಧ ಕಡೆಯಿಂದ ಇಲ್ಲಿಗೆ ಬಂದು ಬೀಜವನ್ನು ಕೊಂಡುಕೊಳ್ಳುತ್ತಾರೆ. ಬಳ್ಳಾರಿ ಮಾರುಕಟ್ಟೆಯಲ್ಲಿ ಮೊಳಕಾಲ್ಮುರು ತಾಲ್ಲೂಕಿನ ಈರುಳ್ಳಿ ಬೀಜಕ್ಕೆ ಹೆಚ್ಚಿನ ಬೇಡಿಕೆಯಿದೆ. ಗುಣಮಟ್ಟ ಮುಖ್ಯ ಕಾರಣವಾಗಿದೆ. ನೀರಾವರಿ ಕೃಷಿಯಲ್ಲಿ ಮುಂಗಾರು ಹಂಗಾಮಿನಲ್ಲಿ ತರಕಾರಿ ಬೆಳೆಗಳನ್ನು ಬೆಳೆಯುವ ಬದಲು ಸ್ವಲ್ಪ ಲಾಭದಾಯಕ ಕೃಷಿಯಾಗಿ ಬೀಜೋತ್ಪಾದನೆ ಹೊರಹೊಮ್ಮಿದೆ’ ಎಂದು ವಿರೂಪಾಕ್ಷಪ್ಪ ಹೇಳಿದರು.

ಪ್ರಸಕ್ತ ವರ್ಷ ನಾಟಿ ಮಾಡಿರುವ ಬೀಜೋತ್ಪಾದನೆ ಗಿಡಗಳು 45 ದಿನಗಳಲ್ಲಿ ಫಲ ನೀಡಲಿವೆ. ಆಗಿನ ಪರಿಸ್ಥಿತಿಗೆ ತಕ್ಕಂತೆ ಬೆಲೆಯಲ್ಲೂ ಏರಿಕೆಯಾಗುತ್ತದೆ. 5 ವರ್ಷದ ಹಿಂದೆ ₹ 1,700ರಿಂದ 2,000ದವರೆಗೆ ದಾಖಲೆ ದರಕ್ಕೆ ಮಾರಾಟವಾಗಿತ್ತು ಎಂದು ತಿಳಿದುಬಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು