ಗುರುವಾರ , ಜನವರಿ 28, 2021
23 °C

ನಿವಾರಣೆಯಾಗದ ರಾಗಿ ಖರೀದಿ ಕೇಂದ್ರದ ಸಮಸ್ಯೆ; ರೈತರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಇಲ್ಲಿನ ಎಪಿಎಂಸಿ ಆವರಣದಲ್ಲಿ ತೆರೆದಿರುವ ಸರ್ಕಾರದ ಬೆಂಬಲ ಬೆಲೆಯ ರಾಗಿ ಖರೀದಿ ಕೇಂದ್ರದಲ್ಲಿ ರೈತರ ಸಮಸ್ಯೆಗೆ ಸೋಮವಾರವೂ ಪರಿಹಾರ ಸಿಗಲಿಲ್ಲ.

ಇಲ್ಲಿನ ಅವ್ಯವಸ್ಥೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕಳೆದ ಶುಕ್ರವಾರ ನೂರಾರು ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.

‘ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು, ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿಯವರು ನಮ್ಮ ಹಿತಕಾಪಾಡಲು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ದುರದೃಷ್ಟಕರ ಸಂಗತಿ’ ಎಂದು ರೈತರು ತೀವ್ರ ಬೇಸರ ವ್ಯಕ್ತಪಡಿಸಿದರು.

‘ಪಕ್ಕದ ಕಡೂರು ತಾಲ್ಲೂಕಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡುವ ರೈತರ ನೋಂದಣಿಗೆ ಎರಡ್ಮೂರು ಕಡೆ ನೋಂದಣಿ ಕೇಂದ್ರ ತೆರೆಯಲಾಗಿದೆ. ಆದರೆ, ಜಿಲ್ಲೆಯಲ್ಲಿಯೇ ಅತಿ ಹೆಚ್ಚು ರಾಗಿ ಬೆಳೆಯುವ ಹೊಸದುರ್ಗ ತಾಲ್ಲೂಕಿನಲ್ಲಿ ಕೇವಲ ಒಂದೇ ನೋಂದಣಿ ಕೇಂದ್ರ ತೆರೆದಿರುವುದು ದುರಂತ. ಇದರಿಂದಾಗಿ ತಾಲ್ಲೂಕಿನ ಸುತ್ತ ಸುಮಾರು 30 ಕಿ.ಮೀ. ದೂರದಲ್ಲಿ ಇರುವ ಗ್ರಾಮಗಳ ರೈತರು ಹೆಸರು ನೋಂದಾಯಿಸಲು ಇಲ್ಲಿಗೆ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.

ಸೋಮವಾರ ಸಂತೆ ದಿನವಾದ್ದರಿಂದ ನಸುಕಿನಲ್ಲಿಯೇ ಬಂದಿದ್ದ ನೂರಾರು ರೈತರು ಹೆಸರು ನೋಂದಣಿಗೆ ಸರತಿ ಸಾಲಿನಲ್ಲಿ ನಿಂತರು. ಬೆಳಿಗ್ಗೆ 8 ಗಂಟೆ ಆಗುತ್ತಿದ್ದಂತೆ ಸಾವಿರಾರು ರೈತರು ಬಂದಿದ್ದರಿಂದ ಸರತಿ ಸಾಲು ಉದ್ದವಾಯಿತು. ಪರಿಸ್ಥಿತಿ ಹೀಗಿದ್ದರೂ ಖರೀದಿ ಕೇಂದ್ರದವರು ಒಂದೇ ಕಡೆ ಟೋಕನ್ ಕೊಡುವ, ಮತ್ತೊಂದು ಕಡೆ ನೋಂದಣಿ ಮಾಡಿಕೊಳ್ಳುವ ಕೆಲಸ ಮಾಡಿದರು. ಈ ನಡುವೆ ವಿದ್ಯುತ್ ಹಾಗೂ ಸರ್ವರ್ ಸಮಸ್ಯೆ ಉಂಟಾಗುತ್ತಿತ್ತು. ಇದರಿಂದಾಗಿ ನಸುಕಿನಲ್ಲಿ ಬಂದವರು ಮಧ್ಯಾಹ್ನ 1 ಗಂಟೆ ಆದರೂ ನೋಂದಣಿ ಮಾಡಿಸಲು ಸಾಧ್ಯವಾಗಲಿಲ್ಲ ಎಂದು ರೈತರಾದ ಬಸವರಾಜಪ್ಪ, ಹನುಮಂತಪ್ಪ, ಕುಮಾರ್, ನಿಂಗಪ್ಪ, ನಾಗರಾಜು, ಕರಿಬಸಪ್ಪ ಹೇಳಿದರು.

ಸರತಿ ಸಾಲು ಬಿಟ್ಟು ಹೋದರೆ ನೋಂದಣಿ ತಡವಾಗುತ್ತದೆ ಎಂದು ಹಲವು ರೈತರು ನೀರು, ಊಟ ಬಿಟ್ಟು ಸಾಲಿನಲ್ಲಿ ನಿಂತರು. ಸೋತು ಸುಸ್ತಾದ ರೈತರು ನಿಟ್ಟುಸಿರು ಬಿಡುತ್ತ ಕುಳಿತುಕೊಂಡು ಮುಂದೆ ಸಾಗಿದರು.

‘ಇಲ್ಲಿನ ಸ್ಥಿತಿ ಹೀಗಿದ್ದರೂ ನಮ್ಮ ಸಮಸ್ಯೆ ಆಲಿಸಲು ಯಾವುದೇ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಬಂದಿಲ್ಲ. ಎರಡು ಟೋಕನ್ ವಿತರಣೆ ಹಾಗೂ ನೋಂದಣಿ ವಿಭಾಗ ತೆರೆಯಬೇಕು. ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು