ಸೋಮವಾರ, ಜೂನ್ 21, 2021
27 °C
ವೈದ್ಯಕೀಯ ಆಮ್ಲಜನಕದ ಟ್ಯಾಂಕರ್‌ ಏಳು ಗಂಟೆ ವಿಳಂಬ, ಜಿಲ್ಲಾಡಳಿತ ಹೈರಾಣು

ಚಿತ್ರದುರ್ಗದ ಕೋವಿಡ್‌ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ: ಪರದಾಡಿದ ಸೋಂಕಿತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಕೋವಿಡ್‌ಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ ಕೊರತೆ ಉಂಟಾಗಿ ಪರದಾಡುವ ಪರಿಸ್ಥಿತಿ ಗುರುವಾರ ನಿರ್ಮಾಣವಾಗಿತ್ತು. ಆಮ್ಲಜನಕದ ಸಿಲಿಂಡರ್‌ಗಳನ್ನು ಹೊಂದಿಸಿ ಅಗತ್ಯ ಇರುವ ಆಸ್ಪತ್ರೆಗಳಿಗೆ ಒದಗಿಸಲು ಜಿಲ್ಲಾಡಳಿತ ಹೈರಾಣಾಯಿತು.

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಉಂಟಾಗಿತ್ತು. ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆಚ್ಚುವರಿಯಾಗಿದ್ದ ಬಂಜೂ ಸಿಲಿಂಡರ್‌ಗಳನ್ನು ತರಿಸಿ ರೋಗಿಗಳಿಗೆ ಪ್ರಾಣವಾಯು ನೀಡಲಾಯಿತು. ರೋಗಿಗಳು, ಅವರ ಸಂಬಂಧಿಕರು ಹಾಗೂ ಆಸ್ಪತ್ರೆಯ ಸಿಬ್ಬಂದಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಸಕಾಲಕ್ಕೆ ಪ್ರಾಣವಾಯುವ ಪೂರೈಕೆ ಆಗದೇ ಜಿಲ್ಲಾ ಆಸ್ಪತ್ರೆಯಲ್ಲಿ ಸೋಂಕಿತರ ಸಂಬಂಧಿಕರು ಆಕ್ರೋಶ ಹೊರಹಾಕಿದರು. ಆಸ್ಪತ್ರೆಯ ಸಿಬ್ಬಂದಿಯ ವಿರುದ್ಧ, ಆಡಳಿತದ ಕಾರ್ಯವೈಖರಿಯ ಬಗ್ಗೆ ಕಿಡಿಕಾರಿದರು. ಆಮ್ಲಜನಕ ಸೌಲಭ್ಯದಲ್ಲಿದ್ದ ರೋಗಿಗಳಿಗೆ ಗಾಳಿಬೀಸಿ ಸಂಕಟ ತೋಡಿಕೊಂಡರು. ಮಧ್ಯಾಹ್ನ 1 ಗಂಟೆಗೆ ಆಮ್ಲಜನಕದ ಟ್ಯಾಂಕರ್ ಜಿಲ್ಲಾ ಆಸ್ಪತ್ರೆಗೆ ಬಂದ ಬಳಿಕ ಆತಂಕ ದೂರವಾಯಿತು.

ಏಳು ಗಂಟೆ ವಿಳಂಬ

ಜಿಲ್ಲಾ ಆಸ್ಪತ್ರೆಗೆ ನಿತ್ಯ ಮೂರು ಸಾವಿರ ಆಮ್ಲಜನಕದ ಅಗತ್ಯವಿದೆ. ದಾವಣಗೆರೆ ಜಿಲ್ಲೆಯ ಹರಿಹರದ ಸದರನ್‌ ಗ್ಯಾಸ್‌ ಏಜೆನ್ಸಿಯಿಂದ ಇಲ್ಲಿಗೆ ಪ್ರಾಣವಾಯು ಪೂರೈಕೆ ಆಗುತ್ತದೆ. ಆಮ್ಲಜನಕ ಹೊತ್ತು ಗುರುವಾರ ಬೆಳಿಗ್ಗೆ 6ಕ್ಕೆ ಬರಬೇಕಿದ್ದ ಟ್ಯಾಂಕರ್ ಸಕಾಲಕ್ಕೆ ಬರುವುದಿಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ, ನಸುಕಿನಂದಲೇ ಆಮ್ಲಜನಕಕ್ಕೆ ಪರದಾಟ ಉಂಟಾಯಿತು.

‘ಆಮ್ಲಜನಕದ ಟ್ಯಾಂಕರ್‌ ಬರುವುದು ವಿಳಂಬವಾಯಿತು. ತುರ್ತು ಸಂದರ್ಭಕ್ಕೆ ಇಟ್ಟುಕೊಂಡಿದ್ದ 45 ಸಿಲಿಂಡರ್‌ಗಳು ನೆರವಿಗೆ ಬಂದವು. ಹೀಗಾಗಿ, ಯಾವುದೇ ತೊಂದರೆ ಉಂಟಾಗಲಿಲ್ಲ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ ತಿಳಿಸಿದರು.

ಖಾಸಗಿ ಆಸ್ಪತ್ರೆ ನಿರ್ಲಕ್ಷ್ಯ

ಚಿತ್ರದುರ್ಗದ ಆರು ಖಾಸಗಿ ಆಸ್ಪತ್ರೆಗಳು ಕೋವಿಡ್‌ಗೆ ಚಿಕಿತ್ಸೆ ನೀಡುತ್ತಿವೆ. ಈ ಆಸ್ಪತ್ರೆಗಳಿಗೂ ಹರಿಹರದ ಏಜೆನ್ಸಿಯಿಂದ ಪ್ರಾಣವಾಯು ಪೂರೈಕೆ ಆಗಬೇಕು. ಬುಧವಾರ ಸಂಜೆಯೇ ಆಮ್ಲಜನಕ ತರಲು ಹೋಗಿದ್ದ ವಾಹನಗಳಿಗೆ ಏಜೆನ್ಸಿ ಆದ್ಯತೆ ನೀಡಿಲ್ಲ. ನಿರ್ಲಕ್ಷ್ಯಕ್ಕೆ ಒಳಗಾದ ಖಾಸಗಿ ಆಸ್ಪತ್ರೆಗಳು ಈ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ.

‘ಬುಧವಾರ ಸಂಜೆ ವಾಹನ ಕಳುಹಿಸಿದ್ದೆವು. ಸರ್ಕಾರಿ ಆಸ್ಪತ್ರೆಗೆ ಪೂರೈಸಿದ ಬಳಿಕ ಖಾಸಗಿ ಆಸ್ಪತ್ರೆಗೆ ನೀಡುವುದಾಗಿ ಏಜೆನ್ಸಿ ತಿಳಿಸಿತು. ರಾತ್ರಿ ಕಳೆದರೂ ಆಮ್ಲಜನಕ ಸರಬರಾಜು ಆಗಲಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದೆವು. ತಾಲ್ಲೂಕು ಆಸ್ಪತ್ರೆಯಲ್ಲಿ ತುರ್ತು ಸಂದರ್ಭಕ್ಕೆ ಮೀಸಲಿಟ್ಟ ಜಂಬೂ ಸಿಲಿಂಡರ್‌ಗಳನ್ನು ತರಿಸಿಕೊಟ್ಟರು. ಹೀಗಾಗಿ, ರೋಗಿಗಳ ಪ್ರಾಣ ಉಳಿಯಿತು’ ಎಂದು ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.

ಕೈಚಲ್ಲಿದ ಏಜೆನ್ಸಿ

ಪ್ರಾಣವಾಯುವ ಪೂರೈಸುವ ಹೊಣೆ ಹೊತ್ತಿರುವ ಹರಿಹರದ ಸದರನ್‌ ಗ್ಯಾಸ್‌ ಏಜೆನ್ಸಿ ಅಸಹಾಯಕತೆ ವ್ಯಕ್ತಪಡಿಸಿದೆ. ಬೇಡಿಕೆಗೆ ಅನುಗುಣವಾಗಿ ಆಮ್ಲಜನಕ ಪೂರೈಕೆ ಆಗುತ್ತಿಲ್ಲ ಎಂಬ ಸಬೂಬು ನೀಡಿದೆ. ಇದರಿಂದ ಜಿಲ್ಲಾಡಳಿತ ಕೂಡ ಆತಂಕಕ್ಕೆ ಒಳಗಾಗಿತ್ತು. ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು ಪ್ರಾಣವಾಯು ಕೊರತೆ ನೀಗಿಸಲು ಶ್ರಮಪಡಬೇಕಾಯಿತು.

‘ಆಮ್ಲಜನಕ ಪೂರೈಕೆ ಆಗುವಲ್ಲಿ ವ್ಯತ್ಯಯ ಉಂಟಾಗಿದ್ದು ನಿಜ. ಇರುವ ಸಿಲಿಂಡರ್‌ಗಳಲ್ಲಿಯೇ ನಿರ್ವಹಣೆ ಮಾಡಲಾಗಿದೆ. ಎಲ್ಲಿಯೂ ತೊಂದರೆ ಉಂಟಾಗಿಲ್ಲ. ಹಿರಿಯೂರು ಸಾರ್ವಜನಿಕ ಆಸ್ಪತ್ರೆಯ ರೋಗಿಯೊಬ್ಬರು ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ಅವರ ಸಾವಿಗೆ ನಿಖರ ಮಾಹಿತಿಯನ್ನು ವೈದ್ಯರು ನೀಡಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಹೇಳಿದರು.

ಚಿಕಿತ್ಸೆ ಕೈಬಿಡಲು ಆಲೋಚನೆ

ಕೋವಿಡ್‌ಗೆ ಚಿಕಿತ್ಸೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳು ಆಮ್ಲನಕ ಹಾಗೂ ರೆಮ್‌ಡಿಸಿವಿರ್ ಚುಚ್ಚುಮದ್ದು ಕೊರತೆಯ ಕಾರಣಕ್ಕೆ ಚಿಕಿತ್ಸೆಯಿಂದಲೇ ಹಿಂದೆ ಸರಿಯಲು ಒಲವು ತೋರಿವೆ. ಜಿಲ್ಲಾಡಳಿತದ ಬಳಿ ಈ ಇಂಗಿತವನ್ನು ವ್ಯಕ್ತಪಡಿಸಿವೆ.

‘ಆಮ್ಲಜನಕ ಹಾಗೂ ರೆಮ್‌ಡಿಸಿವಿರ್‌ ಚುಚ್ಚುಮದ್ದಿಗೆ ಸರ್ಕಾರವನ್ನು ಅವಲಂಬಿಸಬೇಕಾಗಿದೆ. ಸರಿಯಾದ ಸಮಯಕ್ಕೆ ಇವು ಸಿಗುತ್ತಿಲ್ಲ. ಹಲವು ಅಧಿಕಾರಿಗಳ ಬಳಿ ಅಲವತ್ತುಕೊಂಡರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ, ಕೋವಿಡ್‌ ಚಿಕಿತ್ಸೆ ಕೈಬಿಡಲು ಆಲೋಚಿಸುತ್ತಿದ್ದೇವೆ’ ಎಂದು ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಆಸ್ಪತ್ರೆಗೆ ಶಾಸಕ ಭೇಟಿ

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಜಿಲ್ಲಾ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಕೋವಿಡ್ ರೋಗಿಗಳ ಸಂಬಂಧಿಕರ ಸಮಸ್ಯೆಗಳನ್ನು ಆಲಿಸಿದರು. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಹಾಗೂ ಸರಿಯಾಗಿ ಸ್ಪಂದಿಸುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್‌.ಜೆ.ಬಸವರಾಜಪ್ಪ ಅವರಿಗೆ ಸೂಚಿಸಿದರು.

‘ಜಿಲ್ಲಾ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ವೈದ್ಯರು, ಶುಶ್ರೂಷಕರು ರೋಗಿಗಳಿಗೆ ಸಕಾಲಕ್ಕೆ ಸ್ಪಂದಿಸುತ್ತಿಲ್ಲ. ರೆಮ್‌ಡಿಸಿವಿರ್ ಚುಚ್ಚುಮದ್ದು ನೀಡುತ್ತಿಲ್ಲ. ಆಮ್ಲಜನಕ ಪೂರೈಕೆಯಲ್ಲಿ ತೊಂದರೆ ಉಂಟಾಗುತ್ತಿದೆ ಎಂಬುದಾಗಿ ರೋಗಿಗಳು ದೂರುಗಳನ್ನು ಸಲ್ಲಿಸಿದ್ದಾರೆ’ ಎಂದು ಶಾಸಕ ರಘುಮೂರ್ತಿ ಮಾಹಿತಿ ನೀಡಿದರು.

***

ನಿಗದಿತ ಸಮಯಕ್ಕೆ ಆಮ್ಲಜನಕದ ಪೂರೈಕೆ ಆಗದೇ ಪ್ರಾಣವಾಯು ಕೊರತೆ ಉಂಟಾಗಿತ್ತು. ಆದರೆ, ಇದನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ಯಾವುದೇ ಪ್ರಾಣಹಾನಿ ಉಂಟಾಗಿಲ್ಲ.

-ಕವಿತಾ ಎಸ್.ಮನ್ನಿಕೇರಿ, ಜಿಲ್ಲಾಧಿಕಾರಿ

***

ಏಜೆನ್ಸಿ ಖಾಸಗಿ ಆಸ್ಪತ್ರೆ ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ಚರ್ಚೆ ಆಗಿದೆ. ಏಜೆನ್ಸಿಯ ಮುಖ್ಯಸ್ಥರೊಂದಿಗೆ ಸಂಸದ ಎ.ನಾರಾಯಣಸ್ವಾಮಿ ಚರ್ಚಿಸಿದ್ದಾರೆ. ಮುಂದೆ ಈ ತೊಂದರೆ ಆಗದು.

- ಡಾ.ಸಿ.ಎಲ್‌.ಫಾಲಾಕ್ಷ, ಜಿಲ್ಲಾ ಆರೋಗ್ಯಾಧಿಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು