ಮಂಗಳವಾರ, ಜೂನ್ 28, 2022
26 °C
ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ

₹ 60 ಲಕ್ಷ ವೆಚ್ಚದಲ್ಲಿ ಆಮ್ಲಜನಕ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಪ್ರಧಾನಿ ಅವರ ಕೋವಿಡ್ ಪರಿಹಾರ ನಿಧಿಗೆ ₹ 1 ಕೋಟಿ ನೀಡಲು ತೀರ್ಮಾನಿಸಿದ್ದೆ. ಆದರೆ, ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಆಮ್ಲಜನಕ ಘಟಕ ನಿರ್ಮಿಸಿ ಎಂಬ ಕುಟುಂಬದವರ ಸಲಹೆ ಮೇರೆಗೆ ಘಟಕ ನಿರ್ಮಿಸಲಾಗುತ್ತಿದೆ’ ಎಂದು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮಲ್ಲಿಕಾರ್ಜುನ ಮತ್ತು ಹಾಲಮ್ಮ ಚಾರಿಟಬಲ್ ಟ್ರಸ್ಟ್‌ನಿಂದ ಗುರುವಾರ ನಡೆದ ‘ಆಮ್ಲಜನಕ ಘಟಕ’ದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಆಮ್ಲಜನಕ ಘಟಕದ ಕೊರತೆ ಇತ್ತು. ಅದಕ್ಕಾಗಿ ದಾವಣಗೆರೆ ಕ್ಷೇತ್ರದ ಹರಪನಹಳ್ಳಿ, ಹರಿಹರ ಹಾಗೂ ಸ್ವಂತ ಜಿಲ್ಲೆಯಾದ ಚಿತ್ರದುರ್ಗ ಸೇರಿ ಒಟ್ಟು ಮೂರು ಕಡೆ ತಲಾ ₹ 60 ಲಕ್ಷ ವೆಚ್ಚದ ಆಮ್ಲಜನಕ ಘಟಕವನ್ನು ಟ್ರಸ್ಟ್‌ನಿಂದ ನಿರ್ಮಿಸುತ್ತಿದ್ದೇವೆ’ ಎಂದರು.

‘ವರ್ಷದ 365 ದಿನವೂ ಇದನ್ನು ಉಪಯೋಗಿಸಬಹುದು. ನಿತ್ಯ 50ರಿಂದ 60 ರೋಗಿಗಳಿಗೆ ಆಮ್ಲಜನಕ ಸರಬರಾಜು ಮಾಡಲು ವ್ಯವಸ್ಥಿತವಾಗಿ ನಿರ್ಮಾಣವಾಗಲಿದೆ. ಕೋವಿಡ್ ಪರಿಸ್ಥಿತಿ ವೇಳೆ ವಿವಿಧ ಸಂಘ–ಸಂಸ್ಥೆಗಳು ಕೂಡ ನೆರವು ನೀಡಲು ಮುಂದಾಗುತ್ತಿರುವುದು ನಿಜಕ್ಕೂ ಮೆಚ್ಚುವಂಥ ವಿಚಾರ’ ಎಂದು ಹೇಳಿದರು.

ಸಚಿವ ಬಿ.ಶ್ರೀರಾಮುಲು, ‘ದಾವಣಗೆರೆಯ ಸಂಸದರು ಚಿತ್ರದುರ್ಗದಲ್ಲಿ ಘಟಕ ನಿರ್ಮಿಸಲು ಮುಂದಾಗಿರುವುದು ಸ್ವಾಗತಾರ್ಹ. ಇದು 333 ಲೀಟರ್‌ನಷ್ಟು ಸಾಮರ್ಥ್ಯ ಹೊಂದಿದೆ. ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ಇದು ಅನೇಕ ರೋಗಿಗಳ ಜೀವ ಉಳಿಸಲು ಸಹಕಾರಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಸಂಸದ ಎ.ನಾರಾಯಣಸ್ವಾಮಿ, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್, ಟಿ.ರಘುಮೂರ್ತಿ, ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಲಿಂಗಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು