ಚಳ್ಳಕೆರೆ: ತಾಲ್ಲೂಕಿನ ಹಲವೆಡೆ ಮಳೆ ಕೊರತೆಯುಂಟಾಗಿದ್ದು, ರೈತರು ಶೇಂಗಾ ಬೆಳೆ ಉಳಿಸಿಕೊಳ್ಳಲು ಹೆಣಗುತ್ತಿದ್ದಾರೆ. ಹಲವು ರೈತರು ಗೋಕಟ್ಟೆಗಳ ನೀರನ್ನು ಬೆಳೆಗಳಿಗೆ ಉಣಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಜೂನ್– ಜುಲೈ ತಿಂಗಳಲ್ಲಿ ಅಬ್ಬರಿಸಿದ ಮಳೆರಾಯ ಈಗ ದರ್ಶನ ನೀಡುತ್ತಿಲ್ಲ. ಬೇಸಿಗೆ ಮಾದರಿಯ ಬಿಸಿಲು ಬೆಳೆಗಳಿಗೆ ಕಾಟ ಕೊಡುತ್ತಿದ್ದು, ಶೇಂಗಾ ಬೆಳೆ ಬಾಡುತ್ತಿದೆ. ಒಂದು ಹಂತಕ್ಕೆ ಬೆಳೆದಿರುವ ಶೇಂಗಾ ಪೈರು ಉಳಿಸಿಕೊಳ್ಳಲು ರೈತರು ಹೆಣಗಾಡುತ್ತಿದ್ದಾರೆ.
ತಾಲ್ಲೂಕಿನ ಮೀರಾಸಾಬಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಡಪನಕುಂಟೆ ಗ್ರಾಮದ ರೈತ ಸಿದ್ದೇಶ ರೆಡ್ಡಿ ಮತ್ತು ತಿಪ್ಪೇಸ್ವಾಮಿ ಅವರು ಮೋಟರ್ ಅಳವಡಿಸಿ, ಪೈಪ್ ಮೂಲಕ ಗೋಕಟ್ಟೆಯಿಂದ ಬೆಳೆಗೆ ನೀರು ಹಾಯಿಸಿಕೊಳ್ಳುತ್ತಿದ್ದಾರೆ.
2ನೇ ಹಂತದಲ್ಲಿ ಬಿತ್ತನೆಯಾಗಿದ್ದ ಶೇಂಗಾ ಬೆಳೆ ಹೂವು ಕಟ್ಟಿದೆ. ನೆಲಕ್ಕೆ ಇಳಿದು ಚಿಕ್ಕ ಚಿಕ್ಕ ನೀರುಗಾಯಿ ಕಟ್ಟುವ ಹಂತದಲ್ಲಿದೆ. ಬೆಳೆಗೆ ಈಗ ಮಳೆಯ ಅವಶ್ಯಕತೆ ಹೆಚ್ಚಿದೆ. ಇನ್ನು 4-5 ದಿನದಲ್ಲಿ ಹಸಿ ಮಳೆ ಬಂದರೂ ಮುಕ್ಕಾಲು ಭಾಗ ಬೆಳೆ ಆಗುತ್ತದೆ ಎಂಬ ಭರವಸೆ ರೈತರದ್ದು.
‘ಎಡೆಕುಂಟೆ ಬೇಸಾಯದ ಮೂಲಕ ಗಿಡದಲ್ಲಿ ಬೆಳೆದ ಕಳೆ ಕೀಳಿಸಿದ್ದರಿಂದ ಉತ್ತಮವಾಗಿ ಬೆಳೆ ಇದೆ. ಮಳೆ ಇಲ್ಲದೆ ಬೆಳೆ ಬಿಸಿಲಿಗೆ ಬಾಡುತ್ತಿದೆ. 5 ಚೀಲ ಬಿತ್ತನೆ ಬೀಜ, ಗೊಬ್ಬರ, ಬೇಸಾಯ, ಕಳೆ ಹಾಗೂ ಕೂಲಿ ಸೇರಿ 10 ಎಕರೆಗೆ ಕನಿಷ್ಠ ₹ 2 ಲಕ್ಷ ವೆಚ್ಚ ಮಾಡಲಾಗಿದೆ. ಕಾಯಿ ಕಟ್ಟುವ ಹಂತದಲ್ಲಿ ಮಳೆ ಇಲ್ಲದ ಕಾರಣ ಬೆಳೆ ಬಾಡುತ್ತಿದೆ. ಬಾಡುತ್ತಿರುವ ಬೆಳೆ ಕಣ್ಣಿನಿಂದ ನೋಡಲಿಕ್ಕಾಗುತ್ತಿಲ್ಲ. ಕಡೇ ಪಕ್ಷ ಬಿತ್ತನೆ ಬೀಜವಾದರೂ ಸಿಕ್ಕರೂ ಸಾಕು ಎಂದು ದಿನದ ಬಾಡಿಗೆಗೆ ಯಂತ್ರ ತಂದು ಅದರ ಮೂಲಕ ಗೋ ಕಟ್ಟೆಯಲ್ಲಿನ ನೀರು ಬೆಳೆಗೆ ಹಾಯಿಸುತ್ತಿದ್ದೇವೆ’ ಎಂದು ರೈತ ದಿನೇಶ್‍ರೆಡ್ಡಿ ಹೇಳಿದರು.
‘ಭರವಸೆಯೊಂದಿಗೆ ಬಿತ್ತದ ಬೆಳೆಗೆ ಮೆಳೆಯೇ ಇಲ್ಲವಾಗಿದೆ. ಈಗ ಬೆಳೆ ಕೈಗೆ ಸಿಗುವ ನಿರೀಕ್ಷೆ ದೂರದ ಮಾತಾಗಿದೆ. ಬೀಜ ಬಿತ್ತನೆ ಹಾಗೂ ಬೇಸಾಯಕ್ಕೆ ಮಾಡಿದ ಸಾಲ ನೆನಪಿಸಿಕೊಂಡರೆ ಭಯವಾಗುತ್ತದೆ. ನಮ್ಮ ಸಂಕಷ್ಟ ಯಾರಿಗೆ ಹೇಳಬೇಕು?’ ಎಂದು ರೈತ ತಿಪ್ಪೇಸ್ವಾಮಿ ಪ್ರಶ್ನಿಸಿದರು.
ಪೂಜೆಯ ಮೊರೆ:
ಇಳೆಗೆ ಮಳೆ ಮರಳಿ ಬಂದೇ ಬರುತ್ತದೆ. ಬೆಳೆ ಬೆಳೆದು ಬರ ನಿವಾರಣೆ ಆಗುತ್ತದೆ ಎಂಬ ನಂಬಿಕೆಯಿಂದ ತಾಲ್ಲೂಕಿನ ವಿಡಪನಕುಂಟೆ ಗ್ರಾಮದ ಜನರು ದೇವರ ಪೂಜೆಯ ಮೊರೆ ಹೋಗಿದ್ದಾರೆ. ಮಳೆಗಾಗಿ ಪ್ರಾರ್ಥಿಸಿ ವಿವಿಧ ಧಾರ್ಮಿಕ ಆಚರಣೆ ಮಾಡುತ್ತಿದ್ದಾರೆ. ವಿರಾಟಪರ್ವ ಪಾರಾಯಣ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.