ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಸಿಕ್ಕರೆ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ- ಜಿಲ್ಲಾ ಘಟಕದ ಅಧ್ಯಕ್ಷ

ಹಿರಿಯೂರು ತಾಲ್ಲೂಕಿಗೆ ಬಂದ ಜೆಡಿಎಸ್ ಜನತಾ ಜಲಧಾರೆ ರಥ
Last Updated 1 ಮೇ 2022, 4:20 IST
ಅಕ್ಷರ ಗಾತ್ರ

ಹಿರಿಯೂರು: ‘ಜಿಲ್ಲೆಗೆ ಸಮಗ್ರ ನೀರಾವರಿ ಕಲ್ಪಿಸುವ ಮೂಲಕ ಬಯಲುಸೀಮೆ ಎಂದು ಕುಖ್ಯಾತಿ ಪಡೆದಿರುವ ಜಿಲ್ಲೆಯನ್ನು ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಹಸಿರು ನಾಡನ್ನಾಗಿಸುತ್ತೇವೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಯಶೋಧರ ಭರವಸೆ ನೀಡಿದರು.

ತಾಲ್ಲೂಕಿನ ವಾಣಿವಿಲಾಸಪುರಕ್ಕೆ ಶನಿವಾರ ಹೊಸದುರ್ಗದಿಂದ ಬಂದ ಜೆಡಿಎಸ್ ಜನತಾ ಜಲಧಾರೆ ರಥವನ್ನು ಬರಮಾಡಿಕೊಂಡ ನಂತರ ಅವರು ಮಾತನಾಡಿದರು.

‘ನೀರಾವರಿ ಅನುಷ್ಠಾನದ ವಿಚಾರದಲ್ಲಿ ಮಧ್ಯ ಕರ್ನಾಟಕಕ್ಕೆ ಎಲ್ಲ ಕಾಲದಲ್ಲೂ ಅನ್ಯಾಯವಾಗಿದೆ. ಜಿಲ್ಲೆಯ ಆರೂ ಸ್ಥಾನಗಳಲ್ಲಿ ಜೆಡಿಎಸ್ ಶಾಸಕರನ್ನು ಆಯ್ಕೆ ಮಾಡಿದಲ್ಲಿ ವಾಣಿವಿಲಾಸಕ್ಕೆ ಅಗತ್ಯ ಇರುವಷ್ಟು ನೀರು, ಗಾಯತ್ರಿ ಜಲಾಶಯದ ಹೂಳು ತೆಗೆದು, ತೂಬು ಎತ್ತರಿಸುವುದು, ಜಿಲ್ಲೆಯ ಎಲ್ಲ ಕೆರೆಗಳನ್ನು ಭರ್ತಿ ಮಾಡುವ ಮೂಲಕ ರೈತರು ನೆಮ್ಮದಿಯ ಬದುಕು ನಡೆಸಲು ವ್ಯವಸ್ಥೆ ಮಾಡಿಕೊಡುತ್ತೇವೆ’ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಜಯಣ್ಣ ‘ಧರ್ಮಪುರ ಕೆರೆ ತುಂಬಿಸುವಂತೆ ಅಲ್ಲಿಯ ಜನ ನೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ವಾಣಿ ವಿಲಾಸಕ್ಕೆ ಯಾವುದಾದರೂ ಮೂಲದಿಂದ ನೀರು ಹರಿಸಿ ಜಲಾಶಯ ಉಳಿಸುವಂತೆ ಆರೇಳು ದಶಕಗಳಿಂದ ಹೋರಾಟ ನಡೆಯುತ್ತಿದೆ. ಜಿಲ್ಲೆಯಲ್ಲಿ ಇದ್ದ ಏಕಮಾತ್ರ ಸಕ್ಕರೆ ಕಾರ್ಖಾನೆ ನಿಂತು ಹೋಗಿದೆ. ಇದಕ್ಕೆಲ್ಲ ಇದುವರೆಗೂ ಕ್ಷೇತ್ರದ ಹೊರಗಿನವರು ಶಾಸಕರಾಗಿ ಆಯ್ಕೆ ಆಗುತ್ತಿರುವುದು ಕಾರಣ. 2023ರ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದು ಮನವಿ ಮಾಡಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತರಾಯಪ್ಪ, ‘ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ರಾಷ್ಟ್ರೀಯ ಪಕ್ಷಗಳು ದೆಹಲಿಯ ರಿಮೋಟ್ ಕಂಟ್ರೋಲ್ ಮೂಲಕ ಕಾರ್ಯನಿರ್ವಹಿಸುವ ಕಾರಣ ನಾಡು, ನುಡಿ, ಗಡಿ, ನೀರಿನ ವಿಚಾರದಲ್ಲಿ ನ್ಯಾಯ ಕೊಡಿಸಲು ಸಾಧ್ಯವಿಲ್ಲ’ ಎಂದರು.

ರಥಯಾತ್ರೆ ಬರಮಾಡಿಕೊಳ್ಳುವಾಗ ಪಕ್ಷದ ನಿಕಟಪೂರ್ವ ಅಧ್ಯಕ್ಷ ಶಿವಪ್ರಸಾದಗೌಡ, ಶಂಕರಮೂರ್ತಿ, ಕೃಷ್ಣಮೂರ್ತಿ ಒಳಗೊಂಡಂತೆ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಇದ್ದರು.

ರಥಯಾತ್ರೆಯನ್ನು ಪೂರ್ಣಕುಂಭ ಹೊತ್ತ ಮಹಿಳೆಯರು, ಸಾಂಪ್ರದಾಯಿಕ ವೇಷ ಧರಿಸಿದ್ದ ಬಂಜಾರ ಜನಾಂಗದ ಮಹಿಳೆಯರು ಬರಮಾಡಿಕೊಂಡರೆ, ಕೋಲಾಟದವರು ಯಾತ್ರೆಯಲ್ಲಿದ್ದವರ ಗಮನ ಸೆಳೆದರು. ಪುರೋಹಿತರಿಂದ ಪೂಜೆ ಮಾಡಿಸುವ ಮೂಲಕ ವಾಣಿವಿಲಾಸ ಜಲಾಶಯದ ನೀರನ್ನು ಬಿಂದಿಗೆಯಲ್ಲಿ ಸಂಗ್ರಹಿಸಲಾಯಿತು. ವಾಣಿ ವಿಲಾಸಪುರ ಗ್ರಾಮ ದಾಟುವವರೆಗೆ ಮುಖಂಡರು, ಕಾರ್ಯಕರ್ತರು ರಥಯಾತ್ರೆಯ ಜೊತೆ ಹೆಜ್ಜೆ ಹಾಕಿದರು.

ವಾಣಿವಿಲಾಸಪುರ ದಿಂದ ಭರಮಗಿರಿ, ಬೀರೇನಹಳ್ಳಿ, ಮಾಯಸಂದ್ರ, ಹುಚ್ಚವ್ವನಹಳ್ಳಿ ಮೂಲಕ ರಥಯಾತ್ರೆ ಹಿರಿಯೂರು ಪ್ರವೇಶಿಸಿತು.

ತಾಲ್ಲೂಕು ಕಚೇರಿ ಮುಂದೆ ವಾಣಿವಿಲಾಸ ಜಲಾಶಯಕ್ಕೆ 10 ಟಿಎಂಸಿ ಅಡಿ ನೀರು ಹರಿಸುವ ಆದೇಶಕ್ಕೆ ಒತ್ತಾಯಿಸಿ 48 ದಿನಗಳಿಂದ ಧರಣಿ ನಡೆಸುತ್ತಿರುವ ರೈತಸಂಘದ ಮುಖಂಡರನ್ನು ಧರಣಿ ಸ್ಥಳದಲ್ಲಿ ಭೇಟಿ ಮಾಡಿದ ಡಿ. ಯಶೋಧರ, ಎಂ.ಜಯಣ್ಣ, ಹನುಮಂತರಾಯಪ್ಪ, ಶಿವಪ್ರಸಾದಗೌಡ ಮೊದಲಾದವರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಹಿರಿಯೂರಿನಿಂದ ಜವನಗೊಂಡನಹಳ್ಳಿ ಸಮೀಪದ ಗಾಯತ್ರಿ ಜಲಾಶಯಕ್ಕೆ ಸಾಗಿದ ರಥಯಾತ್ರೆ, ಅಲ್ಲಿ ಜಲಾಶಯದ ನೀರು ಸಂಗ್ರಹಿಸಿ, ಯಲ್ಲದಕೆರೆ ಗ್ರಾಮದಿಂದ ಹುಳಿಯಾರು ರಸ್ತೆ ಮೂಲಕ ಮರಳಿ ಹಿರಿಯೂರಿಗೆ ಬಂದು ಚಿತ್ರದುರ್ಗದ ಕಡೆ ಹೊರಟಿತು.

ಇಡೀ ರಥಯಾತ್ರೆ ಜೆಡಿಎಸ್ ಪಕ್ಷದ ಶಕ್ತಿ ಪ್ರದರ್ಶನದಂತೆ ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT