ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾರ್ಮಸಿಸ್ಟ್‌ ಮನೆಯಲ್ಲಿ ಸರ್ಕಾರಿ ಆಸ್ಪತ್ರೆಯ ಔಷಧ: ಬಂಧನ

ಜವನಗೊಂಡನಹಳ್ಳಿಯಲ್ಲಿ ಖಾಸಗಿ ಕ್ಲಿನಿಕ್‌ ನಡೆಸುತ್ತಿದ್ದ ವಿವೇಕಾನಂದ
Last Updated 23 ಮೇ 2021, 3:29 IST
ಅಕ್ಷರ ಗಾತ್ರ

ಜವನಗೊಂಡನಹಳ್ಳಿ (ಹಿರಿಯೂರು): ಗ್ರಾಮದಲ್ಲಿ ಅನಧಿಕೃತವಾಗಿ ಖಾಸಗಿಯಾಗಿ ಕ್ಲಿನಿಕ್ ನಡೆಸುತ್ತಿದ್ದ ಸರ್ಕಾರಿ ಆಸ್ಪತ್ರೆಯೊಂದರ ಫಾರ್ಮಸಿಸ್ಟ್ ಒಬ್ಬರನ್ನು ಶುಕ್ರವಾರ ರಾತ್ರಿ ಅಧಿಕಾರಿಗಳ ತಂಡ ದಾಳಿ ನಡೆಸಿ ಬಂಧಿಸಿದೆ. ಸರ್ಕಾರಿ ಆಸ್ಪತ್ರೆಗೆ ಸೇರಿದ ಸಾವಿರಾರು ರೂಪಾಯಿ ಮೌಲ್ಯದ ಸಿರಿಂಜ್, ಔಷಧಗಳನ್ನು ವಶಕ್ಕೆ ಪಡೆದಿದೆ.

ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಫಾರ್ಮಸಿಸ್ಟ್ ಆಗಿರುವ ವಿವೇಕಾನಂದ ಬಂಧಿತ ಆರೋಪಿ. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಅವರಿಗೆ ವಿವೇಕಾನಂದ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿರುವ ಮಾಹಿತಿ ಬಂದ ಕಾರಣ ತಹಶೀಲ್ದಾರ್ ಜಿ.ಎಚ್. ಸತ್ಯನಾರಾಯಣ, ಸಿಪಿಐ ರಾಘವೇಂದ್ರ, ಗ್ರಾಮಾಂತರ ಠಾಣೆ ಎಸ್ಐ ಶಶಿಕಲಾ ಅವರೊಂದಿಗೆ ಶುಕ್ರವಾರ ರಾತ್ರಿ 11.30ಕ್ಕೆ ಕ್ಲಿನಿಕ್ ಮೇಲೆ ದಾಳಿ ನಡೆಸಲಾಯಿತು.

ಆರೋಪಿಯನ್ನು ಬಂಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು, ‘ದಾಳಿಯ ವೇಳೆ ಸರ್ಕಾರಿ ಆಸ್ಪತ್ರೆಯ ಔಷಧಗಳು, ಸಿರಿಂಜ್‌ಗಳು ಲಭ್ಯವಾಗಿವೆ. ಆರೋಪಿಯು ಅಧಿಕೃತ ವೈದ್ಯರಲ್ಲದಿದ್ದರೂ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿರುವುದು, ಸರ್ಕಾರಿ ಆಸ್ಪತ್ರೆಯ ಔಷಧಗಳನ್ನು ದುರುಪಯೋಗಪಡಿಸಿಕೊಂಡು ಜನರಿಗೆ ಮಾರುವ ಮೂಲಕ ಹಣ ಗಳಿಸಿ ಸರ್ಕಾರಕ್ಕೆ ವಂಚಿಸಿರುವುದು ಕಂಡು ಬಂದಿದೆ. ಆರೋಪಿಯಿಂದ ₹ 1,36,860 ನಗದು ವಶ ಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT