ಸೋಮವಾರ, ಆಗಸ್ಟ್ 26, 2019
27 °C

ಮಾನವತ್ವದ ಜೊತೆ ಸಾಗಲು ಸಲಹೆ

Published:
Updated:
Prajavani

ಚಿತ್ರದುರ್ಗ: ಜಾತಿ ಜತೆ ಹೋದರೆ ಸಂಬಂಧಗಳು ಉಳಿಯುವುದಿಲ್ಲ. ಮಾನವತ್ವದೊಂದಿಗೆ ಸಾಗಿದರೆ ಮಾತ್ರ ಸಂಬಂಧಗಳು ಗಟ್ಟಿಯಾಗಿ ಉಳಿದುಕೊಳ್ಳುತ್ತವೆ ಎಂದು ಮುರುಘಾಮಠದ ಶಿವಮೂರ್ತಿ ಶರಣರು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ನದಾಫ್, ಪಿಂಜಾರ ಸಂಘದ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಜಲೀಲ್‍ ಸಾಬ್‍ ಅವರಿಗೆ ಸೀಬಾರ ಗುತ್ತಿನಾಡು ವಿಶ್ವಮಾನವ ಸಾಂಸ್ಕೃತಿಕ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಿದ್ದ ಪದಗ್ರಹಣ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರಸಕ್ತ ಸಮಾಜದಲ್ಲಿ ವಿಶ್ವಮಾನವರಾಗಿ ರೂಪುಗೊಳ್ಳುವುದು ದೊಡ್ಡ ಸವಾಲು. ಎಲ್ಲ ಜಾತಿ-ಧರ್ಮದವರು ಸ್ವತಂತ್ರ ಬದುಕು ಕಟ್ಟಿಕೊಳ್ಳಬೇಕಿದೆ. ಧರ್ಮ– ಜಾತಿಗಳಿಂದ ಕೂಡಿರುವ ಭಾರತದಲ್ಲಿ ಅಷ್ಟೇ ಪ್ರಮಾಣದ ಉಪ ಜಾತಿಗಳಿವೆ. ಜಾತಿ– ಧರ್ಮವನ್ನು ಮೀರಿ ಎಲ್ಲರನ್ನು ಪ್ರೀತಿಸುವ ಔದಾರ್ಯ ತೋರಬೇಕಿದೆ’ ಎಂದರು.

‘ಬಹು ಸಂಸ್ಕೃತಿಯ ದೇಶದಲ್ಲಿ ಬದುಕು ಕಟ್ಟಿಕೊಳ್ಳಲು ಅನೇಕ ಸಮುದಾಯಗಳು ಹೋರಾಟ ನಡೆಸುತ್ತಿವೆ. ಪಿಂಜಾರ ಜನಾಂಗ ಕೂಡ ಅಸ್ತಿತ್ವವನ್ನು ಉಳಿಸಿಕೊಂಡು ಸಾಗಬೇಕಿದೆ. ಪ್ರತ್ಯೇಕ ಅಭಿವೃದ್ಧಿ ನಿಗಮ ಕೇಳುತ್ತಿರುವ ಪಿಂಜಾರ ಸಮುದಾಯದೊಂದಿಗೆ ನಾವಿದ್ದೇವೆ’ ಎಂದು ಹೇಳಿದರು.

ಸಾಹಿತಿ ಷರಿಫಾಬಿ ಮಾತನಾಡಿ, ‘ಪಿಂಜಾರ ಜನಾಂಗ ಸಂಘಟನೆಗಾಗಿ 1993 ರಲ್ಲಿ ಸಂಘ ಸ್ಥಾಪಿಸಿತು. ಪಿಂಜಾರ ಜನಾಂಗ ಉರ್ದು ಭಾಷೆ ಮಾತನಾಡುವುದು ತುಂಬಾ ಕಡಿಮೆ. ಕನ್ನಡ ಭಾಷೆಗೆ ಒಗ್ಗಿಕೊಂಡಿದೆ. ‘ಪ್ರವರ್ಗ-1’ ರಲ್ಲಿರುವ ಪಿಂಜಾರ ಜನಾಂಗ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಬೆಳೆದಿಲ್ಲ. ಪಿಂಜಾರ ಸಂಘಟನೆಯ ರಥವನ್ನು ಮುಂದೆ ಎಳೆಯುವ ಅಗತ್ಯವಿದೆ’ ಎಂದರು.

ರೆವರಂಡ್ ಫಾದರ್ ಎಂ.ಎಸ್.ರಾಜು, ಪ್ರಾಧ್ಯಾಪಕ ನವಿಲೆಹಾಳ್ ದಾದಾಪೀರ್, ನಿಕಟಪೂರ್ವ ಅಧ್ಯಕ್ಷ ಎಂ.ಎಂ. ನದಾಫ್, ಮೌಲಾನ ಹಾಜಿ ಇಬ್ರಾಹಿಂ ಸಖಾಫಿ, ದಾವಣಗೆರೆ ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕ ಕೆ.ಇಮಾಮ್‍ಸಾಬ್, ಹಜರ್‍ಅಲಿ ದೊಡ್ಮನಿ, ಜೆ.ಕೆ.ಹುಸೇನ್‍ಮಿಯಾ, ಎಚ್.ಐ.ಚಿನ್ನ, ಎಚ್.ಇ.ದಾದಾಖಲಂದರ್, ಪಿಂಜಾರ ಸಂಘದ ಜಿಲ್ಲಾಧ್ಯಕ್ಷ ಗರೀಬ್‍ ಆಲಿ ಇದ್ದರು.

Post Comments (+)