ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಬಳಿ ಕೇಂದ್ರದಲ್ಲಿಲ್ಲ ಆಟದ ಮೈದಾನ; ಭರಮಸಾಗರಕ್ಕೆ ಬೇಕಿದೆ ಕ್ರೀಡಾಂಗಣ

ಭರಮಸಾಗರಕ್ಕೆ ಬೇಕಿದೆ ಕ್ರೀಡಾಂಗಣ
Last Updated 30 ಜೂನ್ 2022, 5:21 IST
ಅಕ್ಷರ ಗಾತ್ರ

ಭರಮಸಾಗರ: ಸುಸಜ್ಜಿತ ಕ್ರೀಡಾಂಗಣ ಒತ್ತಟ್ಟಿಗಿರಲಿ. ಇಲ್ಲಿ ಮಸೂರ ಹಾಕಿ ಹುಡುಕಿದರೂ ಆಟವಾಡಲು ದೊಡ್ಡದಾದ ಮೈದಾನ ಇಲ್ಲ. ಇದು ಹೋಬಳಿ ಕೇಂದ್ರವಾದ ಭರಮಸಾಗರದ ಕ್ರೀಡಾ ವ್ಯವಸ್ಥೆಯ ಸದ್ಯದ ಸ್ಥಿತಿಗತಿ. ಗ್ರಾಮೀಣ ಭಾಗದ ಪ್ರತಿಭಾವಂತ ಕ್ರೀಡಾಪಟುಗಳ ಪಾಲಿಗೆ ಕ್ರೀಡಾಂಗಣವೇ ಮರೀಚಿಕೆಯಾಗಿದೆ.

2011 ರ ಜನಗಣತಿ ಪ್ರಕಾರ ಇಲ್ಲಿನ ಜನಸಂಖ್ಯೆ 7,000ಕ್ಕಿಂತ ಹೆಚ್ಚಿದೆ. ಈಗ ಬೇರೆ ಊರುಗಳಿಂದ ವಲಸಿಗರು ಬಂದು ಇಲ್ಲಿ ನೆಲಸಿದ್ದಾರೆ. ಜನಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಸುಮಾರು 65 ಗ್ರಾಮಗಳು ಹೋಬಳಿ ವ್ಯಾಪ್ತಿಗೆ ಒಳಪಡುತ್ತವೆ. ವಿವಿಧ ಗ್ರಾಮಗಳಿಂದ ಅನೇಕ ವಿದ್ಯಾರ್ಥಿಗಳು ಪ್ರೌಢಶಿಕ್ಷಣ, ಪಿಯುಸಿ, ಪದವಿ ಶಿಕ್ಷಣಕ್ಕಾಗಿ ಹೋಬಳಿ ಕೇಂದ್ರಕ್ಕೆ ಬರುತ್ತಾರೆ. ಕ್ರೀಡಾಂಗಣ ಮತ್ತು ತರಬೇತುದಾರರ ಕೊರತೆ ನಡುವೆಯೂ ಕೆಲವು ಕ್ರೀಡಾಪಟುಗಳು ಸ್ಥಳೀಯ ಹಿರಿಯ ಆಟಗಾರರು ಹಾಗೂ ಶಿಕ್ಷಕರ ಸಲಹೆ, ಮಾರ್ಗದರ್ಶನದಿಂದ ವಾಲಿಬಾಲ್, ಬ್ಯಾಡ್ಮಿಂಟನ್, ಕೊಕ್ಕೊ, ಕ್ರಿಕೆಟ್, ಅಥ್ಲೆಟಿಕ್ಸ್‌ಗಳಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ. ಆದರೆ, ವ್ಯವಸ್ಥಿತ ಕ್ರೀಡಾಂಗಣ ಹಾಗೂ ತರಬೇತಿಯ ಕೊರತೆ ಅವರ ಕ್ರೀಡಾ ಸಾಧನೆಗೆ ಅಡ್ಡಿಯಾಗಿದೆ. ಯುವಕರು ಕ್ರೀಡೆಯ ಅಭ್ಯಾಸಕ್ಕೆ ಸರ್ಕಾರಿ ಶಾಲೆಯ ಕಿರಿದಾದ ಮೈದಾನ ಆಶ್ರಯಿಸುವುದು ಅನಿವಾರ್ಯವಾಗಿದೆ. ಇನ್ನು ಸುತ್ತಲ ಹಳ್ಳಿಗಳಲ್ಲಿನ ಕ್ರೀಡಾಸಕ್ತರಿಗೆ ಬೇಸಿಗೆ ಕಾಲದಲ್ಲಿ ಬಿತ್ತನೆ ಮಾಡದೇ ಖಾಲಿ ಇರುವ ಹೊಲಗಳೇ ಆಟದ ಮೈದಾನಗಳು. ಹೋಬಳಿ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗದ ಜನರೇ ಹೆಚ್ಚಾಗಿದ್ದಾರೆ. ಅನುಕೂಲ ಇರುವ ಕ್ರೀಡಾಪಟುಗಳು ಚಿತ್ರದುರ್ಗ, ದಾವಣಗೆರೆಗೆ ಹೋಗಿ ತರಬೇತಿ ಪಡೆಯುತ್ತಾರೆ. ಆದರೆ ಆರ್ಥಿಕ ಸಂಕಷ್ಟದಿಂದ ಜಿಲ್ಲಾ ಕೇಂದ್ರಕ್ಕೆ ಹೋಗಿ ಉತ್ತಮ ತರಬೇತಿ ಪಡೆದು ಅಭ್ಯಾಸ ಮಾಡಲಾಗದೇ ಎಷ್ಟೋ ಪ್ರತಿಭಾವಂತರ ಸಾಮರ್ಥ್ಯ ಹೋಬಳಿಗಷ್ಟೇ ಸೀಮಿತವಾಗಿ ಅವರ ಕ್ರೀಡಾ ಭವಿಷ್ಯ ಕಮರಿ ಹೋಗುತ್ತಿದೆ. ಕ್ರೀಡಾಂಗಣ ನಿರ್ಮಾಣಕ್ಕೆ ಅಗತ್ಯವಾದ ಗ್ರಾಮಠಾಣಾ ಜಾಗ ಇಲ್ಲ ಎನ್ನುವ ಕಾರಣಕ್ಕೆ ಗ್ರಾಮ ಪಂಚಾಯಿತಿಯಿಂದ ಕ್ರೀಡಾಂಗಣ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿಲ್ಲ.

ಕ್ಷೇತ್ರ ಪುನರ್ ವಿಂಗಡನೆಗೂ ಮೊದಲು ಭರಮಸಾಗರ ಮೀಸಲು ವಿಧಾನಸಭಾ ಕ್ಷೇತ್ರವಾಗಿತ್ತು. ಜನಪ್ರತಿನಿಧಿಗಳ ದೂರದೃಷ್ಟಿ, ಇಚ್ಛಾಶಕ್ತಿ ಕೊರತೆಯಿಂದ ಕ್ರೀಡಾಂಗಣ ಸೌಲಭ್ಯದಿಂದ ವಂಚಿತವಾಗಿದೆ.

ಹಿಂದೆ ಇಲ್ಲಿ ಜಮೀನು ಗಳ ಬೆಲೆ ಹೆಚ್ಚಿರಲಿಲ್ಲ. ಜಮೀನು ಖರೀದಿಸಿ ಅಥವಾ ಸೂಕ್ತ ಸರ್ಕಾರಿ ಜಾಗ ಗುರುತಿಸಿ ಕ್ರೀಡಾಂಗಣ ನಿರ್ಮಿಸುವ ಅವಕಾಶವಿತ್ತು. ಆದರೆ, ಯಾರೂ ಆ ಪ್ರಯತ್ನಕ್ಕೆ ಮುಂದಾಗಲಿಲ್ಲ. ಈಗ ಊರು ಪಟ್ಟಣದ ಸ್ವರೂಪ ಪಡೆದುಕೊಂಡಿದೆ. ತಾಲ್ಲೂಕು ಕೇಂದ್ರವನ್ನಾಗಿ ಮಾಡುವಂತೆ ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಸರ್ಕಾರದ ಯೋಜನೆಯಂತೆ ಹೋಬಳಿ ಕೇಂದ್ರದಲ್ಲಿ ಕ್ರೀಡಾಂಗಣ ನಿರ್ಮಿಸುವ ಜರೂರತ್ತಿದೆ ಎನ್ನುತ್ತಾರೆ ಗ್ರಾಮದ ಹಿರಿಯ ಕೊಕ್ಕೊ ಆಟಗಾರ ಮತ್ತು ತರಬೇತುದಾರ ಸುರೇಶ್‌ ನಾಯ್ಕ.

* ಗ್ರಾಮೀಣ ಭಾಗದ ಕ್ರೀಡಾಪಟುಗಳಲ್ಲಿ ಉತ್ತಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವಿದೆ. ಎಲ್ಲ ರೀತಿಯ ಕ್ರೀಡೆಗಳ ಅಭ್ಯಾಸಕ್ಕೆ ಪೂರಕವಾದ ಕ್ರೀಡಾಂಗಣ ನಿರ್ಮಿಸಿ ತರಬೇತಿ ಸೌಲಭ್ಯ ಕಲ್ಪಿಸಿದರೆ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ.

–ಇಲಿಯಾಸ್, ಕ್ರೀಡಾಪಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT