ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಕಿಗೆ ವನ್ಯಜೀವಿ ಬೇಟೆಯಾಡುವ ಸಿರಿವಂತರು

ಹಿರಿಯೂರು ತಾಲ್ಲೂಕಿನಲ್ಲಿ ಸಿಕ್ಕಿಬಿದ್ದ ತಂಡ, ಜಾಮೀನು ಅರ್ಜಿ ವಿಚಾರಣೆ
Last Updated 13 ಅಕ್ಟೋಬರ್ 2020, 15:03 IST
ಅಕ್ಷರ ಗಾತ್ರ

ಚಿತ್ರದುರ್ಗ: ಬೇಟೆಗೆ ಹೊಂಚು ಹಾಕಿ ಹಿರಿಯೂರು ಅರಣ್ಯ ಅಧಿಕಾರಿಗಳ ಬಲೆಗೆ ಬಿದ್ದವರು ಆರ್ಥಿಕವಾಗಿ ಸ್ಥಿತಿವಂತರು. ಬೇಟೆಯಾಡುವ ಶೋಕಿಗೆ ಮಾರುಹೋಗಿ ಜೈಲಿನ ಕಂಬಿ ಹಿಂದೆ ಕುಳಿತುಕೊಳ್ಳುವ ಪರಿಸ್ಥಿತಿಗೆ ಸಿಲುಕಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಶಿವಮೊಗ್ಗ ಹಾಗೂ ಬೆಂಗಳೂರಿನ ಐವರು ಆರೋಪಿಗಳಲ್ಲಿ ಕೆಲವರು ಉದ್ಯಮಿಗಳು. ಟ್ರ್ಯಾಕ್ಟರ್‌, ಕಾಫಿ ಎಸ್ಟೇಟ್‌ ಸೇರಿ ಹಲವು ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಕಾಡುಪ್ರಾಣಿಗಳ ಬೇಟೆಯಾಡುವ ಶೋಕಿ ಇವರಿಗೆ ಬಹುದಿನಗಳ ಹಿಂದೆ ಅಂಟಿಕೊಂಡಿದೆ. ಚಿತ್ರದುರ್ಗ, ಶಿವಮೊಗ್ಗ ಸೇರಿ ಹಲವೆಡೆ ವನ್ಯಜೀವಿ ಬೇಟೆಯಾಡಿದ ಸಾಧ್ಯತೆ ಬಗ್ಗೆ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.

‘ಕಾಡುಹಂದಿ ಬೇಟೆಯಾಡುವುದು ಚಿಕ್ಕಂದಿನಿಂದ ಹೊಂದಿದ್ದ ಕನಸು’ ಎಂದು ಆರೋಪಿಯೊಬ್ಬರು ಬರೆದ ಡೈರಿ ಅರಣ್ಯ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿದೆ. ಚಿತ್ರದುರ್ಗ, ತುಮಕೂರು ಗಡಿಭಾಗದಲ್ಲಿರುವ ಕಾಡುಹಂದಿಯನ್ನು ಈ ತಂಡ ಚಾಣಾಕ್ಷತನದಿಂದ ಬೇಟೆಯಾಡುತ್ತಿದದ್ದನ್ನು ಸ್ಥಳೀಯರು ಗಮನಿಸಿದ್ದರು. ಮೂರು ಬಾರಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಗೆ ಬೇಟೆಗಾರರ ತಂಡ ಸಿಕ್ಕಿರಲಿಲ್ಲ.

‘ಮಲೆನಾಡಿನ ಕೆಲವರಿಗೆ ಬೇಟೆಯಾಡುವುದು ಪ್ರತಿಷ್ಠೆಯ ಸಂಗತಿ. ಬೇಟೆಯಾಡಿದ ಮಾಂಸವನ್ನು ಹೆಮ್ಮೆಯಿಂದ ಸೇವೆಸುತ್ತಾರೆ. ಸ್ಥಿತಿವಂತರಾಗಿರುವ ಇವರು ಜೀವನೋಪಾಯಕ್ಕೆ ಬೇಟೆಯಾಡುತ್ತಿರಲಿಲ್ಲ. ಕಳ್ಳಸಾಗಣೆಯ ಉದ್ದೇಶವೂ ಇದರ ಹಿಂದಿದೆ ಅನಿಸುತ್ತಿಲ್ಲ. ತನಿಖೆಯ ವೇಳೆ ಎಲ್ಲವೂ ಬೆಳಕಿಗೆ ಬರಲಿದೆ’ ಎನ್ನುತ್ತಾರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ.

ಹಿರಿಯೂರು– ಹುಳಿಯಾರು ರಸ್ತೆಯ ಸೋಮೆರಹಳ್ಳಿ ಸಮೀಪದ ಫಾರ್ಮ್‌ಹೌಸ್‌ನಲ್ಲಿ ಬೇಟೆಗಾರರು ಸಿಕ್ಕಿಬಿದ್ದಿದ್ದರು. ಸ್ಥಳೀಯ ರೈತರೊಬ್ಬರಿಗೆ ಸೇರಿದ ಫಾರ್ಮ್‌ಹೌಸ್ ತಂಡದ ಕಾರ್ಯಸ್ಥಾನವಾಗಿತ್ತು. ಆಗಾಗ ಇಲ್ಲಿ ವಾಸ್ತವ್ಯ ಹೂಡುತ್ತಿದ್ದರು ಎಂಬುದು ಅರಣ್ಯ ಇಲಾಖೆಯ ಮೂಲಗಳ ಮಾಹಿತಿ.

ಗೌಡನಹಳ್ಳಿ, ದಿಂಡಾವರ, ಮಾವಿನಮಡು, ಪಿಲಾಲಿ ಹಾಗೂ ಹುಳಿಯಾರು ತಾಲ್ಲೂಕಿಗೆ ಹೊಂದಿಕೊಂಡ ಅರಣ್ಯ ಪ್ರದೇಶದಲ್ಲಿ ತಂಡ ಸಂಚರಿಸುತ್ತಿತ್ತು. ಕಾಡುಹಂದಿ, ಜಿಂಕೆ ಸೇರಿ ಹಲವು ಕಾಡುಪ್ರಾಣಿಗಳು ಈ ಅರಣ್ಯ ಪ್ರದೇಶದಲ್ಲಿವೆ. ಹೈಮಾಸ್ಟ್‌ ಲೈಟ್‌, ಟೆಲಿಸ್ಕೋಪಿಕ್‌ ಗನ್‌ ಬಳಸಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ಬೇಟೆಗೆ ತೆರಳಿದ ತಂಡ ಬರಿಗೈಯಲ್ಲಿ ಮರಳಿದ್ದು ಅಪರೂಪ ಎಂಬುದು ಸ್ಥಳೀಯರ ವಿವರಣೆ.

‘ಸ್ಕಾರ್ಪಿಯೊ ಸೇರಿ ದುಬಾರಿ ಬೆಲೆಯ ಕಾರಿನಲ್ಲಿ ಬೇಟೆಯಾಡಲು ಬರುತ್ತಿದ್ದ ತಂಡ ಅರಣ್ಯ ಪ್ರದೇಶದಲ್ಲಿ ಸಂಚರಿಸುತ್ತಿತ್ತು. ಬೇಟೆಗೆ ಅನುಕೂಲವಾಗುವ ರೀತಿಯಲ್ಲಿ ಕಾರಿನ್ನು ಮರುವಿನ್ಯಾಸ ಮಾಡಿಕೊಂಡಿದ್ದರು. ಬೇಟೆಯಾಡಿದ ಪ್ರಾಣಿಯನ್ನು ತೊಳೆದು, ಶುಚಿಗೊಳಿಸಿ ಕಾರಿನಲ್ಲಿ ಹಾಕಿಕೊಂಡು ತೆರಳುತ್ತಿದ್ದರು’ ಎಂದು ಅರಣ್ಯ ಇಲಾಖೆ ಅಧಿಕಾರಿ ವಿವರಿಸಿದ್ದಾರೆ.

ಬಂಧಿತ ಆರೋಪಿಗಳು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರಿ ಅಭಿಯೋಜಕರು ಇದಕ್ಕೆ ತಕರಾರರು ಸಲ್ಲಿಸಿದ್ದಾರೆ. ಜಾಮೀನು ಅರ್ಜಿಯ ವಿಚಾರಣೆ ಮಂಗಳವಾರ ನಡೆಯಿತು.

ಗನ್‌ಗೆ ಸೈಲೆನ್ಸರ್‌ ಅಳವಡಿಕೆ?

ದುಬಾರಿ ಬೆಲೆಯ ನಾಲ್ಕು ಟೆಲಿಸ್ಕೋಪಿಕ್‌ ಗನ್‌ಗಳಿಗೆ ಸೈಲೆನ್ಸರ್‌ ಅಳವಡಿಸಿಕೊಂಡಿರುವ ಸಾಧ್ಯತೆ ಇದೆ ಎಂಬುದು ಅರಣ್ಯ ಇಲಾಖೆಯ ಅಧಿಕಾರಿಗಳ ಶಂಕೆ.

ಆರೋಪಿಗಳ ಬಳಿ ಸಿಕ್ಕಿರುವ ಗನ್‌ಗಳಲ್ಲಿ ಕೆಲವು ವಿದೇಶದಲ್ಲಿ ತಯಾರಾಗಿವೆ. ಒಂದು ಕಿ.ಮೀ. ದೂರದ ಪ್ರಾಣಿಯನ್ನು ಬೇಟೆಯಾಡುವ ಸಾಮರ್ಥ್ಯವನ್ನು ಸ್ನೈಪರ್‌ ಹೊಂದಿದೆ. ಪ್ರಾಣಿ ಬೇಟೆಗೆ ಹಾರಿಸಿದ ಗುಂಡಿನ ಸದ್ದು ಕೇಳಬಾರದು ಎಂಬ ಉದ್ದೇಶ ಹೊಂದಿದ್ದರು ಎಂಬುದು ತನಿಖೆಯ ವೇಳೆ ಗೊತ್ತಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಆಲೋಚಿಸುತ್ತಿದೆ.

ಪ್ರಫುಲ್‌ಚಂದ್ರ ಪುತ್ರ ಸೆರೆ

ಅರಣ್ಯ ಇಲಾಖೆಗೆ ಸೆರೆಸಿಕ್ಕ ಬೇಟೆಗಾರರ ತಂಡದಲ್ಲಿ ಖ್ಯಾತ ಪ್ರಗತಿಪರ ರೈತರಾಗಿದ್ದ ಪ್ರಫುಲ್‌ ಚಂದ್ರ ಅವರ ಎರಡನೇ ಪುತ್ರ ಇಕ್ಷುಧನ್ವ ಇರುವುದು ಖಚಿತವಾಗಿದೆ.

ಶಿವಮೊಗ್ಗದ ಹೊಸಹಳ್ಳಿಯ ಫಾರ್ಮ್‌ ಹೌಸ್‌ನಲ್ಲಿ ನೆಲೆಸಿರುವ ಇವರು ಶೂಟಿಂಗ್‌ ಕ್ರೀಡೆಯ ತರಬೇತಿ ಪಡೆದಿದ್ದರು. ಕ್ರೀಡೆಯ ಉದ್ದೇಶಕ್ಕೆ ಗನ್‌ ಹೊಂದಿದ್ದಾಗಿ ವಿಚಾರಣೆಯ ವೇಳೆ ಹೇಳಿಕೊಂಡಿದ್ದಾರೆ. ಅತ್ಯಾಧುನಿಕ ಗನ್‌ಗೆ ಹೊಂದಿದ್ದ ಪರವಾನಗಿಯನ್ನು ಹಾಜರುಪಡಿಸುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT